ಶುಂಠಿಗೆ ವ್ಯಾಪಕ ಎಲೆಚುಕ್ಕೆ ರೋಗ: ವಿಜ್ಞಾನಿಗಳಿಂದ ಪರಿಶೀಲನೆ

KannadaprabhaNewsNetwork |  
Published : Sep 02, 2025, 12:00 AM IST
ಪೊಟೋ1ಎಸ್.ಆರ್‌.ಎಸ್‌8 (ಎಲೆಚುಕ್ಕೆ ರೋಗ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳ ಹಾಗೂ ತೋಟಗಾರಿಕಾ ಇಲಾಖೆ ತಂಡವು ರೈತರ ಗದ್ದೆಗಳಿಗೆ ತೆರಳಿ ಪರಿಶೀಲನೆ ನಡೆಸಿದೆ.) | Kannada Prabha

ಸಾರಾಂಶ

ವಿಜ್ಞಾನಿಗಳ ಹಾಗೂ ತೋಟಗಾರಿಕಾ ಇಲಾಖೆ ತಂಡವು ರೈತರ ಗದ್ದೆಗಳಿಗೆ ತೆರಳಿ ಪರಿಶೀಲನೆ ನಡೆಸಿದೆ.

ಶಿರಸಿ: ತಾಲೂಕಿನ ಪೂರ್ವ ಭಾಗದಲ್ಲಿ ಶುಂಠಿ ಬೆಳೆಗೆ ವ್ಯಾಪಕವಾಗಿ ಎಲೆಚುಕ್ಕೆ ರೋಗ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳ ಹಾಗೂ ತೋಟಗಾರಿಕಾ ಇಲಾಖೆ ತಂಡವು ರೈತರ ಗದ್ದೆಗಳಿಗೆ ತೆರಳಿ ಪರಿಶೀಲನೆ ನಡೆಸಿದೆ.

ತಾಲೂಕಿನ ಬನವಾಸಿ ಹೋಬಳಿ ಮತ್ತು ಮುಂಡಗೋಡ ಪ್ರದೇಶದ ವ್ಯಾಪ್ತಿಯಲ್ಲಿ ಶುಂಠಿಯನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಬನವಾಸಿ ಭಾಗದ ತಿಗಣಿ, ಅಜ್ಜರಣಿ, ಗುಡ್ನಾಪುರ, ನವಣಗೇರಿ ಗ್ರಾಮಗಳಲ್ಲಿ ಬೆಳೆದ ಶುಂಠಿ ಬೆಳೆಗೆ ಎಲೆಚುಕ್ಕೆ ರೋಗ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ತಂಡ ಶುಂಠಿ ತಾಕುಗಳಿಗೆ ಭೇಟಿಕೊಟ್ಟು ಪರಿಶೀಲಿಸಿ ಎಲೆಚುಕ್ಕೆ ರೋಗ ವ್ಯಾಪಕವಾಗಿ ಹಬ್ಬುತ್ತಿರುವುದನ್ನು ದೃಢಪಡಿಸಿದ್ದಾರೆ.

ಪ್ರಸ್ತುತ ಎಲೆಚುಕ್ಕೆ ರೋಗ ಹರಡಲು ಪೂರಕವಾದ ವಾತಾವರಣ (ತುಂತುರು ಮಳೆ, ಕಡಿಮೆ ಉಷ್ಣಾಂಶ ಮತ್ತು ಅಧಿಕ ತೇವಾಂಶ) ದಿಂದ ವ್ಯಾಪಕವಾಗಿ ಎಲೆಚುಕ್ಕೆ ರೋಗ ಹರಡುತ್ತಿದೆ. ಕೊಲೆಟೊಟ್ರೆಂಕಮ್, ಪಿಲ್ಲೊಸ್ಟಿಕ್ಟಾ ಮತ್ತು ಫೈರಿಕ್ಯುಲೇರಿಯಾ ರೋಗಾಣುಗಳು ಕಂಡುಬಂದಿದೆ. ಈ ರೋಗವು ಗಾಳಿಯಲ್ಲಿ ವೇಗವಾಗಿ ಹರಡುವುದರಿಂದ ಸಮಗ್ರ ರೋಗ ನಿರ್ವಹಣೆಯನ್ನು ಕೈಗೊಳ್ಳಲು ರೈತರಿಗೆ ವಿಜ್ಞಾನಿಗಳ ತಂಡ ರೈತರಿಗೆ ಸಲಹೆ ನೀಡಿದೆ.

ಶುಂಠಿ ತಾಕಿನಲ್ಲಿ ಕಳೆ ನಿಯಂತ್ರಿಸುವುದು. ನೀರು ನಿಲ್ಲದಂತೆ ಬಸಿಗಾಲುವೆ ನಿರ್ವಹಿಸುವುದು. ಬದುಗಳಲ್ಲಿ ಕಳೆಗಳ ನಿರ್ವಹಣೆ ಹಾಗೂ ಪ್ರಾರಂಭಿಕ ಹಂತದಲ್ಲಿ ಸ್ಪರ್ಶ ಶಿಲೀಂದ್ರನಾಶಕಗಳಾದ ಮ್ಯಾಂಕೊಜೆಬ್ 3 ಗ್ರಾಂ/ಲೀಟರ್ ನೀರಿಗೆ ಅಥವಾ ಕಾಪರ್ ಆಕ್ಸಿ ಕ್ಲೋರೈಡ್ 3 ಗ್ರಾಂ/ಲೀಟರ್ ನೀರಿಗೆ ಅಥವಾ ಪ್ರೊಪಿನೆಬ್ 2 ಗ್ರಾಂ/ಲೀಟರ್ ನೀರಿಗೆ ಜೊತೆಗೆ ಅಂಟು ದ್ರಾವಣ 0.5 ಮಿಲೀ ಲೀಟರ್ ನೀರಿಗೆ ಬೆರೆಸಿ ಚೆನ್ನಾಗಿ ತೋಯುವಂತೆ ಸಿಂಪಡಿಸುವುದು. ಪ್ರಸ್ತುತ ಶುಂಠಿ ತಾಕಿನಲ್ಲಿ ರೋಗವಿದ್ದಲ್ಲಿ ಅಂತರವ್ಯಾಪಿ ಶಿಲೀಂದ್ರನಾಶಕಗಳಾದ ಪ್ರೊಪಿಕೊನಾಜೋಲ್ 1 ಮಿಲೀ ಅಥವಾ ಹೆಕ್ಸಾಕೊನಾಜೋಲ್ ೧ ಮಿಲೀ ಅಥವಾ ಡೈಪೆನ್‌ಕೊನಾಜೋಲ್ 1 ಮಿಲೀ ಅಥವಾ ಟೆಬಿಕೊನಾಜೋಲ್ 1 ಮಿಲೀ ಜೊತೆಗೆ 0.5 ಮಿಲೀ ಅಂಟನ್ನು ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. ಇದರ ಜೊತೆಗೆ ಸಮಗ್ರ ಪೋಷಕಾಂಶಗಳನ್ನು ಪೂರೈಸುವುದು ಮತ್ತು ಶುಂಠಿ ಸ್ಪೆಷಲ್ ಅನ್ನು ಬೆಳೆಯ ಮೂರು ತಿಂಗಳ ನಂತರ ಪ್ರತಿ ತಿಂಗಳಿಗೊಮ್ಮೆ 5 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಶಿರಸಿಯ ವಿಜ್ಞಾನಿಗಳಾದ ಡಾ. ಪ್ರಸಾದ ಪಿ.ಎಸ್., ಮುಖ್ಯಸ್ಥರು (೯೯೦೧೦೬೬೬೯೯), ಲಕ್ಷ್ಮಣ ಪಡನಾಡ, ಹಿರಿಯ ತಾಂತ್ರಿಕ ಅಧಿಕಾರಿಗಳು ( ೯೯೪೫೩೧೬೪೭೨) ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಗಣೇಶ ಹೆಗಡೆ (೭೮೯೨೯೪೫೩೯೬), ತಮ್ಮಣ್ಣ ( ೯೭೪೧೮೯೮೫೬೩) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ