ಮಹದಾಯಿ ಯೋಜನೆ ಏಕೆ ಜಾರಿಗೊಳಿಸಿಲ್ಲ

KannadaprabhaNewsNetwork | Published : May 1, 2024 1:21 AM

ಸಾರಾಂಶ

ಸಾಲ ಮಾಡುವ ಮೂಲಕ ದೇಶವನ್ನು ದಿವಾಳಿಗೆ ಎಬ್ಬಿಸಿರುವ ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯ ಕಾಂಗ್ರೆಸ್‌ ಸರ್ಕಾರ ದಿವಾಳಿ ಆಗಿದೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ. ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನು ಅಭಿವೃದ್ಧಿ ಮಾಡಿದೆ ಎಂಬುದನ್ನು ಹೇಳಲಿ.

ಧಾರವಾಡ:

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ತುಂಬಾ ಪವರ್‌ ಫುಲ್‌ ನಾಯಕ. ಅವರು ಚುಟಿಕೆ ಹೊಡೆದರೆ ಏನೆಲ್ಲಾ ಆಗಲಿದ್ದು ಮಹಾದಾಯಿ-ಕಳಸಾ ಬಂಡೂರಿ ಯೋಜನೆ ಮಾತ್ರ ಏಕೆ ಜಾರಿಯಾಗುತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಪ್ರಶ್ನಿಸಿದರು. ಮಂಗಳವಾರ ಇಲ್ಲಿಯ ಬಸ್‌ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ವೈಫಲ್ಯದ ಕುರಿತು ಜಾಗೃತಿಯೊಂದಿಗೆ ಮತಯಾಚನೆ ಮಾಡಿದ ಅವರು, ಯೋಜನೆ ಸದ್ಯ ಎಲ್ಲಿ ನಿಂತಿದೆ ಎಂಬುದು ಎಲ್ಲರಿಗೂ ಗೊತ್ತು. ವನ್ಯ ಜೀವಿ ಮಂಡಳಿಯ ಪರವಾನಗಿ ರಾಜ್ಯ ಸರ್ಕಾರ ನೀಡಬೇಕಾ ಅಥವಾ ಕೇಂದ್ರ ನೀಡಬೇಕಾ? ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಮೆರೆಯುವುದನ್ನು ಬಿಟ್ಟು ಯೋಜನೆಗೆ ಕಾಂಗ್ರೆಸ್‌ ಅಡ್ಡಗಾಲು ಹಾಕಿದೆ ಎನ್ನುವುದು ಯಾವ ನ್ಯಾಯ ಎಂದರು.

ಸಾಲಕ್ಕೆ ಯಾರು ಹೊಣೆ:

ಮೋದಿ ಸರ್ಕಾರ ಹತ್ತು ವರ್ಷಗಳಲ್ಲಿ ₹ 168 ಲಕ್ಷ ಕೋಟಿ ಸಾಲ ಮಾಡಿದ್ದು ಇದಕ್ಕೆ ಯಾರು ಹೊಣೆ? 1947ರಿಂದ 2014ರ ವರೆಗೆ 14 ಪ್ರಧಾನ ಮಂತ್ರಿಗಳು 67 ವರ್ಷಗಳಲ್ಲಿ ಮಾಡಿದ ಭಾರತದ ಒಟ್ಟು ಸಾಲ ₹ 55 ಲಕ್ಷ ಕೋಟಿ. 2014ರಿಂದ 2024ರ ವರೆಗೆ ಹತ್ತು ವರ್ಷಗಳಲ್ಲಿ ಮೋದಿ ಬರೋಬ್ಬರಿ ₹ 168 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಾಲ ಮಾಡುವ ಮೂಲಕ ದೇಶವನ್ನು ದಿವಾಳಿಗೆ ಎಬ್ಬಿಸಿರುವ ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯ ಕಾಂಗ್ರೆಸ್‌ ಸರ್ಕಾರ ದಿವಾಳಿ ಆಗಿದೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ. ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನು ಅಭಿವೃದ್ಧಿ ಮಾಡಿದೆ ಎಂಬುದನ್ನು ಹೇಳಲಿ ಎಂದ ಅವರು, ಹೀಗಾಗಿ ಕೇಂದ್ರ ಸರ್ಕಾರ ಮಾಡಿರುವ ಲಕ್ಷ ಲಕ್ಷ ಸಾಲದ ಬಗ್ಗೆ ಜನರಿಗೆ ತಿಳಿಸಲು ಜಾಗೃತಿ ಅಭಿಯಾನ ಆರಂಭಿಸಿದ್ದೇವೆ. ಜನನಿಬಿಡ ಪ್ರದೇಶಗಳಿಗೆ ಹೋಗಿ ಜನರಿಗೆ ಮನವರಿಕೆ ಮಾಡುತ್ತೇವೆ. ಕಾಂಗ್ರೆಸ್‌ಗೆ ಮತ ಹಾಕಬೇಕೆಂದಿಲ್ಲ. ನ್ಯಾಯದ ಪರ ಜನರು ಮತಗಳನ್ನು ಹಾಕಲಿ ಎಂದು ಲಾಡ್‌ ಹೇಳಿದರು.

ಪ್ರಜ್ವಲ್‌ ರೇವಣ್ಣ ಅವರ ಮಹಿಳಾ ದೌರ್ಜನ್ಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಕೋಟಿಗಟ್ಟಲೇ ಸಾಲ ಮಾಡಿ ದೇಶ ಬಿಟ್ಟಿದ್ದಾರೆ. ಅವರನ್ನು ಕೇಂದ್ರ ಸರ್ಕಾರ ಹಿಡಿದಿಲ್ಲ. ಮಹಿಳಾ ದೌರ್ಜನ್ಯದ ಅಡಿ ಪ್ರಜ್ವಲ್‌ ರೇವಣ್ಣ ಆರೋಪಿಯಾಗಿದ್ದು, ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲಾಗಿದೆ. ತನಿಖೆ ಮಾಡಿ ದಾಖಲೆಗಳ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.

ಪಾಲಿಕೆ ಸದಸ್ಯರಾದ ಶಂಬು ಸಾಲಿಮನಿ, ಮಯೂರ ಮೋರೆ ಮತ್ತಿತರರು ಇದ್ದರು.

Share this article