ಬೆಂಗಳೂರು ದಕ್ಷಿಣ ಸೇರ್ಪಡೆಗೆ ವ್ಯಾಪಕ ವಿರೋಧ

KannadaprabhaNewsNetwork |  
Published : Oct 04, 2025, 12:00 AM IST
ಫೋಟೋ ಇದೆ  : 3 ಕೆಜಿಎಲ್ 1 : - ಕುಣಿಗಲ್ ಪಟ್ಟಣದ  ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಪೂರ್ವಭಾವಿ ಸಭೆ | Kannada Prabha

ಸಾರಾಂಶ

ತುಮಕೂರು ಜಿಲ್ಲೆಯಲ್ಲಿರುವ ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಬೇಕೆಂದು ಸರ್ಕಾರದ ಮುಂದೆ ಅನಿವಾಸಿಗಳು ನೀಡಿರುವ ಪ್ರಸ್ತಾವನೆಯನ್ನು ಇಲ್ಲಿನ ಕಾಯಂ ನಿವಾಸಿಗಳು ವಿರೋಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ತುಮಕೂರು ಜಿಲ್ಲೆಯಲ್ಲಿರುವ ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಬೇಕೆಂದು ಸರ್ಕಾರದ ಮುಂದೆ ಅನಿವಾಸಿ ಕುಣಿಗಲ್ ವಾಸಿಗಳು ನೀಡಿರುವ ಪ್ರಸ್ತಾವನೆಯನ್ನು ಇಲ್ಲಿನ ಕಾಯಂ ನಿವಾಸಿಗಳು ವಿರೋಧಿಸಿದ್ದಾರೆ.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ವೈಎಚ್ ಹುಚ್ಚಯ್ಯ ಕುಣಿಗಲ್ ಭೌಗೋಳಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬೆಂಗಳೂರು ದಕ್ಷಿಣ ಅಥವಾ ರಾಮನಗರಕ್ಕೆ ಸೇರುವುದಿಲ್ಲ. ಅದನ್ನು ಕುಣಿಗಲ್ ತುಮಕೂರು ಎಂದು ನಾವು ಭಾವಿಸಿಕೊಂಡಿದ್ದೇವೆ. ಕಲ್ಪತರು ನಾಡಿನ ಶ್ರೇಷ್ಠತೆ ಹಾಗೂ ಸಾಂಸ್ಕೃತಿಕ ಬೇರೆ ರಾಮನಗರ ಹಾಗೂ ದಕ್ಷಿಣದ ಸಂಸ್ಕೃತಿ ಬೇರೆ ಆಗಿದೆ ಈ ಹೊಂದಾಣಿಕೆ ಸಾಧ್ಯವಿಲ್ಲ ಎಂದರು. ವಿಚಾರವಾಗಿ ಸರ್ಕಾರದಲ್ಲಿ ನಡೆಯುವ ಪ್ರಕ್ರಿಯೆಗಳನ್ನು ತಡೆಯುವ ವಿಚಾರವಾಗಿ ಮತ್ತು ಹೋರಾಟ ರೂಪಿಸುವ ಸಲುವಾಗಿ ಕುಣಿಗಲ್ ತಾಲೂಕು ಉಳಿವಿಗಾಗಿ ಹೋರಾಟ ಸಮಿತಿಯನ್ನು ಕಾಂಗ್ರೆಸ್ ಹೊರತುಪಡಿಸಿ ಮಿಕ್ಕೆಲ್ಲ ಪಕ್ಷ ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ತೀರ್ಮಾನಿಸಲಾಯಿತು ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಮಾತನಾಡಿ, ಕೇವಲ ಅರ್ಧ ಗಂಟೆಯಲ್ಲಿ ತುಮಕೂರಿಗೆ ತೆರಳಿ ಅಲ್ಲಿನ ಕಚೇರಿಗಳನ್ನು ಸಂಪರ್ಕ ಮಾಡಿ ತಮಗೆ ಬೇಕಾದ ಕೆಲಸ ಕಾರ್ಯಗಳನ್ನು ಮಾಡಿ ವಾಪಸ್ ಬರುವ ಕುಣಿಗಲ್ ರಾಮನಗರಕ್ಕೆ ಅಥವಾ ಬೆಂಗಳೂರಿಗೆ ತೆರಳಿ ಕಾಣದ ಊರಿನಲ್ಲಿ ಅವರು ಸಮಸ್ಯೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಒಂದು ವೇಳೆ ಸರ್ಕಾರ ನಮ್ಮ ಭಾವನೆಗಳಿಗೆ ಬೆಲೆ ನೀಡದಿದ್ದರೆ ಹೋರಾಟ ಅನಿವಾರ್ಯ ಎಂದರು.

ಅರೇ ಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ತಾಲೂಕು ತನ್ನದೇ ಆದ ಆಧ್ಯಾತ್ಮ ಶಕ್ತಿ ಹೊಂದಿದ್ದು ತುಮಕೂರು ಜಿಲ್ಲೆಯ ಜೊತೆ ಬೆಸೆದುಕೊಂಡಿದೆ ಆ ಸಂಪರ್ಕವನ್ನು ಕಳಚುವ ಶಕ್ತಿಗೆ ಕೈ ಹಾಕಿದರೆ ಅಪಾಯ ಕಟ್ಟಿಟ್ಟ ಬುತ್ತಿ . ಕುಣಿಗಲ್ ನಲ್ಲಿ ಹಲವು ಹೋರಾಟಗಳು ಹುಟ್ಟಿದೆ. ಕುಣಿಗಲ್ ಉಳಿವಿಗಾಗಿ ಉತ್ತಮ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿ ದುಷ್ಟ ಶಕ್ತಿಗಳನ್ನು ದಮನ ಮಾಡೋಣ ಎಂದರು. ಜೆಡಿಎಸ್ ಮುಖಂಡ ಬಿಎನ್ ಜಗದೀಶ್ ಮಾತನಾಡಿ, ಕುಣಿಗಲ್ ತಾಲೂಕಿನಲ್ಲಿ ಎಲ್ಲವೂ ಕೂಡ ಸಮೃದ್ಧವಾಗಿದೆ ಕುಣಿಗಲ್ ಮೇಲೆ ಕಣ್ಣು ಹಾಕಿರುವ ಕೆಲವು ರಾಜಕಾರಣಿಗಳು ತಮ್ಮ ರಾಜಕೀಯ ಬಂಡವಾಳ ಹೆಚ್ಚಿಸಿಕೊಳ್ಳಲು ಹಾಗೂ ಇಲ್ಲಿಂದ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕುಣಿಗಲ್ ಅನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ತಯಾರಿ ನಡೆಯುತ್ತಿದ್ದಾರೆ ಆದರೆ ಅದಕ್ಕೆ ಕುಣಿಗಲ್ ಜನತೆ ಸ್ಪಂದಿಸುವುದಿಲ್ಲ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕಪನಿಪಾಳ್ಯ ರಮೇಶ್ ಮಾತನಾಡಿ ಕುಣಿಗಲ್ ತಾಲೂಕನ್ನು ಉಳಿಸಿಕೊಳ್ಳಬೇಕಾಗಿರುವಂತಹ ಜವಾಬ್ದಾರಿ ಪ್ರತಿ ಮನೆಯ ಮಗನ ಕರ್ತವ್ಯವಾಗಿದೆ. ಅದಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದ್ದು ಈ ಮೋಸದ ಜಾಲಕ್ಕೆ ಯಾರೂ ಕೂಡ ಸಹಕಾರ ಮಾಡಬಾರದು ಎಂದರು. ರೈತ ಸಂಘದ ಮುಖಂಡ ಆನಂದ್ ಪಟೇಲ್ ಹುಲಿಕಟ್ಟೆ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಒಂದು ಕುಟುಂಬ ರಚಿಸುತ್ತಿರುವ ಈ ಮೋಸದ ಜಾಲಕ್ಕೆ ಯಾರು ಕೂಡ ಬಲಿ ಆಗಬಾರದು.ಇದನ್ನು ವಿರೋಧಿಸಿ ನಾವು ಕಾನೂನು ಮುಖಾಂತರ ಅಥವಾ ಹೋರಾಟಗಳ ಮುಖಾಂತರ ಕುಣಿಗಲ್ಲನ್ನು ತುಮಕೂರು ಜಿಲ್ಲೆಯಲ್ಲಿ ಉಳಿಸಿಕೊಳ್ಳಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಸಿಂಗಯ್ಯ ಮಾತನಾಡಿ, ಕುಣಿಗಲ್ ತಾಲೂಕು ತುಮಕೂರು ಜಿಲ್ಲೆಯಲ್ಲಿ ಉಳಿಸುವ ಸಲುವಾಗಿ ಕಾನೂನು ಹೋರಾಟವನ್ನು ಮಾಡಲು ನಮ್ಮ ಕಾನೂನು ಘಟಕ ಸದಾ ಈ ಹೋರಾಟದ ಜೊತೆ ಇರುತ್ತದೆ ಎಂದು ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರಾಮಯ್ಯ ಮುಖಂಡ ಹುಚ್ಚೇಗೌಡ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ದಿನೇಶ, ಹೋರಾಟಗಾರ ಜಿ ಕೆ ನಾಗಣ್ಣ, ಇತರರಿದ್ದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ