ವ್ಯಾಪಕ ಮಳೆ: ಪ್ರವಾಸಿ ಸ್ಥಳಗಳಲ್ಲಿ ಸೂಕ್ತ ರಕ್ಷಣೆಗೆ ಡಿಸಿ ಸೂಚನೆ

KannadaprabhaNewsNetwork | Published : Jul 31, 2024 1:14 AM

ಸಾರಾಂಶ

ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಸೂಕ್ಷ್ಮ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಸ್ಥಳ/ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದ್ದಾರೆ. ವಿಡಿಯೋ ಸಂವಾದ ಮೂಲಕ ಮಂಗಳವಾರ ವಿವಿಧ ಹಂತದ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಸೂಕ್ಷ್ಮ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಸ್ಥಳ/ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದ್ದಾರೆ.

ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ವಿಡಿಯೋ ಸಂವಾದ ಮೂಲಕ ಮಂಗಳವಾರ ವಿವಿಧ ಹಂತದ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಪ್ರವಾಸಿ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ದುಬಾರೆ, ನಿಸರ್ಗಧಾಮ, ಮತ್ತಿತರ ಪ್ರವಾಸಿ ಸ್ಥಳಗಳಲ್ಲಿ ಸೂಕ್ತ ರಕ್ಷಣೆ ಇರಬೇಕು. ಅನಿವಾರ್ಯವಾದಲ್ಲಿ ನಿರ್ಬಂಧ ಹೇರಬೇಕು. ಈ ಸಂಬಂಧ ಮೊದಲೇ ಪತ್ರಿಕಾ ಪ್ರಕಟಣೆ ನೀಡುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಈ ಹಿನ್ನೆಲೆ ಸೋಮವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ತಹಶೀಲ್ದಾರರು, ತಾ.ಪಂ.ಇಒಗಳು ಹಾಗೂ ನೋಡಲ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಪ್ರವಾಹ ಮತ್ತು ಭೂಕುಸಿತ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ /ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವ ಜೊತೆಗೆ ಕಾಳಜಿ ಕೇಂದ್ರದಲ್ಲಿ ಅಗತ್ಯ ಮೂಲಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಪ್ರಾಕೃತಿಕ ವಿಕೋಪ ನಿರ್ವಹಣೆಗಾಗಿ ಗ್ರಾ.ಪಂ.ಗೆ ಹಣ ಬಿಡುಗಡೆ ಮಾಡಲಾಗುವುದು. ಜನ-ಜಾನುವಾರು ಆಸ್ತಿ ಪಾಸ್ತಿ ರಕ್ಷಣೆ ಮಾಡುವುದು ಅತೀಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ವ್ಯಾಪಕ ಮಳೆ ಮುನ್ನೆಚ್ಚರಿಕೆ:

ಕಳೆದ 20 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಎಚ್ಚರವಹಿಸಬೇಕಿದೆ ಎಂದರು. ಪಕ್ಕದ ವಯನಾಡು ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಪ್ರಾಣಹಾನಿ ಹಾಗೂ ಸಾಕಷ್ಟು ನಷ್ಟ ಉಂಟಾಗಿದೆ. ಆದ್ದರಿಂದ ಜನ ಜಾನುವಾರು ರಕ್ಷಣೆಗೆ ಮುಂದಾಗಬೇಕು. ಸೋಮವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಪ್ರಾಕೃತಿಕ ವಿಕೋಪ ಎದರಿಸುವಲ್ಲಿ ಪೊಲೀಸ್ ಇಲಾಖೆ ಜಿಲ್ಲಾಡಳಿತದ ಜೊತೆ ಸದಾ ಸನ್ನದ್ಧವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಪೊಲೀಸ್ ಇಲಾಖೆಯು ಸಹ ಅಗತ್ಯ ಸಹಕಾರ ನೀಡಲಿದ್ದಾರೆ ಎಂದರು.

ಪೊಲೀಸ್ ಇಲಾಖೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಮಾಹಿತಿ ಸಂಪನ್ಮೂಲವಿದ್ದು, ಅದನ್ನು ಬಳಸಿಕೊಂಡು ಯಾವುದೇ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮಾತನಾಡಿ, ಮಡಿಕೇರಿ ತಾಲೂಕಿನ ಭೂಕುಸಿತ ಪ್ರದೇಶದಲ್ಲಿ ಕಂದಾಯ ಇಲಾಖೆ ಜೊತೆ ಕೈಜೋಡಿಸಿ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ, ಪ್ರವಾಹ ಹಾಗೂ ಭೂಕುಸಿತ ಪ್ರದೇಶದಲ್ಲಿನ ಜನರ ಸ್ಥಳಾಂತರಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಜಿ.ಪಂ. ಸಿಇಒ ಆನಂದ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ತಾ.ಪಂ.ಇಒಗಳಾದ ಅಪ್ಪಣ್ಣ, ಶೇಖರ್, ತಹಸೀಲ್ದಾರರಾದ ರಾಮಚಂದ್ರ, ಪ್ರವೀಣ್ ಕುಮಾರ್ ಇತರರು ಪ್ರಾಕೃತಿಕ ವಿಕೋಪ ಸಂಬಂಧ ಹಲವು ಮಾಹಿತಿ ನೀಡಿದರು.

Share this article