ಶಿಗ್ಗಾಂವಿ: "ಅಧಿಕಾರ ಇದ್ದಾಗ ಕ್ಷೇತ್ರದ ಬಡ ಜನರಿಗೆ ನೆರವಾಗದ ಬಸವರಾಜ ಬೊಮ್ಮಾಯಿ ಅವರೇ, ಈಗ ಯಾಕೆ ಮತ್ತೆ ಮತ ಕೇಳುತ್ತಿದ್ದೀರಿ " ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಾಪ್ರಹಾರ ನಡೆಸಿದರು.
೧೩೬ ಶಾಸಕರ ಬಲಿಷ್ಠ ಸರ್ಕಾರವನ್ನು ನೀವು ಆಯ್ಕೆ ಮಾಡಿದ್ದು, ಮುಂದಿನ ಮೂರೂವರೆ ವರ್ಷಗಳ ಕಾಲ ಈ ಸರ್ಕಾರ ಪಠಾಣ್ ಅವರ ಬೆನ್ನಿಗೆ ನಿಂತು ನಿಮ್ಮ ಸೇವೆ ಮಾಡಲಿದೆ. ಈ ಕ್ಷೇತ್ರದ ಜನ ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದ್ದೀರಿ. ಪಕ್ಕದ ಕ್ಷೇತ್ರದಿಂದ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯ, ವೀರೇಂದ್ರ ಪಾಟೀಲ್, ದೇವರಾಜ ಅರಸು, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಮುಂದೆ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ. ಉಳುವವನೆ ಭೂಮಿಯ ಒಡೆಯ, ಆರಾಧನಾ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, ಸ್ತ್ರೀ ಶಕ್ತಿ, ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರಭಾಗ್ಯ, ಅಕ್ಷರ ದಾಸೋಹ ಸೇರಿದಂತೆ ಹತ್ತು ಹಲವು ಯೋಜನೆ ಜಾರಿಗೆ ತರಲಾಗಿದೆ. ಇಂದಿರಾ ಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ, ಪಿಂಚಣಿ ಯೋಜನೆ ತಂದರು. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆಮೂಲಕ ಜನ ಸಾಮಾನ್ಯರ ಬದುಕಿನಲ್ಲಿ ಆರ್ಥಿಕ ಶಕ್ತಿ ತುಂಬಿ ಬದಲಾವಣೆ ತರಲಾಗಿದೆ ಎಂದು ಹೇಳಿದರು.
ಭಾರತ ಜೋಡೋ ಯಾತ್ರೆ ವೇಳೆ ಹಿರಿಯ ವೃದ್ಧೆ ಸೌತೆಕಾಯಿ ತಂದು ರಾಹುಲ್ ಗಾಂಧಿ ಅವರಿಗೆ ಕೊಟ್ಟರು. ಕೊಡುವಾಗ ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೆಕಾಯಿ. ಹೀಗಾಗಿ ನಿಮಗೆ ನೀಡುತ್ತಿದ್ದೇನೆ ಎಂದು ಹೇಳಿ ಆಶೀರ್ವಾದ ಮಾಡಿದರು. ಕಾಂಗ್ರೆಸ್ ಯೋಜನೆಗಳು ಜನರ ಬದುಕಿನಲ್ಲಿ ಹೇಗೆ ಬೆಳಕಾಗಿದೆ ಎಂಬುದಕ್ಕೆ ಸಾಕ್ಷಿ ಎಂದರು.ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಇಂತಹ ಯಾವುದಾದರೂ ಒಂದು ಯೋಜನೆ ನೀಡಿದ್ದಾರಾ? ಇಲ್ಲ. ಈಗ ಅವರು ನಿಮ್ಮನ್ನು ಬಿಟ್ಟು ಪಕ್ಕದ ಕ್ಷೇತ್ರಕ್ಕೆ ಹೋಗಿದ್ದಾರೆ. ಬೊಮ್ಮಾಯಿ ಅವರು ರಾಜಕೀಯ ನಿವೃತ್ತಿ ಪಡೆಯಲಿ ಎಂದು ನಾನು ಹೇಳುವುದಿಲ್ಲ. ಆದರೆ ಅವರಿಂದ ನಿಮಗೆ ಸಹಾಯ ಮಾಡಲು ಆಗಿಲ್ಲ. ನಾನು ಇಂಧನ ಸಚಿವನಾಗಿದ್ದಾಗ ರೈತರ ಪಂಪ್‌ಸೆಟ್‌ಗೆ ನೀಡುವ ವಿದ್ಯುತ್ ಅನ್ನು ೬ ಗಂಟೆಯಿಂದ ೭ ಗಂಟೆಗೆ ಏರಿಸಿದೆ. ಪಾವಗಡದಲ್ಲಿ ದೊಡ್ಡ ಸೋಲಾರ್ ಸರ್ಕಾರ ಮಾಡಿದೆ ಎಂಬ ಸಮಾಧಾನ ನನಗಿದೆ. ಹಳ್ಳಿಗಳಲ್ಲಿ ಅನೇಕ ಭಾಗ್ಯಗಳನ್ನು ಕೊಟ್ಟ ಆತ್ಮತೃಪ್ತಿ ಸಿದ್ದರಾಮಯ್ಯ ಅವರಿಗಿದೆ ಎಂದು ಶಿವಕುಮಾರ ಹೇಳಿದರು.
ಕಿತ್ತುಹಾಕಲು ಸರ್ಕಾರ ಕಡಲೆಕಾಯಿ ಗಿಡವಲ್ಲ: ನಮ್ಮ ಗ್ಯಾರಂಟಿ ಯೋಜನೆ ಕಿತ್ತುಹಾಕಲು ಸಂಚು ರೂಪಿಸುತ್ತಿದ್ದಾರೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಈ ಸರ್ಕಾರ ಕಿತ್ತೊಗೆಯುವುದಾಗಿ ಹೇಳುತ್ತಿದ್ದಾರೆ. ಅವರು ಕಿತ್ತು ಹಾಕಲು ಈ ಸರ್ಕಾರ ಕಡಲೆಕಾಯಿ ಗಿಡವಲ್ಲ. ರಾಜ್ಯದ ಜನ ೧೩೬ ಶಾಸಕರನ್ನು ಆಯ್ಕೆ ಮಾಡಿ ಬಲಿಷ್ಠ ಸರ್ಕಾರ ಆರಿಸಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ ಹಾಗೂ ಮಿಸ್ಟರ್ ವಿಜಯೇಂದ್ರ ಈ ಸರ್ಕಾರ ಕಿತ್ತುಹಾಕುವುದು ನಿಮ್ಮ ಹಣೆಬರಹದಲ್ಲಿ ಬರೆದಿಲ್ಲ. ಮುಂದಿನ ಮೂರೂವರೆ ಸರ್ಕಾರ ನಂತರವೂ ಈ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಬಡ ಜನ ನಮ್ಮ ಕೈ ಹಿಡಿಯಲಿದ್ದಾರೆ ಎಂದರು.