ಕನ್ನಡಪ್ರಭ ವಾರ್ತೆ ಯಾದಗಿರಿ
ಬರಗಾಲಕ್ಕೆ ಕೃಷಿ ಚಟುವಟಿಕೆಯಿಲ್ಲದೆ, ಕೆಲಸ ಸಿಗದೇ ಕಂಗಲಾದ ಕೂಲಿ ಕಾರ್ಮಿಕರು, ದುಡಿಯುವ ಕೈಗೆ ಕೆಲಸ ಸಿಗದೆ, ಬೆಂಗಳೂರು-ಮುಂಬೈನಂತಹ ಮಹಾನಗರಗಳಿಗೆ ರೈತ ಕುಟುಂಬ ಸಮೇತ ವಲಸೆ ಹೋಗುತ್ತಿದ್ದಾರೆ. ಯಾದಗಿರಿ ಜಿಲ್ಲೆಯಿಂದ ಭಾರಿ ಪ್ರಮಾಣದಲ್ಲಿ ರೈತ-ಕೂಲಿ ಕಾರ್ಮಿಕ ಕುಟುಂಬಗಳು ತಮ್ಮ ತಮ್ಮ ಮಕ್ಕಳ ಸಮೇತ ವಲಸೆ ಹೋಗುತ್ತಿರುವುದನ್ನು ತಡೆದು, ಸ್ಥಳೀಯವಾಗಿಯೇ ಉದ್ಯೋಗ ನೀಡುವ ಮೂಲಕ ಇದಕ್ಕೆ ಕಡಿವಾಣ ಹಾಕಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ಕೂಲಿ ಕೆಲಸ ಅರಸಿ ಮಹಾನಗರಗಳಿಗೆ ಗುಳೇ ಹೋಗುತ್ತಿರುವವರಿಗೆ ವಿಬಿ-ಜಿ ರಾಮ್ -ಜಿ ಯೋಜನೆಯಡಿ, ಅವರವರ ಗ್ರಾಮಗಳಲ್ಲೇ ವಿವಿಧ ವೈಯಕ್ತಿಕ ಕಾಮಗಾರಿ ಹಾಗೂ ಇನ್ನಿತರ ಕಾಮಗಾರಿಗಳಲ್ಲಿ ಕೂಲಿ ಕೆಲಸ ಕೊಡುವ ಬಗ್ಗೆ ಜಾಗೃತಿ ಮೂಡಿಸಲು ಯಾದಗಿರಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಸವರಾಜ ಶರಭೈ ನೇತೃತ್ವದ ತಂಡ, ಯಾದಗಿರಿ ರೈಲು ನಿಲ್ದಾಣಕ್ಕೆ ತೆರಳಿದ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ, ಮಹಾನಗರಗಳಿಗೆ ಗುಳೇ ಹೋಗಲು ಅಲ್ಲಿ ರೈಲುಗಳಿಗಾಗಿ ಕಾಯ್ದು ಕುಳಿತಿದ್ದ ನೂರಾರು ಜನ ರೈತ-ಕೂಲಿ ಕಾರ್ಮಿಕರನ್ನು ಮಾತನಾಡಿಸಿ, ಅವರಿಗೆ ಕೆಲಸದ ಭರವಸೆ ನೀಡಿ, ಮರಳಿ ಗ್ರಾಮಕ್ಕೆ ತೆರಳುವಂತೆ ಮನವಿ ಮಾಡಿದರು.ಬೇರೆ ಊರುಗಳಿಗೆ ಹೋಗಿ ಸಂಕಷ್ಟ ಪಡುವ ಬದಲು ಸ್ವಂತ ಗ್ರಾಮದಲ್ಲೆ ಕೆರೆ ಹೂಳೆತ್ತುವುದು, ಗೋಕಟ್ಟೆ ನಿರ್ಮಾಣ, ನಾಲಾ ಹೂಳೆತ್ತುವುದು, ರಸ್ತೆ ನಿರ್ಮಾಣ ಕಾಮಗಾರಿ ಸೇರಿ ಇತರೆ ವೈಯಕ್ತಿಕ ಕೆಲಸಗಳನ್ನು ಮಾಡಬಹುದು. ಒಂದು ಕುಟುಂಬಕ್ಕೆ ವರ್ಷದಲ್ಲಿ 125 ದಿನ ಕೂಲಿ ಕೆಲಸ, ಜತೆಗೆ ದಿನಕ್ಕೆ ₹382 ಕೂಲಿ ಪಾವತಿಸಿಲಾಗುತ್ತದೆ. ಒಂದು ಕುಟುಂಬ ನಿರಂತರ 125 ದಿನ ಕೆಲಸ ಮಾಡಿದರೆ 47,750 ರು. ಕೂಲಿ ಹಣ ಗಳಿಸಬಹುದು ಎಂದು ತಿಳಿಸಿದ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಸವರಾಜ್ ಶರಬೈ ತಿಳಿಸಿದರು.
ಯಾದಗಿರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಪಾಟೀಲ, ಸುರಪುರದ ಬಸವರಾಜ ಸಜ್ಜನ್ ಹಾಗೂ ವಡಗೇರಾದ ಶಶಿಧರ ಹಿರೇಮಠ, ಹುಣಸಗಿಯ ಹಾಗೂ ಯಾದಗಿರಿ ತಾ.ಪಂ. ವ್ಯವಸ್ಥಾಪಕ ಶಿವರಾಯ, ವಿಷಯ ನಿರ್ವಾಹಕ ಅನ್ಸರ ಪಟೇಲ್, ಯಾದಗಿರಿ ಜಿಲ್ಲಾ ಪಂಚಾಯಿತಿ ಹಾಗೂ ಯಾದಗಿರಿ ತಾಲೂಕು ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಯಾದಗಿರಿ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲೆಯ ವಿಬಿ-ಜಿರಾಮಜಿ ಯೋಜನೆಯ ಸಿಬ್ಬಂದಿ ಇದ್ದರು.
ಬರಗಾಲದ ಹೊಡೆತ ಬಿದ್ದಿದ್ದು, ಜಮೀನು ಕೆಲಸ ಮಾಡಲು ಆಗುತ್ತಿಲ್ಲ. ಕುಟುಂಬ ನಿರ್ವಹಣೆಗೆ ಬೇರೆ ಕಡೆ ದುಡಿಯಲು ಹೋಗಬೇಕು. ಅದಕ್ಕೆ ಅದೆಲ್ಲ ಬಿಟ್ಟು ಬಿಟ್ಟು ಬೆಂಗಳೂರಿಗೆ ಹೋಗುತ್ತಿದ್ದೇವೆ. ಸಾಲ ತುಂಬಬೇಕಾದರೆ ಬೆಂಗಳೂರಿಗೆ ಹೋಗಿ ದುಡಿದು ಕಟ್ಟುತ್ತಾ ಇದ್ದೀವಿ ಎಂದು ಗುಳೇ ಹೊರಟ ಮಹಿಳೆಯೊಬ್ಬರು ತಿಳಿಸಿದರು.