ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ಉತ್ತಂಬಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ಕುಸಿತವಾಗಿದ್ದರೂ ಸ್ಥಳಕ್ಕೆ ಸಂಸದ ಸುನೀಲ್ ಬೋಸ್ ಆಗಮಿಸದಿರುವುದು ಸರಿಯಲ್ಲ. ನಾನು ವಿಚಾರ ತಿಳಿದ ತಕ್ಷಣ ಬಾಗಲಕೋಟೆಯಿಂದ, ಮಾಜಿ ಶಾಸಕ ಬಾಲರಾಜು ಬೆಂಗಳೂರಿಂದ ಬಂದಿದ್ದೇವೆ. ಮೈಸೂರಿನಿಂದ ಸಂಸದರು ಬರಲು ಏಕೆ ತಡಮಾಡಿದ್ದಾರೆ ಎಂದು ಮಾಜಿ ಸಚಿವ ಎನ್. ಮಹೇಶ್ ಪ್ರಶ್ನಿಸಿದರು.ಉತ್ತಂಬಳ್ಳಿಯ ಹೆದ್ದಾರಿ ತಡೆಗೋಡೆ ಕುಸಿತ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಾರ ನನ್ನ ಗಮನಕ್ಕೆ
ಬಂದಾಗ ಬಾಗಲಕೋಟೆಯಲ್ಲಿದ್ದೆ. ಸೋಮವಾರ ಬಂದು ವೀಕ್ಷಿಸಿದ್ದೇನೆ, ಇದು ಅತ್ಯಂತ ಕಳಪೆ ಕಾಮಗಾರಿಯಾಗಿದೆ. ರಸ್ತೆಯು ಕುಸಿತವಾಗುತ್ತಿರುವ ಹಿನ್ನೆಲೆ ತಡೆಗೋಡೆ ಕುಸಿತಗೊಂಡಿದೆ. ಈ ಭಾಗದ ಸಂಸದರು, ಹೆದ್ದಾರಿ ಪ್ರಾಧಿಕಾರದ ಪುಣ್ಯದಿಂದಾಗಿಯೇ ಸದ್ಯ ಯಾವುದೇ ಅಪಾಯವಾಗಿಲ್ಲ. ಸಂಸದರು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬರಬೇಕಿತ್ತು, ಸ್ಥಳೀಯ ಶಾಸಕರು ಬಂದು ವೀಕ್ಷಿಸಿದ್ದಾರೆ. ಆದರೆ ಮೈಸೂರಿನಲ್ಲಿರುವ ಸಂಸದರು ಬಾರದಿರುವ ಕ್ರಮ ಸರಿಯಲ್ಲ. ಅವರು ಬೇಗ ಏಳುವುದನ್ನು ರೂಡಿಸಿಕೊಳ್ಳಬೇಕು. ಅಭಿವೃದ್ಧಿಪರ , ಸ್ಪಂದನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ತಡೆಗೋಡೆ ಕುಸಿತ ಸ್ಥಳಕ್ಕೆ ಚಾಮರಾಜನಗರದ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಬೇಕಿತ್ತು, ಇನ್ನು ಸಹಾ ಸ್ಥಳಕ್ಕೆ ಆಗಮಿಸದಿರುವುದು ಇವರ ಬೇಜವಾಬ್ದಾರಿತನ ಪ್ರಶ್ನಿಸುವಂತಿದೆ. ಕೂಡಲೇ ಆಗಮಿಸಿ ತಡೆಗೋಡೆ ಕುಸಿತ ಸಂಬಂಧ ಅಧಿಕಾರಿಗಳಿಂದ ವರದಿ ಪಡೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮವಹಿಸುವಂತಾಗಬೇಕು ಎಂದರು.ನಗರಸಭೆ ಮಾಜಿ ಸದಸ್ಯ ಕೆ ಕೆ ಮೂರ್ತಿ, ಸಿದ್ದಪ್ಪಾಜಿ, ಸೋಮಣ್ಣ, ಸಂತೋಷ್ ಇನ್ನಿತರಿದ್ದರು.ತಡೆಗೋಡೆ ಕುಸಿತ ಪ್ರಕರಣದಲ್ಲಿ ಕೂಡಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ವಿಚಾರ ತಿಳಿಯುತ್ತಿದ್ದಂತೆ ಸಂಸದರು ಸ್ಥಳಕ್ಕೆ ಬಾರದಿರುವುದು ದುರಂತ. ಇನ್ನಾದರೂ ಬೇಗ ಬಂದು ಸ್ಥಳ ಪರೀಶೀಲಿಸಲಿ. ಮುಂದಿನ ಕ್ರಮ ಕೈಗೊಳ್ಳದಿದ್ದರೆ ಹೆದ್ದಾರಿ ರಸ್ತೆಯಲ್ಲೆ ನಾಟಿ ಮಾಡಿ ಬಿಜೆಪಿ ಪ್ರತಿಭಟಿಸಬೇಕಾಗುತ್ತದೆ.
ಎಸ್. ಬಾಲರಾಜು, ಮಾಜಿ ಶಾಸಕ