ಕಾಡಾನೆಯಿಂದ ಕೃಷಿ ಹೊಂಡದ ಟಾರ್ಪಲ್‌ ನಾಶ

KannadaprabhaNewsNetwork | Published : May 2, 2025 12:16 AM

ಸಾರಾಂಶ

ಹುಣಸೆಪಾಳ್ಯ ರೈತ ಪ್ರೇಮ ಸದಾನಂದ ಜಮೀನಿನಲ್ಲಿ ಕಾಡಾನೆಗಳು ಕೃಷಿ ಹೊಂಡದ ಟಾರ್ಪಲ್ ನಾಶಪಡಿಸಿರುವುದು.

ಕನ್ನಡಪ್ರಭ ವಾರ್ತೆ ಹನೂರು ಕಾಡಾನೆಗಳ ಉಪಟಳಕ್ಕೆ ಜಮೀನಿನಲ್ಲಿದ್ದ ಕೃಷಿ ಹೊಂಡದ ಟಾರ್ಪಲ್ ನಾಶಗೊಂಡಿರುವ ಘಟನೆ ತಾಲೂಕಿನ ಗಡಿ ಗ್ರಾಮದ ಹುಣಸೆಪಾಳ್ಯ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರೈತ ಪ್ರೇಮ ಸದಾನಂದ ಜಮೀನಿನಲ್ಲಿ ನೀರಿನ ಹೊಂಡದ ಟಾರ್ಪಲ್ ಕಾಡಾನೆಗಳಿಂದ ನಾಶಗೊಂಡಿದೆ. ರೈತ ಪ್ರೇಮ ಸದಾನಂದ ಜಮೀನಿನಲ್ಲಿ ಕೃಷಿ ಹೊಂಡ ಮಾಡಿ ನೀರನ್ನು ಶೇಖರಣೆ ಮಾಡಿ ನಂತರ ಬೆಳೆಗಳಿಗೆ ಹಾಯಿಸುತ್ತಿದ್ದರು. ಕಾಡಾನೆಗಳು ಜಮೀನಿಗೆ ನುಗ್ಗಿ ನೀರಿಲ್ಲದ ಕಾರಣ ಟಾರ್ಪಲ್ ಅನ್ನು ಹಾಳು ಮಾಡಿ ಸಾವಿರಾರು ರು.ಬೆಲೆ ಬಾಳುವ ಕೃಷಿಹೊಂಡದ ಟಾರ್ಪಲ್ ಅನ್ನು ಹಾಳು ಮಾಡಿದೆ ಎಂದು ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.ಗಡಿ ಅಂಚಿನ ಅರಣ್ಯ ಪ್ರದೇಶದ ಗ್ರಾಮವಾಗಿರುವುದರಿಂದ ಈ ಭಾಗದಲ್ಲಿ ರೈತರ ಜಮೀನುಗಳಿಗೆ ದಿನನಿತ್ಯ ಕಾಡಾನೆಗಳು ರಾತ್ರಿ ವೇಳೆ ನುಗ್ಗಿ ಜಮೀನಿನಲ್ಲಿರುವ ಫಸಲು ಹಾಗೂ ಕೃಷಿ ಚಟುವಟಿಕೆಯ ಪರಿಕರಗಳನ್ನು ಸಹ ಹಾಳು ಮಾಡುತ್ತಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ತಡೆಗಟ್ಟಲು ವಿಫಲರಾಗಿದ್ದಾರೆ ಎಂದು ರೈತ ಸದಾನಂದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಯದ ವಾತಾವರಣದಲ್ಲಿ ರೈತರು:

ಮಲೆಮಾದೇಶ್ವರ ವಿಭಾಗದ ಕೊರಮನಕತ್ತರಿ ಗ್ರಾಮದ ರೈತ ನಂಜಪ್ಪ ಅರಿಶಿನ ಒಕ್ಕಣೆ ಕಣದಲ್ಲಿ ಕಾವಲು ಕಾಯುತ್ತಿದ್ದ ರೈತ ಕಾಡಾನೆ ತುಳಿತಕ್ಕೆ ಸಾವನ್ನಪ್ಪಿರುವುದರಿಂದ ರೈತರು ಜಮೀನುಗಳಲ್ಲಿ ಕೆಲಸ ಮಾಡಲು ಹಾಗೂ ಕಾವಲು ಕಾಯಲು ಜೀವ ಭಯದಲ್ಲೇ ಕೆಲಸ ಮಾಡುತ್ತಿದ್ದಾರೆ.

ಗಡಿಯಂಚಿನ ರೈತರ ಜಮೀನುಗಳಲ್ಲಿ ಕಾಡಾನೆಗಳ ಹಾವಳಿ ಎಲ್ಲೆ ಮೀರಿದೆ. ಕೊರಮನಕತ್ತರಿ ಗ್ರಾಮದಲ್ಲಿ ರೈತನೊಬ್ಬ ಜಮೀನಿನಲ್ಲಿ ಕಾಡಾನೆ ದಾಳಿಗೆ ಬಲಿಯಾಗಿದ್ದಾನೆ. ಅರಣ್ಯ ಇಲಾಖೆ ಸೌಜನ್ಯಕ್ಕಾದರೂ ಭೇಟಿ ನೀಡಿ ಸೂಕ್ತ ಪರಿಹಾರಕ್ಕೆ ಕ್ರಮಕೈಗೊಂಡಿಲ್ಲ. ಅರಣ್ಯಾಧಿಕಾರಿಗಳ ಮೇಲೆ ಸಂಬಂಧಪಟ್ಟ ಡಿಸಿಎಫ್ ಮೇಲೆ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತೆದೆ.

ಹೊನ್ನೂರ್ ಪ್ರಕಾಶ್, ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ

Share this article