ಕಾಡಾನೆ ಸೆರೆ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ

KannadaprabhaNewsNetwork |  
Published : Mar 06, 2026, 01:30 AM IST
5ಕೆಎಂಎನ್‌ಡಿ-1 | Kannada Prabha

ಸಾರಾಂಶ

ಬಾಳೆಹೊನ್ನೂರುಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯಲ್ಲಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ವಿವಿಧ ಕಾರಣಗಳಿಂದ ಮಂಗಳವಾರದಿಂದ ಸ್ಥಗಿತಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯಲ್ಲಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ವಿವಿಧ ಕಾರಣಗಳಿಂದ ಮಂಗಳವಾರದಿಂದ ಸ್ಥಗಿತಗೊಳಿಸಲಾಗಿದೆ.ಹುಣಸೇಹಳ್ಳಿ ಸಮೀಪದ ಹ್ಯಾರಂಬಿ-ಪುರ ಗ್ರಾಮದಲ್ಲಿ ಫೆ.16ರಂದು ಎಲ್ಲಪ್ಪ ಎಂಬ ಕಾರ್ಮಿಕನನ್ನು ಕಾಡಾನೆ ಬಲಿ ಪಡೆದ ನಂತರ ಹಂತಕ ಆನೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದ ಹಂತದಲ್ಲಿಯೇ ಫೆ.22ರಂದು ಪುನಃ ಮತ್ತೋರ್ವ ಕಾರ್ಮಿಕ ಮಹಿಳೆ ಬೋರಮ್ಮ ನನ್ನು ಕಾಡಾನೆ ತುಳಿದು ಸಾಯಿಸಿತ್ತು.ಅದೇ ದಿನ ಕಾರ್ಯಾಚರಣೆ ಹಂತಕ ಕಾಡಾನೆ ಹಿಡಿದು ಸಕ್ರೆಬೈಲು ಆನೆ ಬಿಡಾರಕ್ಕೆ ಕಳುಹಿಸಿದ್ದರು. ಇದರ ನಡುವೆ ಮತ್ತೊಂದು ಕಾಡಾನೆ ಸೆರೆ ಹಿಡಿದು ರೆಡಿಯೋ ಕಾಲರ್ ಅಳವಡಿಸುವಂತೆ ಇಲಾಖೆ ಆದೇಶ ಮಾಡಿತ್ತು. ಕಾರ್ಯಾಚರಣೆಯು ಮುಂದುವರೆದಿತ್ತು.ಫೆ.28ರಂದು ಪಟ್ಟಣಕ್ಕೆ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಅವರು ಮತ್ತೊಂದು ಕಾಡಾನೆ ಹಿಡಿದು ಸ್ಥಳಾಂತರ ಮಾಡುವಂತೆ ಹಾಗೂ ಕೊಪ್ಪ ವಿಭಾಗಕ್ಕೆ ಪ್ರತ್ಯೇಕ ಆನೆ ಕಾರ್ಯಪಡೆ ಆರಂಭಕ್ಕೆ ಸ್ಥಳದಲ್ಲಿಯೇ ಆದೇಶ ನೀಡಿದ್ದರು. ಕಾಡಾನೆ ಸೆರೆ ಕಾರ್ಯಾಚರಣೆಯೂ ಮುಂದುವರೆದಿತ್ತು.ಆದರೆ ಸತತವಾಗಿ ಎರಡು ವಾರ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳು ಸ್ಪಷ್ಟವಾಗಿ ಗೋಚರಿಸದೆ ಸಿಬ್ಬಂದಿ ವಾಪಾಸ್ ಮರಳುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.ಕಾರ್ಯಾಚರಣೆಗೆ ರಾಜ್ಯದ ವಿವಿಧ ಬಿಡಾರಗಳಿಂದ ಬಂದಿದ್ದ ಕುಮ್ಕಿ ಆನೆಗಳು ವಾಪಾಸ್ ತೆರಳಿವೆ. ಆದರೂ ಸಹ ಅರಣ್ಯ ಇಲಾಖೆ ಸಿಬ್ಬಂದಿ, ಆನೆ ಕಾರ್ಯಪಡೆ ಸಿಬ್ಬಂದಿ ಕಾಡಾನೆಗಳ ಚಲನ ವಲನದ ಕುರಿತು ಕಣ್ಗಾವಲು ಇಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಕೊಪ್ಪ ಡಿಎಫ್‌ಓ ಶಿವಶಂಕರ್ ಭೇಟಿ ನೀಡಿ ಸಿಬ್ಬಂದಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಗತ್ಯ ಬಿದ್ದರೆ ಪುನಾರಂಭಿಸಲಾಗುವುದು ಎಂದು ಅರಣ್ಯ ಇಲಾಖೆಒಕ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆ ಬೈಎಲೆಕ್ಷನ್‌: ಗೆಲುವೇ ಮುಖ್ಯ ಗುರಿ: ರಾಧಾಮೋಹನ ದಾಸ್
ಎಲ್ಲರಿಗೂ ಲೇಸು ಬಯಸುವ ಹಿಂದೂ ಸಂಸ್ಕೃತಿ