ಕನ್ನಡಪ್ರಭ ವಾರ್ತೆ ಬೆಂಗಳೂರು
ವಾಸ್ತವವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಕಾರದ ವತಿಯಿಂದ ಈ ಮಟ್ಟದ ಕಾರ್ಯಕ್ರಮ ಆಯೋಜಿಸುವ ಇರಾದೆ ಇರಲಿಲ್ಲ ಎನ್ನಲಾಗಿದೆ. ಆದರೆ,ಐಪಿಎಲ್ ಕಪ್ ಗೆದ್ದಿದ್ದರಿಂದ ಉತ್ಸಾಹದಲ್ಲಿದ್ದ ಯುವ ಸಮೂಹವನ್ನು ಮೆಚ್ಚಿಸುವ ಹಾಗೂ ಕೊಹ್ಲಿ ಹಾಗೂ ವಿದೇಶಿ ಆಟಗಾರರು ಲಭ್ಯರಾಗುವುದಿಲ್ಲ ಎಂಬ ಕಾರಣಕ್ಕೆ ಸಮಾರಂಭ ಆಯೋಜಿಸಲು ಒಪ್ಪುವಂತೆ ಮಾಡಲಾಯಿತು ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೈನಲ್ ಪಂದ್ಯದ ಮರು ದಿನವೇ ಸಂಭ್ರಮಾಚಣೆಗೆ ಅವಕಾಶ ನೀಡುವುದು ಬೇಡ. ಜತೆಗೆ ಆರ್‌ಸಿಬಿ ಒಂದು ಖಾಸಗಿ ಫ್ರಾಂಚೈಸಿ. ಅವರ ರಾಜ್ಯವನ್ನು ಪ್ರತಿನಿಧಿಸುವ ತಂಡವಲ್ಲ. ಹೀಗಾಗಿ ಅವರೇ ಕಾರ್ಯಕ್ರಮ ಮಾಡಿಕೊಳ್ಳಲಿ. ವಿಧಾನಸೌಧದ ಬಳಿಕ ಸರ್ಕಾರದಿಂದ ಕಾರ್ಯಕ್ರಮ ಮಾಡುವುದು ಬೇಡ ಎಂದು ಸ್ಪಷ್ಟಪಡಿಸಿದ್ದರು ಎನ್ನಲಾಗಿದೆ.ಆದರೆ, 18 ವರ್ಷದ ಬಳಿಕ ಆರ್‌ಸಿಬಿ ಕಪ್ ಗೆದ್ದಿದೆ. ಜನರು ತುಂಬಾ ಉತ್ಸಾಹದಲ್ಲಿದ್ದು ವಿಶೇಷವಾಗಿ ಯುವ ಜನರನ್ನು ಆಕರ್ಷಿಸಲು ಇದು ಸುಸಂದರ್ಭ. ಅವರನ್ನು ನಮ್ಮತ್ತ ಸೆಳೆಯಲು ಹಾಗೂ ಸರ್ಕಾರದ ಬಗ್ಗೆ ಸದಭಿಪ್ರಾಯ ಮೂಡುವಂತೆ ಮಾಡಲು ಕಾರ್ಯಕ್ರಮ ಅಗತ್ಯ ಎಂದು ಮನವೊಲಿಕೆ ಪ್ರಯತ್ನ ನಡೆಯಿತು ಎನ್ನಲಾಗಿದೆ.
ಈ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ವೃತ್ತಿ ಜೀವನದ ಅತಿ ದೊಡ್ಡ ಕಪ್ಪು ಚುಕ್ಕೆ ಎಂದು ಸಂಪುಟ ಸದಸ್ಯರೊಂದಿಗೆ ದುಃಖ ತೋಡಿಕೊಂಡರು ಎಂದು ತಿಳಿದುಬಂದಿದೆ.