ಕೊಪ್ಪಳ: ಏನ್ ತಪ್ ಮಾಡಿದ್ರಂತಾ ಹಿಂಗ ಮಾಡಿದೀ ನೀನು, ನೀನ್ ದರ್ಶನಕ್ಕೆ ಬರೋವನ್ರಾ ಯಾಕ್ ನೀನ್ ಕಾಪಾಡ್ಲಿಲ್ಲ, ದೇವ್ರಾ ಇಲ್ಲಾನೋ, ಇದ್ದಿದ್ರ ಹೀಂಗ್ ಯಾಕ್ ಆಕ್ತಿತ್ತು, ಅಯ್ಯೋ ವಿಧಿಯೇ, ಏನ್ ಪಾಪಾ ಮಾಡಿದ್ವೇಂತಾ ಇಂತಾ ಶಿಕ್ಷೆ ಕೊಟ್ಟಿ ಅಂತಾ ಕುಟುಂಬದ ಕರುಳು ಕಳೆದುಕೊಂಡ ಜನರು ಕಂಬನಿ ಮಿಡಿಯುತ್ತಿದ್ದರು. ಒಳ್ಳೆಯದಾಗಲಿ ಎಂದು ದೇವಿ ದರ್ಶನಕ್ಕೆ ಹೊರಟಿದ್ದ ಜನರಿಗೆ ಅಪಘಾತ ಆಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿಸಿತ್ತು. ಹುಲಿಗೆಮ್ಮದೇವಿಗೆ ನಿಂಗೆ ಬರಲೇ ಬಾರ್ದಿತ್ತು, ನಮ್ಮವರ ಪ್ರಾಣ ತೊಗೊಂಡೆ ಎಂದು ಕೆಲವರು ಗೋಗರೆಯುತ್ತಿದ್ದರೆ, ಇನ್ನೂ ಕೆಲವರು ದೇವಿಗೆ ನಮ್ಮವರ ಬಲಿನೇ ಬೇಕಿತ್ತಾ ಎಂದು ಎದೆ ಬಡೆದುಕೊಳ್ಳುತ್ತಿದ್ದರು.
ತಾಲೂಕಿನ ಹುಲಿಗಿಯ ಹುಲಿಗೆಮ್ಮದೇವಿ ದರ್ಶನಕ್ಕೆ ಆಗಮಿಸುತ್ತಿದ್ದ ೧೯ ಜನರಿದ್ದ ಟ್ರ್ಯಾಕ್ಟರ್‌ಗೆ ಮುನಿರಾಬಾದ್ ಸಮೀಪದ ತುಂಗಭದ್ರಾ ಸೇತುವೆ ಬಳಿ ಹಿಂಬದಿಯಿಂದ ಕಂಟೈನರ್ ಲಾರಿ ಗುದ್ದಿದ ಪರಿಣಾಮ ಟ್ರ್ಯಾಕ್ಟರ್ ಸೇತುವೆ ಕೆಳಗೆ ಬಿದ್ದು ೬ ಜನರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ೧೩ ಜನರು ಗಂಭೀರವಾಗಿ ಗಾಯಗೊಂಡು ಕೊಪ್ಪಳ ಹಾಗೂ ವಿಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರ ಹಾಗೂ ಕೂಡ್ಲಿಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದ ೧೯ ಜನರು ಟ್ರ್ಯಾಕ್ಟರ್‌ನಲ್ಲಿ ಕೊಪ್ಪಳ ತಾಲೂಕಿನ ಹುಲಿಗೆಮ್ಮದೇವಿ ದರ್ಶನಕ್ಕೆಂದು ಆಗಮಿಸುತ್ತಿದ್ದರು. ತುಂಗಭದ್ರಾ ೨ನೇ ಸೇತುವೆ ಬಳಿ ಹಿಂಬದಿಯಿಂದ ಕಂಟೈನರ್ ಲಾರಿಯೊಂದು ವೇಗವಾಗಿ ಬಂದು ಟ್ರ್ಯಾಕ್ಟರ್‌ಗೆ ಗುದ್ದಿದೆ. ಈ ಪರಿಣಾಮ ಟ್ರ್ಯಾಕ್ಟರ್ ಚಾಲಕ ಕೆಂಚಪ್ಪನ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದಿದೆ. ಸೇತುವೆ ಮೇಲ್ಭಾಗದಿಂದ ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲಿ ೪ ಜನರು ಮೃತಪಟ್ಟಿದ್ದಾರೆ. ನಂತರ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಮಾಹಿತಿ ತಿಳಿದು ವಿಜಯನಗರ ಹಾಗೂ ಕೊಪ್ಪಳ ಎಸ್ಪಿ ಸ್ಥಳಕ್ಕೆ ದೌಡಾಯಿಸಿ ಘಟನೆ ವಿವರ ಪಡೆದರಲ್ಲದೇ ಮೃತದೇಹಗಳನ್ನು ಹೊಸಪೇಟೆ ಆಸ್ಪತ್ರೆಗೆ ರವಾನಿಸಿದ್ದಾರೆ.ಗಾಯಗೊಂಡವರಲ್ಲಿ ಅಜಯ್, ಮಾಯಾ, ಚೇತನ, ಹನುಮಕ್ಕ, ನಾಗರಾಜ, ಅರುಣಮ್ಮ, ರೇಣುಕಾ, ಅಂಜಲಿ ಹಾಗೂ ಸವಿತಾ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದರೆ,ರೇಣುಕಾ, ಅರ್ಜುನ, ರಕ್ಷಿತಾ, ಮಹಾಲಕ್ಷ್ಮಿ ಅವರನ್ನು ವಿಜಯನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಸದ ತುಕಾರಾಂ ಆಸ್ಪತ್ರೆಗೆ ದೌಡು: ದುರ್ಘಟನೆ ಬೆನ್ನಲ್ಲೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಬಳ್ಳಾರಿ ಸಂಸದ ಈ. ತುಕಾರಾಂ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ ಮೃತ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ ಹೇಳಿ ಸ್ಥೈರ್ಯ ತುಂಬುವ ಕೆಲಸ ಮಾಡಿದರು. ಅಲ್ಲದೇ, ಘಟನೆ ಬಗ್ಗೆ ಪೊಲೀಸರಿಂದ ಸಮಗ್ರ ಮಾಹಿತಿ ಪಡೆದರಲ್ಲದೇ ಸಿಎಂ ಸಿದ್ದರಾಮಯ್ಯ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ೬ ಜನರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಗಾಯಾಳುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಟ್ರ್ಯಾಕ್ಟರ್ ಅಪಘಾತದಲ್ಲಿ ೬ ಜನರು ಮೃತಪಟ್ಟಿದ್ದಾರೆ. ಒಟ್ಟು ೧೯ ಜನರು ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಕೊಪ್ಪಳ ಹಾಗೂ ಹೊಸಪೇಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ ₹೫ ಲಕ್ಷ ಘೋಷಣೆ ಮಾಡಿದೆ. ಟ್ರ್ಯಾಕ್ಟರ್ ಇರುವುದು ಕೃಷಿ ಚಟುವಟಿಕೆಗೆ ಬಳಕೆ ಮಾಡಬೇಕು. ಜನರು ಇದನ್ನು ತಿಳಿಯಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಹಾಗೂ ಆರ್‌ಟಿಒಗೂ ಸೂಚನೆ ನೀಡುವೆ ಎಂದು ಬಳ್ಳಾರಿ ಸಂಸದ ಈ. ತುಕಾರಾಂ ತಿಳಿಸಿದ್ದಾರೆ.