ಸೋಮರಡ್ಡಿ ಅಳವಂಡಿ
ವಾಯುಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾರ್ಖಾನೆ ವ್ಯಾಪ್ತಿಯಲ್ಲಿ ಆಗಿರುವ ಮಾಲಿನ್ಯ ಮತ್ತು ಮಾಲಿನ್ಯದಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು, ವಿಶೇಷವಾಗಿ ರೈತರ ಬೆಳೆಯ ಮೇಲೆ ಆಗಿರುವ ಪರಿಣಾಮದ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸೂಚಿಸಲಾಯಿತು. ಅದರಂತೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡು ಅಧ್ಯಯನ ವರದಿ ಸಹ ಮಾಡಲಾಯಿತು. ಅದಾದ ಮೇಲೆ ಅದನ್ನು ಇದುವರೆಗೂ ಬಹಿರಂಗ ಮಾಡಲೇ ಇಲ್ಲ. ರೈತರ ದೂರಿಗೆ ಕೇವಲ ಸಬೂಬು ನೀಡಲಾಯಿತೇ ವಿನಃ ವರದಿ ನೀಡಿ, ಏನಾಗಿದೆ ಎನ್ನುವ ಮಾಹಿತಿ ಇದುವರೆಗೂ ಜಿಲ್ಲಾಡಳಿತ ನೀಡಲೇ ಇಲ್ಲ.
ಇದಷ್ಟೇ ಅಲ್ಲ, ಕಾರ್ಖಾನೆ ತ್ಯಾಜ್ಯದಿಂದ ಕೊಪ್ಪಳ ನಗರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿಯೂ ಆಗಿರುವ ಮಾಲಿನ್ಯದ ಕುರಿತು ಸಹ ಅಧ್ಯಯನಕ್ಕಾಗಿ ಪ್ರತ್ಯೇಕ ತಜ್ಞರ ತಂಡ ಕರೆಯಿಸಿ, ಅಧ್ಯಯನ ಮಾಡಿಸಲಾಯಿತಾದರೂ ಆನಂತರ ಅದನ್ನು ಸಹ ಬಹಿರಂಗ ಮಾಡಲೇ ಇಲ್ಲ.ವರದಿ ಅಘಾತಕಾರಿ: ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಅಧ್ಯಯನ ವರದಿಯಲ್ಲಿ ಭಾರಿ ಅಘಾತಕಾರಿ ಅಂಶಗಳನ್ನು ಪತ್ತೆ ಮಾಡಿ ವರದಿ ನೀಡಿದ್ದಾರೆ ಎನ್ನಲಾಗಿದೆ.
ಜಾನುವಾರು ಸಾಕದಂತೆ ಸಲಹೆ: ಇದಲ್ಲದೆ ಜಾನುವಾರುಗಳ ಸಾವು ಹೆಚ್ಚುತ್ತಿರುವುದು ಮತ್ತು ಅವುಗಳು ಗರ್ಭ ಧರಿಸದ ಕುರಿತು ರೈತರು ನೀಡಿದ ದೂರಿನ ಆಧಾರದಲ್ಲಿ ಪಶು ಸಂಗೋಪನಾ ಇಲಾಖೆ ವೈದ್ಯರೊಬ್ಬರು ನಡೆಸಿದ ಅಧ್ಯಯನ ವರದಿಯ ಪ್ರಕಾರ ಕಾರ್ಖಾನೆ ತ್ಯಾಜ್ಯ ವ್ಯಾಪ್ತಿಯಲ್ಲಿ ರೈತರು ಜಾನುವಾರುಗಳನ್ನು ಸಾಕದಿರುವಂತೆ ಸೂಚಿಸಲಾಗಿದೆ. ಆದರೆ, ಹೀಗೆ ನೀಡಿದ ವರದಿ ಆಧರಿಸಿ ಯಾವುದೇ ಕ್ರಮ ವಹಿಸಿಲ್ಲ ಎನ್ನುವುದು ಗಮನಾರ್ಹ ಸಂಗತಿ.
ಕಾರ್ಖಾನೆ ತ್ಯಾಜ್ಯದ ಕುರಿತು ಅಧ್ಯಯನ ವರದಿಯ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದು ಹೇಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.