ರಾಯಚೂರು ಬಂದ್‌ ಹೋರಾಟಕ್ಕೆ ವ್ಯಾಪಕ ಬೆಂಬಲ

KannadaprabhaNewsNetwork |  
Published : Oct 04, 2024, 01:04 AM IST
03ಕೆಪಿಆರ್‌ಸಿಆರ್ 01 | Kannada Prabha

ಸಾರಾಂಶ

ರಾಯಚೂರು ಜಿಲ್ಲಾ ಬಂದ್ ಹೋರಾಟ ಹಿನ್ನೆಲೆಯಲ್ಲಿ ನಗರದಲ್ಲಿರುವ ಕೇಂದ್ರ ಬಸ್ ನಿಲ್ದಾಣವು ಬಸ್‌ ಹಾಗೂ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು.

ಕನ್ನಡಪ್ರಭ ವಾರ್ತೆ ರಾಯಚೂರು

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಗುರುವಾರ ಕರೆ ಕೊಟ್ಟಿದ್ದ ರಾಯಚೂರು ಜಿಲ್ಲಾ ಬಂದ್‌ ಹೋರಾಟಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬಂದ್ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ.

ನಗರ ಸೇರಿದಂತೆ ಜಿಲ್ಲೆ ವಿವಿಧ ತಾಲೂಕುಗಳಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಐಕ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಅನೇಕ ಪ್ರಗತಿಪರ ಸಂಘಟನೆಗಳು ಹಾಗೂ ದಲಿತರ ಸಂಘಟನೆಗಳು ರಾಯಚೂರು ಬಂದ್ ಹಿನ್ನೆಲೆಯಲ್ಲಿ ಹಲವಾರು ಪ್ರತಿಭಟನೆಗಳನ್ನು ನಡೆಸಿ ರಾಜ್ಯ ಸರ್ಕಾರಕ್ಕೆ ಬಿಸಿಮುಟ್ಟಿಸಿದರು.

ಗುರುವಾರ ಬೆಳಗ್ಗೆಯಿಂದಲೆಯೇ ಬಂದ್‌ ವಾತಾವರಣ ಕಂಡುಬಂದಿತು. ತರಕಾರಿ ಮಾರುಕಟ್ಟೆ, ಎಪಿಎಂಸಿ ಸೇರಿದಂತೆ ಸರಾಫ್‌ ಬಜಾರ್‌, ಕಿರಾಣಿ ಬಜಾರ್‌, ಬಟ್ಟೆ ಮಾರುಕಟ್ಟೆಗಳಲ್ಲಿನ ಅಂಗಡಿ ಮುಂಗಟ್ಟುಗಳು ಬಂದಾಗಿದ್ದವು, ವರ್ತಕರು ತಮ್ಮ ವ್ಯಾಪಾರ-ವಹಿವಾಟನ್ನು ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲಿಸಿದರು.

ಇನ್ನು ನಗರದ ಹರಿಜನವಾಡ ಬಡಾವಣೆ ಹಾಗೂ ಸ್ಟೇಷನ್ ಪ್ರದೇಶ ಸೇರಿದಂತೆ ವಿವಿಧ ಬಡಾವಣೆಗಳಿಂದ ದಲಿತ ಸಮುದಾಯದ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಮೆರವಣಿಗೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಂದು ಸೇರಿದರು. ಅಲ್ಲದೇ ಕೆಲ ಹೋರಾಟಗಾರರ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್‍ಯಾಲಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಂದ್ ಹೋರಾಟ ಹಿನ್ನೆಲೆಯಲ್ಲಿ ಸ್ಥಳೀಯ ಜಿಲ್ಲಾ ಕೇಂದ್ರ ಬಸ್ ನಿಲ್ದಾಣವು ಸಾರಿಗೆ ಬಸ್‌, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು. ಸಂಪೂರ್ಣವಾಗಿ ಸಾರಿಗೆ ಸೇವೆ ಬಂದಾಗಿದ್ದರಿಂದ ಕೆಲ ಪ್ರಯಾಣಿಕರು ಸಮಸ್ಯೆ ಅನುಭವಿಸಿದರು.

ರಾಯಚೂರು ಬಂದ್ ಪ್ರತಿಭಟನೆ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಮಾಹಿತಿ ತಿಳಿದು ಕೆಲ ಪ್ರಯಾಣಿಕರು ವಾಪಸ್ ತೆರಳಿದರೆ, ಕೆಲ ಪ್ರಯಾಣಿಕರು ಖಾಸಗಿ ವಾಹನಗಳನ್ನೇ ಅನುಸರಿಸಿದರು. ನಗರದಲ್ಲಿ ಸರ್ಕಾರದ ವಿವಿಧ ಇಲಾಖೆಯ ಕಚೇರಿಗಳ ನಡೆದರೂ ಜನರ ಮಾತ್ರ ಕಂಡುಬರಲಿಲ್ಲ.

ಬಂದ್‌ ಹಿನ್ನೆಲೆಯಲ್ಲಿ ನಗರದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಹಾಕಿದ್ದರು. ಸರಕು ವಾಹನಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ಮುಖಂಡರಾದ ಅಂಬಣ್ಣ ಆರೋಲಿಕರ್, ಎಂ.ವಿರುಪಾಕ್ಷಿ, ಪಿ.ಯಲ್ಲಪ್ಪ, ನರಸಪ್ಪ ದಂಡೋರಾ, ಜೆ.ಬಿ ರಾಜು, ರವೀಂದ್ರ ಜಲ್ದಾರ್, ಬಾಲಸ್ವಾಮಿ ಕೊಡ್ಲಿ, ಹೇಮರಾಜ ಅಸ್ಕಿಹಾಳ,ಕೆ.ಪಿ ಅನಿಲ ಕುಮಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ