ಕಾಡಾನೆ ದಾಳಿ: ಭತ್ತ, ರಾಗಿ, ತೆಂಗು ನಾಶ

KannadaprabhaNewsNetwork |  
Published : Oct 17, 2025, 01:00 AM IST
ಕೆ ಕೆ ಪಿ ಸುದ್ದಿ 01: | Kannada Prabha

ಸಾರಾಂಶ

ಕನಕಪುರ: ತಾಲೂಕಿನಲ್ಲಿ ಕಸಬಾ ಹೋಬಳಿ ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಬ್ಬಳ್ಳಿ ಮತ್ತು ಬೆಟ್ಟಳ್ಳಿ ಗ್ರಾಮದಲ್ಲಿ ಕಾಡಾನೆಗಳು ರೈತರ ಜಮೀನಿನಲ್ಲಿ ಬೆಳೆದಿದ್ದ ಕೃಷಿ ಬೆಳೆಗಳನ್ನು ನಾಶ ಮಾಡಿವೆ.

ಕನಕಪುರ: ತಾಲೂಕಿನಲ್ಲಿ ಕಸಬಾ ಹೋಬಳಿ ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಬ್ಬಳ್ಳಿ ಮತ್ತು ಬೆಟ್ಟಳ್ಳಿ ಗ್ರಾಮದಲ್ಲಿ ಕಾಡಾನೆಗಳು ರೈತರ ಜಮೀನಿನಲ್ಲಿ ಬೆಳೆದಿದ್ದ ಕೃಷಿ ಬೆಳೆಗಳನ್ನು ನಾಶ ಮಾಡಿವೆ. ಕೆಬ್ಬಳ್ಳಿ ಮತ್ತು ಬೆಟ್ಟಳ್ಳಿ ಗ್ರಾಮದ ಸುತ್ತಮುತ್ತಲು ಕೃಷಿ ಜಮೀನಿಗೆ ಕಾಡಾನೆಗಳು ನುಗ್ಗಿ ಭತ್ತ, ರಾಗಿ, ತೆಂಗಿನ ಗಿಡಗಳು, ಮಾವಿನ ಗಿಡಗಳನ್ನು ನಾಶಗೊಳಿಸಿದ್ದು ಕೆಬ್ಬಳ್ಳಿ ಗ್ರಾಮದ ಶಿವರಾಜು, ಶಿವಣ್ಣ, ಮಲ್ಲೇಶ್, ಲಿಂಗೇಗೌಡ, ಬೆಟ್ಟೇಗೌಡನ ದೊಡ್ಡಿ ರವಿಕುಮಾರ್‌ಗೆ ಸೇರಿದ ರಾಗಿ ಬೆಳೆ ನಾಶಪಡಿಸಿವೆ. ಕಾಶಿಗೌಡ ಅವರ ರೇಷ್ಮೆ ತೋಟ, ಕುಮಾರ್ ಅವರ ರಾಗಿ, ಬೈರೇಗೌಡ ಭತ್ತದ ಬೆಳೆ ಕಾಡಾನೆ ದಾಳಿಗೆ ತುತ್ತಾಗಿವೆ.

ಕೆಬ್ಬಳ್ಳಿ ಬೆಟ್ಟಳ್ಳಿ ಭಾಗದಲ್ಲಿ ಕಾಡಾನೆಗಳು ನಿರಂತರವಾಗಿ ದಾಳಿ ಮಾಡಿ ಕೃಷಿ ಬೆಳೆಗಳನ್ನು ನಾಶ ಪಡಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ದಾಳಿಯನ್ನು ತಡೆಗಟ್ಟದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅರಣ್ಯ ಇಲಾಖೆ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಸಂತ್ರಸ್ತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ವನ್ಯಜೀವಿಧಾಮ ಮತ್ತು ಪ್ರಾದೇಶಿಕ ಅರಣ್ಯ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದಿರುವುದೇ ಇಂತಹ ಅನಾಹುತಗಳಿಗೆ ಕಾರಣವಾಗಿದೆ. ಕಾಡಾನೆಗಳು ದಾಳಿ ನಡೆಸಿದಾಗ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಾದೇಶಿಕ ಅರಣ್ಯದವರು, ವನ್ಯಜೀವಿಧಾಮ ಅರಣ್ಯದವರು ಹೇಳುತ್ತಾರೆ, ಆದರೆ ಕಾಡಿನಿಂದಲೇ ಆನೆಗಳು ಬಂದು ರೈತರ ಕೃಷಿ ಬೆಲೆಗಳನ್ನು ನಾಶ ಮಾಡುತ್ತಿವೆ ಇದರ ಬಗ್ಗೆ ಎರಡು ಅರಣ್ಯ ಪ್ರದೇಶದ ಅಧಿಕಾರಿಗಳು ಒಟ್ಟಾಗಿ ಕಾಡಾನೆ ಗಳು ಕಾಡಿನಿಂದ ಹೊರಬರದಂತೆ ನಿಯಂತ್ರಿಸಬೇಕು. ಅರಣ್ಯದಿಂದ ಹೊರ ಬಂದಿರುವ ಪ್ರಾಣಿಗಳನ್ನು ತ್ವರಿತವಾಗಿ ಅರಣ್ಯಕ್ಕೆ ಓಡಿಸುವಂತೆ ಆಗ್ರಹಿಸಿದರು.

ಕಾಡಾನೆ ದಾಳಿಗೆ ನಾಶವಾದ ಕೃಷಿ ಬೆಳೆಗಳಿಗೆ ಪರಿಹಾರ ನೀಡುವುದರಲ್ಲೂ ಅರಣ್ಯ ಇಲಾಖೆ ರೈತರಿಗೆ ವಂಚನೆ ಮಾಡುತ್ತಿದೆ. ಒಂದು ಎಕರೆಗೆ 13 ಕ್ವಿಂಟಲ್‌ನಷ್ಟು ರೈತರು ರಾಗಿ ಬೆಳೆಯುತ್ತಾರೆ. ಆದರೆ ಒಂದು ಎಕರೆಯಲ್ಲಿ ರಾಗಿ ಬೆಳೆ ನಾಶವಾದರೆ ಅರಣ್ಯ ಇಲಾಖೆ 7 ಕ್ವಿಂಟಲ್ ಗೆ ಮಾತ್ರ ಪರಿಹಾರ ನೀಡುತ್ತದೆ. ಆಹಾರ ಇಲಾಖೆಯಿಂದ ಸರ್ಕಾರ ರೈತರಿಂದ ಒಂದು ಕ್ವಿಂಟಲ್ ರಾಗಿಗೆ ಬೆಂಬಲ ಬೆಲೆ 4,300 ಕೊಟ್ಟು ಖರೀದಿ ಮಾಡುತ್ತದೆ. ಅದರೆ ಕಾಡಾನೆ ದಾಳಿಯಿಂದ ನಾಶವಾದರೆ ಒಂದು ಕ್ವಿಂಟಲ್ ಗೆ 2200 ಮಾತ್ರ ಪರಿಹಾರ ನೀಡುತ್ತಿದೆ. ಇದು ಅವೈಜ್ಞಾನಿಕ. ಕಾಡಾನೆ ದಾಳಿಯಿಂದ ಒಂದು ಎಕರೆ ರಾಗಿ ನಾಶವಾದರೆ 10 ಕ್ವಿಂಟಲ್ ಗೂ ಹೆಚ್ಚು ಪರಿಹಾರ ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಬೆಂಬಲ ಬೆಲೆಯಂತೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉ.ಕರ್ನಾಟಕ ಬಗ್ಗೆ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ: ವಿಜಯೇಂದ್ರ
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ