ನೀರು, ಆಹಾರ ಅರಸಿ ನಾಡಿನಲ್ಲಿ ಕಾಡಾನೆ ಹಿಂಡು ವ್ಯಾಪಕ ದಾಂದಲೆ

KannadaprabhaNewsNetwork |  
Published : Apr 17, 2024, 01:15 AM IST
ಚಿತ್ರ.1: ಕಾಡಾನೆಗಳ ಹಿಂಡು. 2: ಕಾಡಾನೆ ಬಾಳೆ ಹಾಗೂ ಬೋರೆವೆಲ್ ಹಾನಿಗೊಳಿಸಿರುವುದು. | Kannada Prabha

ಸಾರಾಂಶ

ಕಳೆದ 4-5 ದಿನಗಳಿಂದ ಸುಂಟಿಕೊಪ್ಪ ಭಾಗದ ಕೊಡಗರಹಳ್ಳಿ ಉಪ್ಪುತೋಡು, 7ನೇ ಹೊಸಕೋಟೆ, ಕಂಬಿಬಾಣೆ, ಅತ್ತೂರು ನಲ್ಲೂರು, ತೊಂಡೂರು ವ್ಯಾಪ್ತಿಯಲ್ಲಿ ಒಂದು ದೈತ್ಯ ಸಲಗ, ಒಂದು ಮರಿ ತಾಯಿಯಾನೆ ಹಾಗೂ ಕುಳ್ಳಗಿನ ಆನೆ ಸಂಚರಿಸುತ್ತಿದ್ದು, ಆನೇಕ ನಿವಾಸಿಗಳ ಮನೆಯಂಗಳಕ್ಕೆ ಬಂದು ಹೋಗುತ್ತಾ ಆತಂಕ ಸೃಷ್ಟಿಸಿವೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ, ಕಂಬಿಬಾಣೆ, 7ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು ಹಾಗೂ ಮಿನುಕೊಲ್ಲಿ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳು ಹಗಲು ರಾತ್ರಿಯ ಪರಿವೆ ಇಲ್ಲದೆ ಕಾಫಿ ತೋಟಗಳಲ್ಲಿ ಸಂಚರಿಸಿ ಉಪಟಳ ಮುಂದುವರಿಸಿವೆ. ಇದರಿಂದಾಗಿ ಕೃಷಿಕರು, ಬೆಳೆಗಾರರು ಅತಂಕದಲ್ಲಿ ದಿನ ದೂಡುವಂತಾಗಿದೆ ಮಾತ್ರವಲ್ಲ ಜೀವ ಕೈಯಲ್ಲಿ ಹಿಡಿದು ಓಡಾವಂತಾಗಿದೆ.

ಕಳೆದ 4-5 ದಿನಗಳಿಂದ ಕೊಡಗರಹಳ್ಳಿ ಉಪ್ಪುತೋಡು, 7ನೇ ಹೊಸಕೋಟೆ, ಕಂಬಿಬಾಣೆ, ಅತ್ತೂರು ನಲ್ಲೂರು, ತೊಂಡೂರು ವ್ಯಾಪ್ತಿಯಲ್ಲಿ ಒಂದು ದೈತ್ಯ ಸಲಗ, ಒಂದು ಮರಿ ತಾಯಿಯಾನೆ ಹಾಗೂ ಕುಳ್ಳಗಿನ ಆನೆ ಸಂಚರಿಸುತ್ತಿದ್ದು, ಆನೇಕ ನಿವಾಸಿಗಳ ಮನೆಯಂಗಳಕ್ಕೆ ಬಂದು ಹೋಗುತ್ತಾ ಆತಂಕ ಸೃಷ್ಟಿಸಿವೆ.

ಸಾಮಾನ್ಯವಾಗಿ ತಡರಾತ್ರಿ ಬಂದು ಬೆಳಗ್ಗಿನ ವೇಳೆ ಆನೆಕಾಡು ಅಥವಾ ಮೀನು ಅರಣ್ಯಗಳಿಗೆ ತೆರಳುತ್ತಿದ್ದ ಈ ಆನೆಗಳು ಇತ್ತೀಚೆಗೆ ಕೊಡಗರಹಳ್ಳಿ ಉಪ್ಪುತೊಡು ಕಂಬಿಬಾಣೆ ವ್ಯಾಪ್ತಿಯಲ್ಲಿ ಕಾಫಿತೋಟಗಳಲ್ಲೇ ವಾಸ್ತವ್ಯ ಹೂಡುತ್ತಿರುವುದು ಅಂತಂಕಕ್ಕೆ ಕಾರಣವಾಗಿದೆ.

ಮೇವು ಮತ್ತು ನೀರಿನ ಕೊರತೆಯಿಂದ ಜಿಲ್ಲಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಉಪಶಮನ ಮತ್ತು ಪರಿಹಾರ ನೀಡುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಮಾನವ ಜೀವ ಹಾನಿಗೆ ರು. 15 ಲಕ್ಷ ಪರಿಹಾರ, ಆಸ್ತಿ, ಫಸಲು ಫಸಲು ನಷ್ಟಕ್ಕೆ ಪರಿಹಾರ ನೀಡುವುದಕ್ಕೆ ಇಲಾಖೆ ಸೀಮೀತವಾಗಿದ್ದು, ಇದರ ಬಗ್ಗೆ ಜನತೆಯಲ್ಲಿ ಅಸಾಮಾಧಾನವಿದೆ. ಆನೆಗಳನ್ನು ಕಾಲ ಕಾಲಕ್ಕೆ ಹಿಡಿಯುವುದು ಸ್ಥಳಾಂತರಿಸಿ ಕಾಡಿನಿಂದ ನಾಡಿನತ್ತ ಬಾರದಂತೆ ನೋಡಿಕೊಳ್ಳುವುದು ಅರಣ್ಯ ಇಲಾಖೆಯ ಆದ್ಯತೆಯಾಗಬೇಕೆಂದು ಜನರು ಆಗ್ರಹಿಸಿದ್ದಾರೆ.

ಕಳೆದ ಕೆಲವು ಸಮಯದಿಂದ ಇಲ್ಲವಾಗಿದ್ದ ಕಾಡಾನೆಗಳ ಸಂಚಾರ ಈ ವ್ಯಾಪ್ತಿಯಲ್ಲಿ ಹಠತ್ತಾಗಿ ಕಾಣಿಸಿಕೊಂಡಿದೆ. ಕಳೆದ ಹಲವು ದಿನಗಳಿಂದ 2- 4 ಆನೆಗಳ ಗುಂಪು ಸಂಚಾರ ಮಾಡುತ್ತಿವೆ. ಇದರಿಂದಾಗಿ ಬೆಳ್ಳಂಬೆಳಗ್ಗೆ ವಾಯುವಿಹಾರ, ದೂರದ ಊರುಗಳಿಗೆ ಸ್ವಂತ ವಾಹನ ಅಥವಾ ಬಾಡಿಗೆ ವಾಹನಗಳಲ್ಲಿ ತೆರಳುವವರಿಗೆ ಆತಂಕ ಎದುರಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಕಾಡಾನೆಗಳು ದಾರಿಯಲ್ಲೇ ಮುಖಾಮುಖಿ ಎದುರಾಗಿ ಕೆಲವು ಕಾರ್ಮಿಕರು ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ನಡೆಸಿದ ಪ್ರಕರಣಗಳು ಜನಮಾನಸದಲ್ಲಿ ಇನ್ನು ಹಸಿಯಾಗಿರುವಾಗಲೇ ಕಾಡಾನೆಗಳ ಉಪಟಳದಿಂದಾಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ ಘಟನೆಗಳೂ ಸಂಭವಿಸಿದೆ.

ವ್ಯಾಪಕ ಫಸಲು ನಾಶ:

ಕಾಫಿ ಜೊತೆಗೆ ಅಡಕೆ, ಬಾಳೆ, ಕಿತ್ತಳೆ, ಬೆಣ್ಣೆ ಹಣ್ಣಿನ ಗಿಡಗಳನ್ನು ನೆಟ್ಟವರಿಗೆ ಕಾಡಾನೆ ಕಾಟ ಅಪಾರವಾಗಿದೆ. ಈಗಾಗಲೇ ಬಿರು ಬೇಸಿಗೆಯ ದಿನಗಳು ಎದುರಾಗಿದ್ದು, ಪಟ್ಟಣಗಳು ಸೇರಿದಂತೆ ಹಳ್ಳಿಗಳಲ್ಲಿ ಕೂಡ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕಾಡಾನೆಗಳು ಸೇರಿದಂತೆ ಇತರ ವನ್ಯಪ್ರಾಣಿಗಳು ಆಹಾರ ಮತ್ತು ನೀರನ್ನು ಅರಸಿ ಕಾಡಿನಿಂದ ನಾಡಿನತ್ತ ಬರುವುದು ಸಹಜ. ಈ ಸಂದರ್ಭದಲ್ಲಿ ಹೆಚ್ಚು ವನ್ಯಜೀವಿ ಮಾನವ ಸಂಘರ್ಷ ಜೋತೆಗೆ ಕೃಷಿಕರ ಅಸ್ತಿಪಾಸ್ತಿ ಫಸಲು ನಷ್ಟಗೊಳ್ಳುವುದರೊಂದಿಗೆ ಮಾನವ ಪ್ರಾಣ ಹಾನಿ ಸಂಭವಿಸುವುದಕ್ಕೆ ಮುನ್ನಡಿ ಬರೆದಂತಾಗಿದೆ.

ಪರಿಹಾರ ಮೊತ್ತ ಸಾಲದು:

ಈಗಾಗಲೇ ರಾಜ್ಯ ಸರ್ಕಾರ ಆನೆ ಹಾವಳಿ ತಡೆ ಕ್ಷಿಪ್ರಪಡೆ ರಚಿಸಿದ್ದು ಜೊತೆಗೆ ಮಾನವ ಪ್ರಾಣಹಾನಿ ಬೆಳೆ ಮತ್ತು ಕೃಷಿ ಹಾನಿಗೆ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿದೆ. ಆದರೂಇದು ಕೃಷಿಕನ ಖರ್ಚುವೆಚ್ಚಗಳಿಗೆ ಸರಿಸಾಟಿಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಆನೆ ಹಿಡಿದು ಸ್ಥಳಾಂತರ ಮಾಡುವುದು ಏಕೈಕ ಪರಿಹಾರ ಎಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ.

ಜಿಲ್ಲೆಯಾದ್ಯಂತ ಆನೆಯೊಂದಿಗೆ ಹುಲಿಗಳು, ಕಾಡೆಮ್ಮೆ ಹಾಗೂ ಮಂಗಗಳ ಕಾಟದಿಂದ ಒಂದಲ್ಲ ಒಂದು ರೀತಿಯಲ್ಲಿ ಕೃಷಿಕರು ಅತಂಕಕ್ಕೆ ಒಳಗಾಗುತ್ತಿದ್ದಾರೆ.

ಸೋಮವಾರ ರಾತ್ರಿ ಆಹಾರ ಅರಸಿ ಬಂದ ಕಾಡಾನೆಗಳು ಹಿಂಡು ಕೀರ್ತನ್ ತೋಟದ ಮನೆಯ ಅಂಗಳಕ್ಕೆ ಲಗ್ಗೆ ಇಟ್ಟ ಸಂದರ್ಭ ಕಾಫಿ, ಬಾಳೆ, ಪಪ್ಪಾಯಿ ಹಣ್ಣುಗಳ ಮರಗಳನ್ನು ತಿಂದು ನಾಶಗೊಳಿಸಿವೆ. ಬೋರ್‌ವೆಲ್‌ಗೆ ಹಾನಿ ಮಾಡಿದೆ.

....................

ಕೊಡಗಿನಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಮೀತಿಮಿರಿದ್ದು ತೋಟ ಕಾರ್ಮಿಕರು ಈ ವ್ಯಾಪ್ತಿಯಲ್ಲಿ ಜೀವ ಕೈಯಲ್ಲಿ ಹಿಡಿದು ಕೆಲಸ ನಿರ್ವಹಿಸಬೇಕಾಗಿದೆ. ಜೀವಹಾನಿ, ಬೆಳೆ ನಷ್ಟಕ್ಕೆ ಬೆಲೆ ಕಟ್ಟುವುದು ನಿಲ್ಲಿಸಿ ಶಾಶ್ವತ ಪರಿಹಾರ ಪ್ರತಿ ಬಾರಿಯೂ ಬೇಡಿಕೆಯನ್ನು ಸಲ್ಲಿಸಿ ಒತ್ತಾಯಿಸಲಾಗುತ್ತಿದ್ದರೂ ನಮ್ಮ ಕೂಗು ಅರಣ್ಯರೋಧನವಾಗಿಯೇ ಉಳಿದಿರುವುದು ವಿಷಾದನೀಯ.

-ನಾರಾಯಣ ನಾಯಕ, ಕೊಡಗರಹಳ್ಳಿ ನಿವಾಸಿ.

................

ಅರಣ್ಯ ಕಾರ್ಯಪಡೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಕಾಡ್ಗಿಚ್ಚು ತಡೆ ಕೆಲಸಗಳಿಗೂ ಬಳಕೆಯಾಗುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಹಿಂದುಳಿದಿರುವ ಕಾರಣ ಆನೆ ಮಾನವ ಸಂಘರ್ಷದಲ್ಲಿ ಎಷ್ಟು ಉಪಶಮನ ಮತ್ತು ಪರಿಹಾರ ಸಾಧಿಸಬಹುದಾಗಿತ್ತೋ ಅಷ್ಟನ್ನು ಸಾಧಿಸಲು ಸಾಧ್ಯವಾಗಿಲ್ಲ.

-ಹೆಸರು ಹೇಳಲು ಇಚ್ಛಿಸದ ಆರ್‌ಆರ್‌ಟಿ ಸಿಬ್ಬಂದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ