- ಗ್ರಾಮೀಣ ಜನರ ಬದುಕನ್ನು ಹಸನಾಗಿಸಿದ ಯೋಜನೆಯಿದು: ಸಂಸದೆ ಡಾ.ಪ್ರಭಾ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪುರುಷ- ಮಹಿಳೆಯರೆನ್ನದೇ ಸಮಾನ ವೇತನ ನೀಡುವ ಮೂಲಕ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಕೃಷಿ, ಕೂಲಿ ಕಾರ್ಮಿಕರ ಬದುಕಿಗೆ ಆಸರೆಯಾಗಿದೆ. ಇಂಥ ಯೋಜನೆ ಹೆಸರನ್ನೇ ಕೇಂದ್ರ ಸರ್ಕಾರ ಬದಲಿಸಲು ಹೊರಟಿದ್ದು ಸರಿಯಲ್ಲ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಮಂಗಳವಾರ ಜಿಪಂ, ತಾಪಂ, ಗ್ರಾಪಂ ಸಹಯೋಗದಲ್ಲಿ ಮನರೇಗಾ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರ ಆರೋಗ್ಯ ಶಿಬಿರ ಹಾಗೂ ಕುಂದು ಕೊರತೆಗಳ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಗ್ರಾ.ಪಂ.ಗಳಲ್ಲಿ ಉತ್ತಮ ಕೆಲಸ ಮಾಡಿ ಜನರಿಗೆ ಉದ್ಯೋಗ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೊನ್ನೂರು ಗ್ರಾಪಂ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದರಿಂದ ಇಲ್ಲಿನ ಗ್ರಾಪಂ ಉದ್ಯೋಗ ಖಾತ್ರಿಯಲ್ಲಿ ನಂ.1 ಸ್ಥಾನ ಪಡೆದಿದೆ. ಮನರೇಗಾದಿಂದ ದೇಶದಲ್ಲಿ 5- 6 ಕೋಟಿ ಜನ ಕೂಲಿ ಕಾರ್ಮಿಕರು ಆರ್ಥಿಕ ಸಬಲರಾಗಿದ್ದಾರೆ. 2005 ರಿಂದ 2026 ರವರೆಗೆ ಸುಮಾರು 20 ವರ್ಷಗಳಿಂದ ಗ್ರಾಮಗಳ ಅಭಿವೃದ್ಧಿಗೆ ಮನರೇಗಾ ಯೋಜನೆ ಕಾರಣವಾಗಿತ್ತು ಎಂದು ಹೇಳಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ದೇಶದಲ್ಲಿ ದುಡಿಯುವ ವರ್ಗಕ್ಕೆ ಕೆಲಸ ಕೊಡಲು 2005ರಲ್ಲಿ ಡಾ.ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರ ಮನರೇಗಾ ಜಾರಿಗೊಳಿಸುವ ಮೂಲಕ ದುಡಿಯುವ ವರ್ಗಕ್ಕೆ ಕೆಲಸ ಕೊಟ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡಿತು. ಆದರೆ, ಅಂತಹ ಮಹತ್ವದ ಯೋಜನೆ ಹೆಸರನ್ನೇ ಬದಲಿಸುವ ದುಸ್ಸಾಹಸ ಕೇಂದ್ರ ಸರ್ಕಾರ ಮಾಡಿದೆ ಎಂದು ಆಕ್ಷೇಪಿಸಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್, ತಾಪಂ ಇಒ ರಾಮ ಭೋವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು. ಇದೇ ವೇಳೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಕೆ.ಎಸ್.ಬಸವಂತಪ್ಪ, ಜಿಪಂ ಸಿಇಒ ಗಿತ್ತೆ ಮಾಧವ ಗ್ರಾಮೀಣ ಕೂಲಿ ಕಾರ್ಮಿಕರ ಅಹವಾಲು ಆಲಿಸಿದರು.
(ಟಾಪ್ ಕೋಟ್) ಶಾಸಕ ಕೆ.ಎಸ್. ಬಸವಂತಪ್ಪ ಹಳ್ಳಿ ಜನರ ದನಿಯಾಗಿ, ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಾರೆ. ಬಡವರ ಕಷ್ಟ- ಸುಖಗಳನ್ನು ಚೆನ್ನಾಗಿ ಅರಿತಿದ್ದಾರೆ. ಮಾಯಕೊಂಡ ಕ್ಷೇತ್ರ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿದೆ. ಸ್ವಉದ್ಯೋಗದಲ್ಲಿ ನೀವು ಹೇಗೆ ಆರ್ಥಿಕವಾಗಿ ಸಬಲರಾಗಬಹುದು ಎಂಬ ಬಗ್ಗೆ ತಿಳಿಸಿದ್ದಾರೆ.
- - -
ಹೊನ್ನೂರು ಗ್ರಾಮದಲ್ಲಿ ಮಂಗಳವಾರ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರ ಆರೋಗ್ಯ ಶಿಬಿರ ಹಾಗೂ ಕುಂದು ಕೊರತೆಗಳ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕುಂದು ಕೊರತೆಗಳನ್ನು ಆಲಿಸಿದದರು.