ಕನ್ನಡಪ್ರಭ ವಾರ್ತೆ ಹಲಗೂರು
ಭೀಮನಕಿಂಡಿ ಅರಣ್ಯ ಪ್ರದೇಶದಿಂದ ನಿಟ್ಟೂರು, ಸರಗೂರು, ಎನ್.ಹಲಸಹಳ್ಳಿ, ಲಿಂಗಪಟ್ಟಣ ಹೊರವಲಯದ ಕೃಷಿ ಪ್ರದೇಶದ ಕಡೆಗೆ ಬಂದ ಆನೆಗಳು ರೈತರ ಫಸಲನ್ನು ತಿಂದು, ತುಳಿದು ಹಾಕಿವೆ. ಆನೆಗಳು ಆಗಮಿಸಿದ ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆಯಿಂದಲೇ ಆನೆಗಳನ್ನು ಕಾಡಿಗಟ್ಟುವ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿದರು.
ಆದರೆ, ಅಷ್ಟರಲ್ಲಾಗಲೇ ನಿಟ್ಟೂರು ಗ್ರಾಮದ ಗಂಗರಾಜುರಿಗೆ ಸೇರಿದ ಟೊಮೆಟೊ ತೋಟ, ಲಕ್ಷ್ಮಯ್ಯರಿಗೆ ಸೇರಿದ ಬಾಳೆ ಗಿಡಗಳು, ಈರಪ್ಪ ಅವರ ಕುಯ್ಲಿಗೆ ಬಂದಿದ್ದ ಭತ್ತದ ಫಸಲು, ಕಾಳಯ್ಯ ಅವರಿಗೆ ಸೇರಿದ ಕನಕಾಂಬರ ಬೆಳೆ ಫಸಲು ಹಾನೀಗೀಡಾಗಿದ್ದವು.ರೈತ ಗಂಗಯ್ಯ ಮಾತನಾಡಿ, ಕಷ್ಟ ಪಟ್ಟು ಟೊಮೆಟೊ ಬೆಳೆದಿದ್ದು, ಉತ್ತಮ ಇಳುವರಿ ಬಂದಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಹ ಇದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೆವು. ಆನೆ ದಾಳಿಯಿಂದ ಕಟಾವಿಗೆ ಬಂದಿದ್ದ ಟೊಮೆಟೊ ಗಿಡಗಳು ನೆಲಕಚ್ಚಿವೆ. ಪರಿಣಾಮ ಅಪಾರ ನಷ್ಟ ಉಂಟಾಗಿದೆ.
ರೈತ ಮನು ಮಾತನಾಡಿ, ಕಾಡು ಪ್ರಾಣಿಗಳ ದಾಳಿಯಿಂದ ಫಸಲು ರಕ್ಷಿಸಿಕೊಳ್ಳುವ ಜೊತೆಗೆ ನಮ್ಮ ಜೀವ ರಕ್ಷಣೆ ಮಾಡಿಕೊಳ್ಳಬೇಕಾದ ಆತಂಕ ಎದುರಿಸುವಂತಾಗಿದೆ. ದಿನನಿತ್ಯ ಕಾಡು ಪ್ರಾಣಿಗಳಾದ ಜಿಂಕೆ, ಹಂದಿ ಮತ್ತು ಆನೆ ದಾಳಿಯಿಂದ ಫಸಲನ್ನು ಉಳಿಸಿಕೊಳ್ಳಲು ರಾತ್ರಿಯಿಡೀ ಜಮೀನಿನಲ್ಲಿ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನೋವು ತೋಡಿಕೊಂಡರು.
ಕೆ.ಆರ್.ಪೇಟೆ:
ಗ್ರಾಮದ ರೈತ ರವೀಶ್ ಅವರಿಗೆ ಸೇರಿದ 3 ಮೇಕೆಗಳನ್ನು ಒಂದೇ ದಿನ ಹೊತ್ತೊಯ್ದು ತಿಂದು ಹಾಕುವ ಮೂಲಕ ಆತಂಕ ಸೃಷ್ಟಿಸಿದ್ದ ಚಿರತೆಯು ಕಳೆದ ಒಂದು ವಾರದಿಂದ ನಿತ್ಯ ಮದುಗೆರೆ ಗ್ರಾಮದ ಕಾಳಶೆಟ್ಟಿ, ತಿಮ್ಮಮ್ಮ, ದೊಡ್ಡಶೆಟ್ಟಿ, ಸಂಪಿಗೆಶೆಟ್ಟಿ, ಕೃಷ್ಣಗೌಡ ಅವರ ಜಮೀನಿನ ಬಳಿ ಕಾಣಿಸಿಕೊಂಡು ಸಾಕು ಪ್ರಾಣಿಗಳನ್ನು ತಿನ್ನಲು ಹೊಂಚು ಹಾಕುತ್ತಿತ್ತು.
ಈ ದೂರಿನ ಮೇರೆಗೆ ಕಾರ್ಯ ಪ್ರವೃತ್ತರಾದ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ (ಆರ್‌ಎಫ್‌ಒ) ಅನಿತಾ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದಕುಮಾರ್ ನೇತೃತ್ವದಲ್ಲಿ ಬೋನಿಟ್ಟು ಕಾರ್ಯಾಚರಣೆ ನಡೆಸಿದ್ದರು. ಚಿರತೆಯು ಬೋನಿನಲ್ಲಿ ಸೆರೆಯಾಗಿದೆ.