ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮೃತರ ಪುತ್ರ ಸಂತೋಷ್ ತಮ್ಮಣ್ಣ ಕುಟುಂಬದ ಹಿರಿಯರು ಹಾಗೂ ಬಂಧುಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ತಾಯಿಯ ಅಂತಿಮ ಸಂಸ್ಕಾರ ನಡೆಸಿದರು. ತಾಯಿಯನ್ನು ಕಳೆದುಕೊಂಡ ಕುಟುಂಬಸ್ಥರ ದುಃಖ, ನೋವು ಹಾಗೂ ಕಣ್ಣೀರಿನ ನಡುವೆ ಅಂತಿಮ ವಿಧಿವಿಧಾನಗಳು ನಡೆದವು.
ಪ್ರಮೀಳಾ ತಮ್ಮಣ್ಣರ ಅಂತಿಮ ದರ್ಶನ ಪಡೆಯಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು, ಅಭಿಮಾನಿಗಳು, ಹಿತೈಷಿಗಳು ಹಾಗೂ ರಾಜಕೀಯ ಕಾರ್ಯಕರ್ತರು ಆಗಮಿಸಿದ್ದರು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಜನರು ಮೃತರ ಆತ್ಮಕ್ಕೆ ಶಾಂತಿ ಕೋರಿ ಕಂಬನಿ ಮಿಡಿದರು. ಗ್ರಾಮಾದ್ಯಂತ ಶೋಕದ ವಾತಾವರಣ ಮನೆಮಾಡಿತ್ತು.ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಯುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಚಿತ್ರನಟ ಅಭಿಷೇಕ್ ಅಂಬರೀಷ್, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ನಾರಾಯಣಗೌಡ, ಶಾಸಕರಾದ ಕೆ.ಎಂ.ಉದಯ್, ಶಾಸಕ ಮಂಜು, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಶಾಸಕ ಕೆ.ಅನ್ನದಾನಿ ಸೇರಿದಂತೆ ಹಲವು ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಗಣ್ಯರು ದೊಡ್ಡರಸಿನಕೆರೆಗೆ ಆಗಮಿಸಿ ಪ್ರಮೀಳಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಕುಟುಂಬಕ್ಕೆ ಆಧಾರವಾಗಿದ್ದ ಪ್ರಮೀಳಾ:
ಪ್ರೀತಿ, ಆತ್ಮೀಯತೆ ಹಾಗೂ ಕುಟುಂಬದ ಬಂಧವನ್ನು ಉಳಿಸಿಕೊಂಡಿದ್ದ ಪ್ರಮೀಳಾ ತಮ್ಮಣ್ಣರ ನೆನಪುಗಳು ಕುಟುಂಬಸ್ಥರ ಮನದಲ್ಲಿ ಸದಾ ಹಸಿರಾಗಿ ಉಳಿಯಲಿವೆ. ಅಂತಿಮ ಸಂಸ್ಕಾರದ ವೇಳೆ ನೆರೆದಿದ್ದ ಸಾವಿರಾರು ಜನರ ಕಂಬನಿ, ಅವರ ಮೇಲಿದ್ದ ಗೌರವ ಮತ್ತು ಆತ್ಮೀಯತೆಗೆ ಸಾಕ್ಷಿಯಾಯಿತು.
ಪ್ರಮೀಳಾರ ಪ್ರಾರ್ಥಿವ ಶರೀರದ ದರ್ಶನ ಪಡೆದ ಶಾಸಕ ಕೆ.ಎಂ.ಉದಯ್
ಶಾಸಕ ಕೆ.ಎಂ.ಉದಯ್ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಧರ್ಮಪತ್ನಿ ಪ್ರಮೀಳಾ ನಿಧನದ ಹಿನ್ನೆಲೆಯಲ್ಲಿ ಶನಿವಾರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.