ಕಾರವಾರ: ಭಟ್ಕಳ ತಾಲೂಕಿನ ವೆಂಕಟಾಪುರ ಬಳಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ೬೬ರ ಸೇತುವೆ ಏಕೆ ಬಂದ್ ಮಾಡಿದ್ದೀರಿ? ಬಂದ್ ಮಾಡುವ ಮೊದಲು ಅನುಮತಿ ಪಡೆದುಕೊಂಡಿದ್ದೀರಾ ಎಂದು ಸಚಿವ ಮಂಕಾಳ ವೈದ್ಯ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಅಧಿಕಾರಿಗಳಿಗೆ ಪ್ರಶ್ನಿಸಿದರು.ನಗರದ ಜಿಪಂನಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇತುವೆಯ ಸಾಮರ್ಥ್ಯ ಪರಿಶೀಲನೆ ಮಾಡಿದ್ದೀರಾ? ಜಿಲ್ಲಾಡಳಿತದ ಗಮನಕ್ಕೆ ತರದೇ ಹೇಗೆ ಬಂದ್ ಮಾಡಿದ್ದೀರಿ? ನಿಮಗೆ ಯಾರು ಅನುಮತಿ ನೀಡಿದ್ದಾರೆ? ಅದನ್ನು ಕೆಡವಿ ಹೊಸದಾಗಿ ಕಟ್ಟಿ ಇಲ್ಲವೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ತಾಕೀತು ಮಾಡಿದರು. ಶಾಸಕ ಸತೀಶ ಸೈಲ್ ಮಾತನಾಡಿ, ಮಳೆಗಾಲ ಸಮೀಪಿಸುತ್ತದೆ. ಅಂಕೋಲಾ ತಾಲೂಕಿನ ಶಿರೂರು ಬಳಿ ಪುನಃ ಈವರ್ಷವೂ ಗುಡ್ಡ ಕುಸಿಯುತ್ತದೆ. ವರ್ಷ ಉರುಳುತ್ತಾ ಬಂದರೂ ಗುಡ್ಡ ಕುಸಿಯದಂತೆ ತಡೆಯಲು ಸ್ವಲ್ಪವೂ ಕ್ರಮ ವಹಿಸಿಲ್ಲ. ಈಗ ಜನರು ಸಾವಿಗೀಡಾಗಿರುವುದು ಸಾಕಾಗುವುದಿಲ್ಲವೇ? ಇನ್ನೂ ಸಾಯಿಸಬೇಕು ಎಂದುಕೊಂಡಿದ್ದಾರಾ? ಈ ಬಾರಿ ಅದೇ ರೀತಿ ಅನಾಹುತವಾದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಸಚಿವ ವೈದ್ಯ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ರ ಸ್ಥಿತಿಗತಿ ಪರಿಶೀಲನೆ ನಡೆಸಿ ಮುಂದಿನ ೧೦ ದಿನದಲ್ಲಿ ವರದಿ ನೀಡಲು ಸೂಚಿಸಿದರು. ಈ ವರದಿ ಬಳಿಕ ಪ್ರತ್ಯೆಕ ಸಭೆ ಮಾಡುತ್ತೇನೆ. ನಿಮಗೆ ಹೇಳುವವರಿಲ್ಲ. ಕೇಳುವವರಿಲ್ಲ. ಜಿಲ್ಲಾಡಳಿತದಿಂದ ಐಆರ್‌ಬಿಗೆ ನೀಡಿರುವ ಎಲ್ಲ ಸೌಲಭ್ಯವನ್ನು ಕೂಡಲೇ ಬಂದ್ ಮಾಡಿ ಎಂದು ಡಿಸಿಗೆ ಸೂಚನೆ ನೀಡಿದ ಅವರು, ಕೆಲ ಜನಪ್ರತಿನಿದಿಗಳು ನಾಚಿಕೆಯಿಲ್ಲದೇ ಇಂತಹ ಕಂಪನಿಯನ್ನು ಬೆಂಬಲಿಸುತ್ತಾರೆ ಎಂದು ಪರೋಕ್ಷವಾಗಿ ಸಂಸದ ಕಾಗೇರಿಗೆ ಟಾಂಗ್ ನೀಡಿದರು.ಜಿಲ್ಲೆಯಲ್ಲಿ ಈ ವರ್ಷದ ಅಂತ್ಯದೊಳಗೆ ಯಾವ ಕುಟುಂಬಕ್ಕೂ ವಿದ್ಯುತ್ ಇಲ್ಲ ಎನ್ನುವಂತಾಗಬಾರದು. ಸರ್ವೆ ನಡೆಸಿ ಎಲ್ಲ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೆಸ್ಕಾಂಗೆ, ಸ್ವಂತ ಕಟ್ಟಡ ಹೊಂದಿರದ ಅಂಗನವಾಡಿ, ಶಾಲೆಗೆ ಕಟ್ಟಡ ಒದಗಿಸಲು ಶಿಕ್ಷಣ ಇಲಾಖೆಗೆ, ಸಮಪರ್ಕಕವಾಗಿ ಆ್ಯಂಬುಲೆನ್ಸ್ ಒದಗಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು. ರಾಜ್ಯ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕ ಭೀಮಣ್ಣ ನಾಯ್ಕ, ಎಂಎಲ್‌ಸಿ ಗಣಪತಿ ಉಳ್ವೇಕರ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಸಿಇಒ ಈಶ್ವರಕುಮಾರ ಕಾಂದೂ, ಎಸ್‌ಪಿ ಎಂ. ನಾರಾಯಣ ಇದ್ದರು.೮ರಂದು ಮಿಶ್ರತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆ
ಶಿರಸಿ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘ ಸದಾಶಿವಳ್ಳಿ ಇವರ ಆಶ್ರಯದಲ್ಲಿ ಫೆ. ೮ರಂದು ಮಿಶ್ರತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆಯನ್ನು ಸದಾಶಿವಳ್ಳಿಯ ಸದಾಶಿವ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಹೈನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಸ್ಪರ್ಧೆಯು ತಾಲೂಕು ಮಟ್ಟದಾಗಿದ್ದು, ಶಿರಸಿ ತಾಲೂಕಿನ ಆಸಕ್ತ ರೈತರು(ಅತಿ ಹೆಚ್ಚು ಹಾಲು ನೀಡುವ ಪ್ರತಿದಿನಕ್ಕೆ ೧೫ ಲೀ. ಹಾಲು ಮತ್ತು ಮೇಲ್ಪಟ್ಟ ಹಸು ಹೊಂದಿದ್ದಲ್ಲಿ) ಭಾಗವಹಿಸಲು ಇಚ್ಛಿಸಿದ್ದರೆ ಫೆ. ೫ರೊಳಗೆ ಹೆಸರು ನೋಂದಾಯಿಸಬೇಕು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಪಶು ಸಂಗೋಪನಾ ಇಲಾಖೆಯ ಡಾ. ದಿನೇಶ ಕೆ.ಎನ್.(ಮೊ. ೮೬೧೮೪೭೪೦೩೨), ಪ್ರಶಾಂತ ಎಂ.ಕೆ.(ಮೊ. ೯೮೮೬೮೯೯೨೪೪), ಡಾ. ರೋಹಿತ್ ಹೆಗಡೆ ಅವರನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.