ಶಿರಹಟ್ಟಿ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆಗೆ ಕಾಡುಪ್ರಾಣಿಗಳ ಕಾಟ

KannadaprabhaNewsNetwork |  
Published : Aug 12, 2026, 03:00 AM IST
ಪೋಟೊ-೧೦ ಎಸ್.ಎಚ್.ಟಿ. ೧ಕೆ-ಕಡಕೋಳ ಗ್ರಾಮ ರೈತ ಶೇಖರಗೌಡ ಪಾಟೀಲ ತನ್ನ ಹೊಲದಲ್ಲಿಯ ಮೆಕ್ಕೆ ಜೋಳ ತಿಂದು ಹಾಳು ಮಾಡಿರುವುದನ್ನು ತೋರಿಸುತ್ತಿರುವುದು. | Kannada Prabha

ಸಾರಾಂಶ

ಹೊಲಗಳಿಗೆ ನುಗ್ಗುವ ಮಿಕಗಳು ಎಳೆಯ ಗೋವಿನಜೋಳದ ಗಿಡಗಳನ್ನು ತಿಂದು ಹಾನಿಗೊಳಿಸುತ್ತಿದ್ದು, ಮುಳ್ಳುಹಂದಿಗಳು ರಾತ್ರಿ ವೇಳೆ ಜಮೀನಿಗೆ ನುಗ್ಗಿ ಬೆಳೆಗಳನ್ನು ತುಳಿದು, ಕಿತ್ತುಹಾಕಿ ಹಾನಿ ಮಾಡುತ್ತಿವೆ. ಇದರಿಂದ ಕೆಲವೆಡೆ ಬೆಳೆಗಳ ಇಳುವರಿ ಕುಸಿಯುವ ಆತಂಕ ಎದುರಾಗಿದೆ.

ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ತಾಲೂಕಿನಲ್ಲಿ ಗೋವಿನಜೋಳ ಬೆಳೆಗೆ ಮಿಕ ಹಾಗೂ ಮುಳ್ಳುಹಂದಿಗಳ ಕಾಟ ಹೆಚ್ಚಾಗಿದ್ದು, ಬೆಳೆನಷ್ಟದ ಆತಂಕದಲ್ಲಿ ರೈತರು ಕಂಗಾಲಾಗಿದ್ದಾರೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತಿರುವ ರೈತರಿಗೆ ಕಾಡುಪ್ರಾಣಿಗಳ ಹಾವಳಿ ಸಂಕಷ್ಟವಾಗಿ ಪರಿಣಮಿಸಿದೆ.ಹೊಲಗಳಿಗೆ ನುಗ್ಗುವ ಮಿಕಗಳು ಎಳೆಯ ಗೋವಿನಜೋಳದ ಗಿಡಗಳನ್ನು ತಿಂದು ಹಾನಿಗೊಳಿಸುತ್ತಿದ್ದು, ಮುಳ್ಳುಹಂದಿಗಳು ರಾತ್ರಿ ವೇಳೆ ಜಮೀನಿಗೆ ನುಗ್ಗಿ ಬೆಳೆಗಳನ್ನು ತುಳಿದು, ಕಿತ್ತುಹಾಕಿ ಹಾನಿ ಮಾಡುತ್ತಿವೆ. ಇದರಿಂದ ಕೆಲವೆಡೆ ಬೆಳೆಗಳ ಇಳುವರಿ ಕುಸಿಯುವ ಆತಂಕ ಎದುರಾಗಿದೆ.

ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ರಾತ್ರಿ ವೇಳೆ ಹೊಲಗಳಲ್ಲಿ ಕಾವಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ದೀಪ, ಟಾರ್ಚ್ ಹಾಗೂ ವಿವಿಧ ರೀತಿಯ ಶಬ್ದಗಳನ್ನು ಮಾಡುತ್ತಾ ಕಾಡುಪ್ರಾಣಿಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಬೀಜ, ಗೊಬ್ಬರ, ಔಷಧಿ ಹಾಗೂ ಕೃಷಿ ಕೂಲಿ ಸೇರಿದಂತೆ ಹೆಚ್ಚಿನ ಪ್ರಮಾಣದ ಹಣವನ್ನು ಖರ್ಚು ಮಾಡಿರುವ ರೈತರಿಗೆ ಬೆಳೆ ಹಾನಿಯಿಂದ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ. ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಸಂಬಂಧಿಸಿದ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವುದರ ಜತೆಗೆ ಬೆಳೆ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ತವರು ಮನೆ: ಕಪ್ಪತ್ತಗುಡ್ಡ ಸೆರಗಿನಂಚಿನಲ್ಲಿರುವ ಹೊಸಳ್ಳಿ, ಕಡಕೋಳ, ಕುಸ್ಲಾಪುರ, ಜಲ್ಲಿಗೇರಿ ಗ್ರಾಮಗಳ ರೈತರು ಪ್ರತಿವರ್ಷವೂ ದೊಡ್ಡ ಸಂಕಷ್ಟ ಎದುರಿಸುತ್ತಿದ್ದಾರೆ. ಕಪ್ಪತ್ತಗುಡ್ಡ ಸುತ್ತಮುತ್ತ ಮಿಕ, ಮುಳ್ಳುಹಂದಿಗಳ ಸಂಖ್ಯೆ ವಿಪರೀತವಾಗಿದ್ದು, ಇವುಗಳನ್ನು ಕಾಯುವುದು, ಬೆಳೆ ರಕ್ಷಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾಡುಪ್ರಾಣಿಗಳ ಹಾವಳಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ರೈತರ ಬೆಳೆ ಹಾಗೂ ಜೀವನೋಪಾಯವನ್ನು ರಕ್ಷಿಸಬೇಕು ಎಂಬುದು ರೈತರ ಆಗ್ರಹವಾಗಿದೆ.ತಾಲೂಕಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಅಲ್ಲಲ್ಲಿ ಕಬ್ಬು ಕೂಡ ಬೆಳೆಯಲಾಗಿದೆ. ಬೆಳೆಗೆ ನಿತ್ಯ ರಾತ್ರಿ ಮಿಕ, ಮುಳ್ಳುಹಂದಿಗಳ ಹಾವಳಿ, ಕಾಟ ಹೆಚ್ಚಾಗಿದ್ದು, ಬೆಳೆ ರಕ್ಷಣೆ ರೈತರಿಗೆ ಸವಾಲಾಗಿ ಪರಿಣಮಿಸಿದೆ. ನಾಲ್ಕೈದು ಸಾವಿರ ಹಣ ಖರ್ಚು ಮಾಡಿ ಹೊಲದ ಸುತ್ತಲೂ ಬೆಳೆ ರಕ್ಷಣೆಗೆ ತಂತಿಬೇಲಿ ಅಳವಡಿಸಿದ್ದರೂ ಬೆದರದೆ ರಾತ್ರೋರಾತ್ರಿ ಹೊಲಕ್ಕೆ ನುಗ್ಗಿ ಬೆಳೆಹಾನಿ ಮಾಡುತ್ತಿವೆ.ತಾಲೂಕಿನ ಕಡಕೋಳ ಗ್ರಾಮದ ರೈತ ಶೇಖರಗೌಡ ಪಾಟೀಲ, ಕುಸ್ಲಾಪುರ ಗ್ರಾಮದ ಪ್ರವೀಣ ಜೈನ್, ಮಲಕಾಜಪ್ಪ ಅಂಗಡಿ, ಜಲ್ಲಿಗೇರಿ ಗ್ರಾಮದ ವೀರೇಶ ಲಮಾಣಿ ಸೇರಿದಂತೆ ನೂರಾರು ಎಕರೆ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಗ್ರಾಮದ ಸುತ್ತಲೂ ಗುಡ್ಡಗಾಡು ಪ್ರದೇಶವಿರುವುದರಿಂದ ಮಿಕಗಳ ಕಾಟ ವಿಪರೀತವಾಗಿದೆ. ನಿತ್ಯ ರಾತ್ರಿ ನಿದ್ದೆಗೆಟ್ಟು ಬೆಳೆ ರಕ್ಷಣೆಗೆ ಹೋಗುತ್ತಿದ್ದು, ಸಮಯ ತಪ್ಪಿಸಿ ಮಿಕಗಳು ಬಂದು ಹೊಲಕ್ಕೆ ನುಗ್ಗಿ ಹಾಳು ಮಾಡುತ್ತಿವೆ ಎನ್ನುತ್ತಾರೆ ರೈತರು.

ಅರ್ಜಿ ಸಲ್ಲಿಸಿದರೆ ಪರಿಹಾರ: ತಾಲೂಕಿನ ಗುಡ್ಡದ ವ್ಯಾಪ್ತಿಯ ಜಮೀನುಗಳ ರೈತರ ಹೊಲಗಳಿಗೆ ಮಿಕಗಳ ಹಿಂಡು ಲಗ್ಗೆ ಇಡುತ್ತಿರುವ ಬಗ್ಗೆ ರೈತರಿಂದ ತಿಳಿದುಬಂದಿದೆ. ನಮ್ಮ ಸಿಬ್ಬಂದಿ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರೈತರು ಬೆಳೆಹಾನಿಯಾದ ಬಗ್ಗೆ ಅರ್ಜಿ ಸಲ್ಲಿಸಿದರೆ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ವಲಯ ಅರಣ್ಯ ಇಲಾಖೆ ಅಧಿಕಾರಿ ರೇಣುಕಮ್ಮ ಎ. ತಿಳಿಸಿದರು.

ನಿರಂತರ ದಾಳಿ: ಸುಮಾರು ೨೦ರಿಂದ ೩೦ ಮಿಕಗಳ ಹಿಂಡುಗಳಿದ್ದು, ರೈತರ ಬೆಳೆಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ರೈತರು ಎಷ್ಟೇ ಕಾವಲು ಕಾಯ್ದರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರೈತ ಶೇಖರಗೌಡ ಪಾಟೀಲ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ಪ್ರಬಂಧ, ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮ
(ಬಾಟಂ) ಮಹಿಳೆಯರ ಸಾಧನೆ ವಿಶ್ವಕ್ಕೆ ಪಸರಿಸಲಿ: ಹರಪನಹಳ್ಳಿ ರವೀಂದ್ರ