ಅಪರ ಜಿಲ್ಲಾ, ಸತ್ರ ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್ ಆದೇಶ
ಪ್ರಿಯಕರನ ಜೊತೆ ಸೇರಿ ತನ್ನ ಗಂಡನನ್ನು ಕೊಲೆ ಮಾಡಿ ಶವವನ್ನು ಟಾಯ್ಲೆಟ್ ಗುಂಡಿಯಲ್ಲಿ ಹೂತು ಹಾಕಿದ್ದ ಪತ್ನಿ ಹಾಗೂ ಪ್ರಿಯಕರನಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್ ಅವರು ಜೀವಾವಧಿ ಶಿಕ್ಷೆ , ₹50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಿಮಾಳ ಗ್ರಾಮದ ನಂದಿನಿ ಹಾಗೂ ಈತನ ಪ್ರಿಯಕರ ದಿನಕರ್ ಜೀವಾವಧಿ ಶಿಕ್ಷೆಗೆ ಗುರಿಯಾದವರು. ಘಟನೆ ವಿವರ:ತಾಲೂಕಿನ ಗುಂಡಿಮಾಳ ಗ್ರಾಮದ ರಾಜಶೇಖರ್ ಪತ್ನಿ ನಂದಿನಿ ಪ್ರಿಯಕರ ದಿನಕರ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಈ ಸಂಬಂಧ ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಆದರೂ ಅಕ್ರಮ ಸಂಬಂಧ ಮುಂದುವರೆಸಿದ್ದರು.
2021ರ ಜೂನ್ 23 ರಂದು ರಾಜಶೇಖರ್ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನಂದಿನಿ ಹಾಗೂ ಈತನ ಪ್ರಿಯಕರ ದಿನಕರ ಮನೆಗೆ ಬಂದಿದ್ದಾನೆ. ಸ್ವಲ್ಪ ಸಮಯದ ನಂತರ ರಾಜಶೇಖರ್ ಮನೆಗೆ ಬಂದಾಗ ಇಬ್ಬರು ಜೊತೆಯಲ್ಲಿ ಇದ್ದದ್ದನ್ನು ನೋಡಿ ಗಲಾಟೆ ನಡೆದಿದೆ. ಆಗ ಪತ್ನಿ ನಂದಿನಿ ಹಾಗೂ ಪ್ರಿಯಕರ ದಿನಾಕರ್ ಸೇರಿಕೊಂಡು ರಾಜಶೇಖರ್ ಕಣ್ಣಿಗೆ ಕಾರದ ಪುಡಿ ಎರಚಿ ತಲೆಯ ಭಾಗಕ್ಕೆ ಹೊಡೆದ್ದಕ್ಕೆ ರಾಜಶೇಖರ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಇಬ್ಬರೂ ಸೇರಿ ಮನೆಯ ಹಿಂಭಾಗದಲ್ಲಿರುವ ಟಾಯ್ಲೆಟ್ ಗುಂಡಿಯಲ್ಲಿ ತಲೆ ಕೆಳಗೆ ಮಾಡಿ ಮುಚ್ಚಿದ್ದರು.ರಾಜಶೇಖರ್ ತಂದೆಗೆ ಕೆಲಸಕ್ಕೆ ಹೋಗಿರುವುದಾಗಿ ನಂಬಿಸಿದ್ದರು. ಇದಾದ ನಂತರ ಕೊಳೆತ ಶವ ವಾಸನೆ ಬಂದ ಹಿನ್ನೆಲೆ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಶವವನ್ನು ಹೊರ ತೆಗೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು . ಪ್ರಕರಣ ಸಂಬಂಧ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ಪ್ರಕರಣದ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಮಹದೇವಸ್ವಾಮಿ ಹಾಗೂ ರಂಜನ್ ಸಾಕ್ಷಿ ನೀಡಿದ್ದರು. ಉಳಿದ ಸಾಕ್ಷಿದಾರರ ಹೇಳಿಕೆ ಮತ್ತು ಸನ್ನಿವೇಶಗಳ ಆಧಾರದಲ್ಲಿ ಆರೋಪಿತರು ಎಸಗಿರುವ ಅಪರಾಧವನ್ನು ಸಾಬೀತುಪಡಿಸಲಾಗಿದೆ. ಈ ಹಿನ್ನೆಲೆ ಆರೋಪಿತರಾದ ನಂದಿನಿ ಹಾಗೂ ದಿನಕರ್ ವಿರುದ್ಧ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.