ರಾತ್ರಿ ಕಾಡಾನೆ ಕಾಟ ಹಗಲು ಕೋತಿ ಆಟ

KannadaprabhaNewsNetwork | Published : Dec 26, 2024 1:02 AM

ಸಾರಾಂಶ

ಅರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದ ಸುತ್ತಮುತ್ತಲಿನಲ್ಲಿ ರಾತ್ರಿಯಾದರೆ ಸಾಕು ಕಾಡಾನೆಗಳು ಯಾವಾಗ ಗ್ರಾಮಕ್ಕೆ ಲಗ್ಗೆ ಕೊಡುತ್ತದೆಯೋ ಎನ್ನೋ ಭಯ ಒಂದೆಡೆಯಾದರೆ ಮತ್ತೊಂದೆಡೆ ಬೆಳಗಾಯಿತೆಂದರೆ ಸಾಕು ಗ್ರಾಮದ ಒಳಗೆ ಗುಂಪುಗುಂಪಾಗಿ ಕಪಿಗಳ ಹಿಂಡು ಮನೆಯ ಹಂಚು ಹಾಗು ಶೀಟ್‌ಗಳನ್ನು ಹಾನಿ ಮಾಡಿ ಮನೆಯೊಳಗೆ ಪ್ರವೇಶಿಸಿ ದಿನಸಿ, ತರಕಾರಿ ಹಾಗೂ ಇತರೆ ಪದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿ ಜನರ ನೆಮ್ಮದಿ ಕೆಡಿಸಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಬೇಲೂರು ತಾಲೂಕಿನ ಅರೇಹಳ್ಳಿ ಭಾಗದಲ್ಲಿ ಕತ್ತಲಾಯಿತೆಂದರೆ ಕಾಡಾನೆಗಳ ಕಾಟದ ಆತಂಕವಾದರೆ, ಹಗಲು ಗ್ರಾಮದ ಒಳಗೆ ಗುಂಪು ಗುಂಪಾಗಿ ಕಪಿಗಳ ಹಿಂಡು ಮನೆಯ ಹಂಚು ಹಾಗು ಶೀಟ್‌ಗಳನ್ನು ಹಾನಿ ಮಾಡಿ ಅಡಿಕೆ, ಮೆಣಸು ಬಾಳೆ ತಿಂದು ಹಾಳು ಮಾಡುತ್ತಿದ್ದು ರೈತರನ್ನು ಚಿಂತೆಗೀಡು ಮಾಡಿದೆ.

ಕಾಡಾನೆ ಜಮೀನು ಹಾಗೂ ಗ್ರಾಮಕ್ಕೆ ಲಗ್ಗೆ ಇಟ್ಟು ಕೃಷಿಕರ ಬೆಳೆ ಸೇರಿದಂತೆ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಉಂಟು ಮಾಡುತ್ತದೆಯೋ ಎಂದು ನಿದ್ದೆ ಗೆಟ್ಟು ಭಯದಿಂದ ಜೀವನ ಸಾಗಿಸುತ್ತಿರುವ ಕೃಷಿಕರ ಹಾಗೂ ಗ್ರಾಮಸ್ಥರ ಕಥೆ ಹೇಳತೀರದಾಗಿದೆ. ಅರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದ ಸುತ್ತಮುತ್ತಲಿನಲ್ಲಿ ರಾತ್ರಿಯಾದರೆ ಸಾಕು ಕಾಡಾನೆಗಳು ಯಾವಾಗ ಗ್ರಾಮಕ್ಕೆ ಲಗ್ಗೆ ಕೊಡುತ್ತದೆಯೋ ಎನ್ನೋ ಭಯ ಒಂದೆಡೆಯಾದರೆ ಮತ್ತೊಂದೆಡೆ ಬೆಳಗಾಯಿತೆಂದರೆ ಸಾಕು ಗ್ರಾಮದ ಒಳಗೆ ಗುಂಪುಗುಂಪಾಗಿ ಕಪಿಗಳ ಹಿಂಡು ಮನೆಯ ಹಂಚು ಹಾಗು ಶೀಟ್‌ಗಳನ್ನು ಹಾನಿ ಮಾಡಿ ಮನೆಯೊಳಗೆ ಪ್ರವೇಶಿಸಿ ದಿನಸಿ, ತರಕಾರಿ ಹಾಗೂ ಇತರೆ ಪದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿ ಜನರ ನೆಮ್ಮದಿ ಕೆಡಿಸಿದೆ. ಸಂಬಂಧಪಟ್ಟವರು ಇದರಿಂದ ಮುಕ್ತಿ ದೊರಕಿಸಿ ಎಂದು ಮಾದ್ಯಮದ ಮೂಲಕ ಮನವಿ ಮಾಡಿದ್ದಾರೆ.

ಈ ವೇಳೆ ಗ್ರಾಮಸ್ಥರಾದ ಹರಿಣಿ ಶೇಖರ್ ಮಾತನಾಡಿ, ನಮ್ಮ ಗ್ರಾಮದ ಸುತ್ತ ಕಾಡಾನೆಗಳ ಹಾವಳಿ ಹೆಚ್ಚಿದ್ದು, ದಿನನಿತ್ಯ ಜೀವ ಭಯದಲ್ಲಿಯೇ ಹೇಗೋ ಕಷ್ಟ ಪಟ್ಟು ಗದ್ದೆ ತೋಟಗಳಲ್ಲಿ ಕೂಲಿ ಮಾಡಿ ವಾರಕ್ಕೊಮ್ಮೆ ಮನೆಯೊಳಗೆ ಕೂಡಿಟ್ಟ ಎಲ್ಲಾ ಪದಾರ್ಥಗಳನ್ನು ಇದೀಗ ಬೆಳಗಿನ ಸಮಯದಲ್ಲಿ ಕೋತಿಗಳು ಬಂದು ಹಾನಿ ಮಾಡುವುದು ವಿಪರೀತವಾಗಿದೆ.

ನಮ್ಮ ತೋಟದಲ್ಲಿ ಕಪಿಗಳು ಕಾಫಿ ,ಅಡಿಕೆ, ಎಳೆನೀರು ಸೇರಿದಂತೆ ಇನ್ನಿತರ ಹಣ್ಣುಗಳನ್ನೂ ತಿಂದು ಹಾಳುಮಾಡುವುದಲ್ಲದೆ ಮನೆಯ ಒಳಗೆ ಬಂದು ಗೃಹ ಬಳಕೆ ವಸ್ತುಗಳನೆಲ್ಲಾ ಚೆಲ್ಲಾಪೀಲ್ಲಿ ಮಾಡಿ ಹೋಗುತ್ತವೆ, ಒಂದೆರೆಡು ಬಂದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ ಈ ರೀತಿ ಗುಂಪು ಗುಂಪಾಗಿ ಬಂದು ಹಾನಿ ಮಾಡಿದರೆ ನಾವು ಹೇಗೆ ಜೀವನ ಸಾಗಿಸೋದು, ನಮ್ಮ ಸಮಸ್ಯೆ ಯಾರಿಗೇಳೋದು, ಸಂಬಂಧಪಟ್ಟವರು ಇದರಿಂದ ಹೇಗಾದರೂ ಮುಕ್ತಿ ದೊರಕಿಸಿ ಕೊಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಫೋಟೋ: ಕಪಿಗಳ ಹಿಂಡು ಮನೆಯ ಮೇಲಿನ ಶೀಟಿನ ಮೇಲೆ ಕುಳಿತಿರುವುದು.

Share this article