ಮಡಿಕೇರಿ: ಕಾಫಿ ತೋಟದ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ಮೇಲೆ ಒಂಟಿ ಸಲಗವೊಂದು ಏಕಾಏಕಿ ದಾಳಿಗೆ ಮುಂದಾಗಿದ್ದು, ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಳ್ಳಕೆರೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಿಂದ ಸುತ್ತಮುತ್ತಲ ಪ್ರದೇಶದ ಕಾರ್ಮಿಕರಲ್ಲಿ ಭೀತಿ ಹೆಚ್ಚಾಗಿದ್ದು , ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಕೂಡ ಕಾವೇರಿ ನದಿ ದಾಟಿ 20 ಕ್ಕೂ ಅಧಿಕ ಆನೆಗಳು ಪಳ್ಳಕೆರೆ ವ್ಯಾಪ್ತಿಗೆ ಬಂದಿವೆ. ಆನೆಗಳು ಬಂದಾಗ ಕಾರ್ಯಾಚರಣೆ ಮಾಡುತ್ತೇವೆ ಎಂದು ಬರುವ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಅರಣ್ಯಕ್ಕೆ ಅಟ್ಟದೆ ಬೇರೊಂದು ಕಾಡಿಗೆ (ತೋಟಕ್ಕೆ) ತಾತ್ಕಾಲಿಕವಾಗಿ ಅಟ್ಟುವ ಮೂಲಕ ಯಶಸ್ವಿ ಕಾರ್ಯಾಚರಣೆ ಆಗಿದೆ ಎಂದು ಹೇಳಿ ತೆರಳುತ್ತಾರೆ ಎಂದು ಆರೋಪಿಸಿದ್ದಾರೆ.ಇದರಿಂದಾಗಿ ಬೇರೆ ತೋಟದಲ್ಲಿ ಬೀಡುಬಿಟ್ಟಿದ ಆನೆಗಳ ಹಿಂಡು ಮತ್ತೆ ಹಿಂತಿರುಗಿ ಇದೆ ಕಡೆ ವಾಪಸಾಗುತ್ತಿವೆ. ಇದು ಕೇವಲ ಇಲ್ಲಿ ಮಾತ್ರವಲ್ಲ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದೆ ಪರಿಸ್ಥಿತಿಯಿದೆ. ಈ ಸಮಸ್ಯೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು, ಸಂಬಂಧಪಟ್ಟ ಸಚಿವರು, ಸ್ಥಳೀಯ ಶಾಸಕರು ಗಂಭೀರವಾಗಿ ಪರಿಗಣಿಸಿ, ಭಾರಿ ಅನಾಹುತ, ಮತ್ತೊಂದು ಪ್ರಾಣಹಾನಿ ಸಂಭವಿಸುವ ಮೊದಲು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.