ಕನ್ನಡಪ್ರಭ ವಾರ್ತೆ ಹನೂರು
ಕಾಡಾನೆಗಳ ಹಿಂಡು ರೈತನ ಜಮೀನಿಗೆ ನುಗ್ಗಿ ಮುಸುಕಿನ ಜೋಳದ ಫಸಲು ನಾಶಗೊಳಿಸಿ ಪಂಪ್ ಸೆಟ್ ಪರಿಕರಗಳನ್ನು ಸಹ ಧ್ವಂಸ ಮಾಡಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ವರದಿಯಾಗಿದೆ.ತಾಲೂಕಿನ ಮಲ್ಲಯ್ಯನಪುರ ಗ್ರಾಮದ ರೈತ ಕನ್ನಕರಾಜ್‌ಗೆ ಸೇರಿದ ಸರ್ವೆ ನಂ.441 ಬಿ ಜಮೀನಿನ ಮುಸುಕಿನ ಜೋಳ ಕಟಾವಿಗೆ ಬಂದಿದ್ದು, ತಡರಾತ್ರಿ ಕಾಡಾನೆಗಳು ಜಮೀನಿಗೆ ನುಗ್ಗಿ ಫಸಲನ್ನು ತಿಂದು ತುಳಿದು ನಾಶಗೊಳಿಸಿ ಜೊತೆಗೆ ಕೊಳವೆ ಬಾವಿಯ ಪರಿಕರಗಳು ಸೇರಿದಂತೆ ಲಕ್ಷಾಂತರ ರು.ನಷ್ಟ ಸಂಭವಿಸಿದೆ ಹೀಗಾಗಿ ರೈತ ಕಂಗಲಾಗಿದ್ದಾನೆ.ಪರಿಹಾರಕ್ಕೆ ಆಗ್ರಹ:
ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಿಂದ ನಿರಂತರವಾಗಿ ಈ ಭಾಗದಲ್ಲಿ ರೈತರ ಜಮೀನುಗಳಿಗೆ ನುಗ್ಗಿ ರಾತ್ರಿ ವೇಳೆ ಫಸಲು ನಾಶಗೊಳಿಸಿ ಕೃಷಿ ಚಟುವಟಿಕೆಯ ಪರಿಕರಗಳನ್ನು ಸಹ ಹಾನಿ ಉಂಟು ಮಾಡಿರುವ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಓಡಿಸಲು ಕ್ರಮ ಕೈಗೊಳ್ಳಬೇಕು. ರೈತನಿಗಾಗಿರುವ ನಷ್ಟ ಪರಿಹಾರ ನೀಡಬೇಕು, ಘಟನೆ ಸ್ಥಳಕ್ಕೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ರೈತರು ಆಗ್ರಹ ವ್ಯಕ್ತಪಡಿಸಿದ್ದಾರೆ.ಅರಣ್ಯ ಅಧಿಕಾರಿಗಳ ಭೇಟಿ:ಕಾವೇರಿ ವನ್ಯಧಾಮ ಉಪ ವಿಭಾಗದ ಎಸಿಎಫ್ ಮರಿಸ್ವಾಮಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ರೈತರ ಜಮೀನಿನಲ್ಲಿ ಕಾಡಾನೆಗಳು ಬೆಳೆ ನಾಶಪಡಿಸಿರುವ ಬಗ್ಗೆ ಮಹಜರು ನಡೆಸಿ ರೈತನಿಗಾಗಿರುವ ನಷ್ಟದ ಅಂದಾಜು ಪಟ್ಟಿ ತಯಾರಿಸಿ ಅರಣ್ಯ ಇಲಾಖೆ ಮೂಲಕ ಸರ್ಕಾರಕ್ಕೆ ಕಳುಹಿಸಿ ಒಂದು ತಿಂಗಳಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ರೈತರು ಸಹಮತ ವ್ಯಕ್ತಪಡಿಸಿದ್ದು ಒಂದು ತಿಂಗಳಲ್ಲಿ ರೈತನಿಗೆ ಸೂಕ್ತ ಪರಿಹಾರ ನೀಡದಿದ್ದಲ್ಲಿ ಸಂಬಂಧಪಟ್ಟ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. ಜೊತೆಗೆ ಕಾಡಾನೆಗಳು ರೈತರ ಜನರಿಗೆ ಬರದಂತೆ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಬೇಕು ಎಂದು ಒತ್ತಾಯಿಸಿದರು.
ಪದೇ ಪದೇ ಕಾಡಾನೆಗಳು ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಿಂದ ರೈತರ ಜಮೀನುಗಳಿಗೆ ನುಗ್ಗಿ ಫಸಲು ನಾಶಗೊಳಿಸಿ ಮತ್ತು ಕೃಷಿ ಚಟುವಟಿಕೆ ಪರಿಕರಗಳನ್ನು ಸಹ ಹಾನಿ ಉಂಟು ಮಾಡಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ರೈತನಿಗೆ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳು ರೈತನ ಜಮೀನಿಗೆ ಬರದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.ಚಿಕ್ಕರಾಜು, ರೈತ ಸಂಘದ ತಾಲೂಕು ಅಧ್ಯಕ್ಷ, ಹನೂರು