ಒಳ್ಳೇ ಅಧಿಕಾರಿ ಆಗಿದ್ರೂ ಬೆಂಗ್ಳೂರು ಪೊಲೀಸ್‌ ಆಯುಕ್ತರ ಸಸ್ಪೆಂಡ್‌ ಏಕೆ?

KannadaprabhaNewsNetwork |  
Published : Jun 10, 2025, 02:46 AM IST
ಬಿ. ದಯಾನಂದ | Kannada Prabha

ಸಾರಾಂಶ

ಸಮರ್ಥ ಪೊಲೀಸ್ ಅಧಿಕಾರಿಯೆಂದೇ ಹೆಸರು ಗಳಿಸಿದ್ದ ಬಿ.ದಯಾನಂದ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ ನಡೆದ ದಿನ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಲು ವಿಫಲರಾದರೇ?

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಮರ್ಥ ಪೊಲೀಸ್ ಅಧಿಕಾರಿಯೆಂದೇ ಹೆಸರು ಗಳಿಸಿದ್ದ ಬಿ.ದಯಾನಂದ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ ನಡೆದ ದಿನ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಲು ವಿಫಲರಾದರೇ?

ಹೌದು ಎನ್ನುತ್ತಿವೆ ಮೂಲಗಳು. ದಯಾನಂದ್‌ ಅವರು ಆರ್‌ಸಿಬಿ ವಿಜಯೋತ್ಸವ ಆಚರಣೆ ವೇಳೆ ಪೂರ್ವಸಿದ್ಧತೆ, ಬಂದೋಬಸ್ತ್‌ ವ್ಯವಸ್ಥೆಯನ್ನು ಸೂಕ್ತವಾಗಿ ಮಾಡಿರಲಿಲ್ಲ. ಕಾಲ್ತುಳಿತ ಪ್ರಕರಣ ಆದಾಗಲೂ ಸಮಪರ್ಕವಾಗಿ ನಿಭಾಯಿಸಿಲ್ಲ. ಅವರಿಂದ ಆದ ತಪ್ಪು ಹಾಗೂ ನಿರ್ಲಕ್ಷ್ಯದಿಂದಾಗಿಯೇ ಅವರ ಮೇಲೆ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಸಿಎಂಗೆ ಅಚ್ಚುಮೆಚ್ಚಿನ ಅಧಿಕಾರಿ:

ದಯಾನಂದ್‌ ಉತ್ತಮ ಅಧಿಕಾರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಯಾನಂದ್ ಅವರು ಅಚ್ಚುಮೆಚ್ಚು. ಹೀಗಾಗಿಯೇ 2015ರಲ್ಲಿ ಎಂ.ಎ.ಸಲೀಂ ಅವರ ಬಳಿಕ ಮೈಸೂರು ನಗರ ಪೊಲೀಸ್‌ ಆಯುಕ್ತರ ಜವಾಬ್ದಾರಿಯನ್ನು ದಯಾನಂದ್‌ ಅವರಿಗೆ ನೀಡಿದ್ದರು. ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿ ಆದ ಬಳಿಕ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಹುದ್ದೆಯ ಮಹತ್ವದ ಹೊಣೆಗಾರಿಕೆ ನೀಡಿದ್ದರು. ಸರ್ಕಾರ ಹಾಗೂ ಮುಖ್ಯಮಂತ್ರಿ ನೀಡಿರುವ ಅವಕಾಶವನ್ನು ದಯಾನಂದ್‌ ಕೂಡ ಸಮರ್ಥವಾಗಿ ನಿಭಾಯಿಸಿದ್ದರು. ಆದರೆ, ಜೂ.4ರಂದು ಅವರು ಯಾಕೆ ಮಂಕಾದರು ಎಂಬುದು ಇಡೀ ಪೊಲೀಸ್ ವಲಯವನ್ನು ಕಾಡುತ್ತಿದೆ ಎನ್ನಲಾಗಿದೆ.

ದಯಾನಂದ್ ಅವರು ದಕ್ಷ, ಸಮರ್ಥ ಅಧಿಕಾರಿ. ಆದರೂ ಆರ್‌ಸಿಬಿ ವಿಜಯೋತ್ಸವ ದಿನ ಎಡವಿದರು. ಈ ಸಂಬಂಧ ಯಾವುದೇ ಪೂರ್ವ ಸಿದ್ಧತಾ ಸಭೆ ನಡೆಸಿರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆ ನಡೆಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿರಲಿಲ್ಲ. ಬಂದೋಬಸ್ತ್‌ ಕುರಿತು ಸ್ಪಷ್ಟ ನಿರ್ದೇಶನವೂ ಇರಲಿಲ್ಲ ಎಂದು ಕೆಲ ಅಧಿಕಾರಿಗಳು ದೂರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಪರೀತ ಜನದಟ್ಟಣೆ ಉಂಟಾಗುತ್ತಿರುವ ಹಾಗೂ ಪೊಲೀಸರಿಂದ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂಬುದರ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿಲ್ಲ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಮೂಲಕ ಬರುವ ಸುಳಿವು ದೊರೆತಾಗ ಮೆಟ್ರೋ ಬಂದ್‌ ಮಾಡಿಸಬಹುದಿತ್ತು. ನಗರದ ಎಲ್ಲ ದಿಕ್ಕುಗಳಲ್ಲಿ ನಿಯಂತ್ರಿಸಬಹುದಿತ್ತು. ಆದರೆ, ಕಾರ್ಯಕ್ರಮದ ದಿನ ದಯಾನಂದ್‌ ಅವರು ತಮ್ಮ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಾ ಕುಳಿತಿದ್ದರು ಎಂದು ಹೇಳಲಾಗಿದೆ.

ಮೃತರ ಮಾಹಿತಿ ಸರಿಯಾಗಿ ನೀಡಲಿಲ್ಲ:

ಎಲ್ಲದಕ್ಕಿಂತ ಮುಖ್ಯವಾಗಿ ಕಾಲ್ತುಳಿತದಿಂದ ಮಧ್ಯಾಹ್ನ 3.45 ಗಂಟೆಗೆ 11 ಮಂದಿ ಮೃತಪಟ್ಟಿದ್ದರೆ ಸರ್ಕಾರಕ್ಕೆ ಕರಾರುವಾಕ್ಕಾಗಿ ಮಾಹಿತಿ ನೀಡಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಬ್ಬರು ಮಾತ್ರ ಸಾವಿಗೀಡಾಗಿರುವುದಾಗಿ ತಿಳಿಸಿದ್ದರು. 11 ಮಂದಿ ಮೃತಪಟ್ಟ ಸುದ್ದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲುಪಿದಾಗ ಸಮಯ 5.45 ಗಂಟೆ ಆಗಿತ್ತು. ಈ ವಿಚಾರದಲ್ಲಿ ದಯಾನಂದ್‌ ಅವರು ನಗರ ಪೊಲೀಸ್ ಆಯುಕ್ತರಾಗಿ ಪ್ರಮುಖ ಘಟನೆಯ ವರದಿಯನ್ನು ಮುಖ್ಯಮಂತ್ರಿಗಳಿಗೆ ತಿಳಿಸುವ ಶಿಷ್ಟಾಚಾರ ಪಾಲಿಸಿಲ್ಲ ಎಂಬ ಮಾತು ಕೇಳಿ ಬಂದಿದೆ.

ಮತ್ತೊಂದೆಡೆ ಬಂದೋಬಸ್ತ್‌ಗೆ ಅಗತ್ಯ ಸಿಬ್ಬಂದಿಯನ್ನು ಏಕೆ ಒದಗಿಸಲಿಲ್ಲ ಎಂಬ ಚರ್ಚೆಯೂ ಶುರುವಾಗಿದ್ದು, ಇದಕ್ಕೆ ಐಎಎಸ್‌-ಐಪಿಎಸ್ ಜಗಳವೂ ಕಾರಣ ಎನ್ನಲಾಗಿದೆ. ಕ್ರಿಕೆಟ್‌ ಪಂದ್ಯ ನಡೆಯುವಾಗ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಪಾಸು ನೀಡುತ್ತಿರಲಿಲ್ಲ ಎಂಬ ಸಿಟ್ಟು ಹಾಗೂ ಕ್ರಿಕೆಟ್‌ ಸಂಸ್ಥೆ ಮೇಲಿನ ಕೆಂಗಣ್ಣಿನಿಂದ ಬಂದೋಬಸ್ತ್‌ ವ್ಯವಸ್ಥೆ ಮಾಡಲಿಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ ಎಂದು ಹೇಳಲಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿಯೇ ದಯಾನಂದ್‌ ಅವರನ್ನು ಅಮಾನತು ಮಾಡಲಾಗಿದೆ. ಕೇವಲ ಸರ್ಕಾರ ತಮ್ಮ ಮೇಲೆ ಬರುತ್ತಿರುವ ಆರೋಪಗಳಿಂದ ತಪ್ಪಿಸಿಕೊಳ್ಳಲು ದಯಾನಂದ್‌ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ಹೇಳುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ