ಗಣಿಬಾಧಿತ 4 ಜಿಲ್ಲೆ ಪುನಶ್ಚೇತನ ಡಿಪಿಆರ್ ವಿಳಂಬವೇಕೆ?

KannadaprabhaNewsNetwork |  
Published : Jun 27, 2024, 01:08 AM IST
Mining Meeting | Kannada Prabha

ಸಾರಾಂಶ

ರಾಜ್ಯದ ಗಣಿ ಬಾಧಿತ ನಾಲ್ಕು ಜಿಲ್ಲೆಗಳಲ್ಲಿ ಸರ್ಕಾರ ಅನುಮೋದನೆ ನೀಡಿರುವ ಹಲವು ಪುನಶ್ಚೇತನ ಯೋಜನೆಗಳಿಗೆ ವರ್ಷ ಕಳೆದರೂ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ದಪಡಿಸದಿರುವುದಕ್ಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರದೊಳಗೆ ಡಿಪಿಆರ್‌ ಸಿದ್ದಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ರಾಜ್ಯದ ಗಣಿ ಬಾಧಿತ ನಾಲ್ಕು ಜಿಲ್ಲೆಗಳಲ್ಲಿ ಸರ್ಕಾರ ಅನುಮೋದನೆ ನೀಡಿರುವ ಹಲವು ಪುನಶ್ಚೇತನ ಯೋಜನೆಗಳಿಗೆ ವರ್ಷ ಕಳೆದರೂ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ದಪಡಿಸದಿರುವುದಕ್ಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರದೊಳಗೆ ಡಿಪಿಆರ್‌ ಸಿದ್ದಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಗಣಿ ಬಾಧಿತವಾಗಿರುವ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿ ಪರಿಸರ ಪುನಶ್ಚೇತನ ಯೋಜನೆಗಳಿಗೆ ಡಿಪಿಆರ್‌ ಸಿದ್ಧಪಡಿಸುವಲ್ಲಿ ಆಗಿರುವ ವಿಳಂಬ ಧೋರಣೆಗೆ ಕಾರ್ಯದರ್ಶಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಈ ಯೋಜನೆಗಳ ಅನುಷ್ಠಾನಕ್ಕೆ ಒಂದು ವಾರದೊಳಗೆ ಡಿಪಿಆರ್ ಪೂರ್ಣಗೊಳಿಸಬೇಕು ಹಾಗೂ ಯೋಜನೆಗಳ ಸಕಾಲಿಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂಬಂಧಿಸಿದ ಇಲಾಖೆಯಲ್ಲಿ ಯೋಜನಾ ಮೇಲ್ವಿಚಾರಣೆ ಘಟಕ ಸ್ಥಾಪಿಸುವಂತೆ ಸೂಚಿಸಿದ್ದಾರೆ.

ಪುನಶ್ಚೇತನ ಕಾರ್ಯಗಳ ಮೂಲಕ ಈ ನಾಲ್ಕು ಜಿಲ್ಲೆಗಳನ್ನು ಮಾದರಿ ಜಿಲ್ಲೆಗಳಾಗಿ ಅಭಿವೃದ್ಧಿ ಮಾಡುವಂತೆ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ಅವರಿಗೆ ನಿರ್ದೇಶನ ನೀಡಿದ ಮುಖ್ಯಮಂತ್ರಿ ಅವರು, ಮುಂದಿನ ಸಭೆಯಲ್ಲಿ ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸಹ ಭಾಗವಹಿಸುವಂತೆ ಸೂಚಿಸಿದ್ದಾರೆ.

ಈ ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದಾದ ಪರಿಸರ ಹಾನಿ ಪುನಶ್ಚೇತನ ಯೋಜನೆಗಳಿಗಾಗಿ ಕೆಎಂಇಆರ್‌ಸಿಗೆ 24,996 ಕೋಟಿ ರು. ಒದಗಿಸಲಾಗಿದೆ. ಈ ಪೈಕಿ ರೈಲ್ವೆ ಯೋಜನೆಗಳಿಗೆ 5271.96 ಕೋಟಿ ರು., ಕುಡಿಯುವ ನೀರಿನ ಯೋಜನೆಗಳಿಗೆ 4929.84 ಕೋಟಿ ರು., ಆರೋಗ್ಯ ಕ್ಷೇತ್ರಕ್ಕೆ 1915.78 ಕೋಟಿ ರು., ಪರಿಸರ ಪುನಃಸ್ಥಾಪನೆಗೆ 2655.17 ಕೋಟಿ ರು., ರಸ್ತೆಗಳು ಮತ್ತು ಸಂವಹನ ಯೋಜನೆಗಳಿಗೆ 2559.17 ಕೋಟಿ ರು., ವಸತಿ ಯೋಜನೆಗಳಿಗೆ 1193.98 ಕೋಟಿ ರು. ನಿಗದಿ ಪಡಿಸಲಾಗಿದೆ.

ಇದರಲ್ಲಿ ಯೋಜನೆಗಳ ಆಯ್ಕೆ ಹಾಗೂ ಕಾಮಗಾರಿಗಳ ಪ್ರಗತಿಯ ಮೇಲ್ವಿಚಾರಣಾ ಪ್ರಾಧಿಕಾರ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರು ಒಟ್ಟು 7928.78 ಕೋಟಿ ರು. ಮೊತ್ತದ 358 ಯೋಜನೆಗಳನ್ನು ಅನುಮೋದಿಸಿದ್ದಾರೆ. ಈ ಪೈಕಿ ಒಟ್ಟು 3469.41 ಕೋಟಿ ರು. ವೆಚ್ಚದ 182 ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. 135 ಯೋಜನೆಗಳಿಗೆ ಟೆಂಡರ್‌ ಕರೆಯಲಾಗಿದ್ದು, 47 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 23 ಕಾಮಗಾರಿಗಳನ್ನು ವಿವಿಧ ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಅವರು, ಅನುಮೋದನೆ ನೀಡಿರುವ ಇನ್ನಿತರೆ ಯೋಜನೆಗಳ ಅನುಷ್ಠಾನಕ್ಕೆ ವಾರದೊಳಗೆ ಡಿಪಿಆರ್ ಪೂರ್ಣಗೊಳಿಸಬೇಕು. ಯೋಜನೆಗಳ ಸಕಾಲಿಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂಬಂಧಿಸಿದ ಇಲಾಖೆಯಲ್ಲಿ ಯೋಜನಾ ಮೇಲ್ವಿಚಾರಣೆ ಘಟಕ ಸ್ಥಾಪಿಸಬೇಕು. ಈ ಯೋಜನೆಗಳು ವಿಶೇಷ ಕಾರ್ಯಕ್ರಮವಾಗಿದ್ದು, ಟೆಂಡರ್‌ನ ವಾಡಿಕೆಯ ಷರತ್ತುಗಳು ಅನ್ವಯಿಸುವುದಿಲ್ಲ. ಟೆಂಡರ್‌ನಲ್ಲಿ ನಿಗಮವು ವಾರದೊಳಗೆ ಬಿಲ್‌ ಪಾವತಿಸಲಾಗುವುದರಿಂದ ಯಾವುದೇ ಮುಂಗಡ ನೀಡಲಾಗದು ಎಂಬುದನ್ನು ಗುತ್ತಿಗೆದಾರರಿಗೆ ಸ್ಪಷ್ಟ ಪಡಿಸಲು ಸೂಚಿಸಿದ್ದಾರೆ.

ಇನ್ನು ವಸತಿ ಯೋಜನೆಗಳಡಿ ಫಲಾನುಭವಿಗಳನ್ನು ಶೀಘ್ರವೇ ಗುರುತಿಸಲು ಕ್ರಮ ವಹಿಸಬೇಕು. ಸಣ್ಣ ನೀರಾವರಿ ಇಲಾಖೆ 14 ಯೋಜನೆಗಳ ಪೈಕಿ 7 ಯೋಜನೆಗಳ ಕಾಮಗಾರಿ ಆರಂಭಿಸಲಾಗಿದೆ. ಉಳಿದ 7 ಯೋಜನೆಗಳ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಕಾಮಗಾರಿ ಅನುಷ್ಠಾನ‌ಗೊಳಿಸಬೇಕು. ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಶಾಲೆಗಳ ಕಟ್ಟಡ ದುರಸ್ತಿ, ಕೊಠಡಿ, ಪ್ರಯೋಗಾಲಯ ಸ್ಥಾಪನೆಗೆ ಹಾಗೂ ಅಂಗನವಾಡಿ ಕಟ್ಟಡ, ವಿದ್ಯಾರ್ಥಿ ನಿಲಯಗಳು ಮತ್ತಿತರ ಯೋಜನೆಗಳಿಗೆ ಒತ್ತು ನೀಡುವಂತೆ ನಿರ್ದೇಶಿಸಿದ್ದಾರೆ.

ಸಭೆಯಲ್ಲಿ ಅಭಿವೃದ್ಧಿ ಆಯುಕ್ತೆ ಡಾ. ಶಾಲಿನಿ ರಜನೀಶ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಹಾಗೂ ಸರ್ಕಾರದ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಟೀ, ಕಾಫಿ ದರ ಹೆಚ್ಚಿಸಿದರೆ ಹುಷಾರ್‌: ಸಿದ್ದು ತಾಕೀತು

ನಂದಿನಿ ಹಾಲಿನ ದರ ಹೆಚ್ಚಳ ಮಾಡಿಲ್ಲ. ಉತ್ಪಾದನೆಯಾಗುತ್ತಿರುವ ಹೆಚ್ಚುವರಿ ಹಾಲಿನ ಮಾರಾಟಕ್ಕಾಗಿ ಗ್ರಾಹಕರಿಗೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ನೀಡಿ ಅದಕ್ಕೆ ತಕ್ಕ ದರವನ್ನಷ್ಟೇ ನಿಗದಿ ಮಾಡಲಾಗಿದೆ. ಹಾಗಾಗಿ ಹೋಟೆಲ್‌ಗಳಲ್ಲಿ ಕಾಫಿ ಟೀ ದರ ಹೆಚ್ಚಳ ಸಲ್ಲದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಕೆಎಂಎಫ್‌ ಹಾಲಿನ ದರ ಏರಿಕೆ ಮಾಡಿಲ್ಲ. ರಾಜ್ಯದಲ್ಲಿ 90 ಲಕ್ಷ ಲೀಟರ್‌ ಇದ್ದ ಹಾಲಿನ ಉತ್ಪಾದನೆ 99 ಲಕ್ಷ ಲೀಟರ್‌ಗೆ ಹೆಚ್ಚಿದೆ. ಅದನ್ನು ಖರೀದಿಸಿ ಮಾರಾಟ ಮಾಡಬೇಕು ತಾನೆ? ಖರೀದಿಸುವುದಿಲ್ಲ ಎಂದರೆ ರೈತರಿಗೆ ನಷ್ಟವಾಗುತ್ತದೆ. ಹಾಗಾಗಿ ಅರ್ಧ ಲೀಟರ್‌ ಮತ್ತು 1 ಲೀಟರ್‌ ಹಾಲಿನ್ ಪ್ಯಾಕೆಟ್‌ನಲ್ಲಿ 50 ಮಿ.ಲೀ ಹೆಚ್ಚಳ ಮಾಡಿ ಅದಕ್ಕೆ ತಕ್ಕನಾಗಿ ದರ ನಿಗದಿಪಡಿಸಲಾಗಿದೆ. 2.10 ರು. ದರ ಹೆಚ್ಚಿಸಬೇಕಿತ್ತು. ಆದರೂ 2 ರು. ಹೆಚ್ಚಿಸಲಾಗಿದೆ ಅಷ್ಟೆ. ಹೀಗಿರುವಾಗ ಹೋಟೆಲ್‌ನವರು ಕಾಫಿ, ಟೀ ದರ ಹೆಚ್ಚಿಸಲು ಬರುವುದಿಲ್ಲ. ಹಾಲಿನ ದರ ಹೆಚ್ಚಿಸಿದ್ದರೆ ಅವರು ದರ ಏರಿಕೆ ಮಾಡಬಹುದಿತ್ತು’ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ