ಬಾಳೆಹೊನ್ನೂರು ತುಪ್ಪೂರಿನಲ್ಲಿ ಮುಂದುವರಿದ ಕಾಡಾನೆ ಹಾವಳಿ

KannadaprabhaNewsNetwork |  
Published : Sep 03, 2025, 01:00 AM IST
೦೨ಬಿಹೆಚ್‌ಆರ್ ೨: ಬಾಳೆಹೊನ್ನೂರು ಸಮೀಪದ ತುಪ್ಪೂರು ಅರಳೀಕೊಪ್ಪದ ಪೂರ್ಣೇಶ್ ನಾಯ್ಕ್ ಎಂಬುವರ ತೋಟದಲ್ಲಿ ಕಾಡಾನೆಗಳು ಅಡಕೆ ಮರ ತುಳಿದು ಪುಡಿ ಮಾಡಿರುವುದು. | Kannada Prabha

ಸಾರಾಂಶ

ಸಮೀಪದ ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ತುಪ್ಪೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಪುನಃ ಮುಂದುವರೆದಿದ್ದು, ರೈತರ ಜಮೀನಿಗಳಿಗೆ ನಿರಂತರವಾಗಿ ನುಗ್ಗಿ ಹಾನಿ ಮಾಡುತ್ತಿವೆ.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಸಮೀಪದ ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ತುಪ್ಪೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಪುನಃ ಮುಂದುವರೆದಿದ್ದು, ರೈತರ ಜಮೀನಿಗಳಿಗೆ ನಿರಂತರವಾಗಿ ನುಗ್ಗಿ ಹಾನಿ ಮಾಡುತ್ತಿವೆ.

ಬಾಳೆಹೊನ್ನೂರು ವ್ಯಾಪ್ತಿ ಹಾಗೂ ಶೃಂಗೇರಿ, ಕೊಪ್ಪ ತಾಲೂಕಿನ ವಿವಿಧೆಡೆ ಸಂಚರಿಸಿ ತುಪ್ಪೂರು ಗ್ರಾಮಕ್ಕೆ ಬಂದಿರುವ ಎರಡು ಕಾಡಾನೆಗಳು ಕಳೆದ ಒಂದು ವಾರದಿಂದ ಇದೇ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಹಲವು ರೈತರ ತೋಟ, ಗದ್ದೆಗಳಿಗೆ ದಾಳಿ ಮಾಡಿ ಹಾನಿ ಮಾಡುತ್ತಿವೆ.

ಕಳೆದ ಒಂದು ವಾರದಿಂದ ಎರಡು ಕಾಡಾನೆಗಳು ಮಾತ್ರ ತುಪ್ಪೂರು ಗ್ರಾಮದಲ್ಲಿ ಇದ್ದು, ಇವುಗಳೊಂದಿಗೆ ಕಾಡುಸಿಗಸೆ ಗ್ರಾಮದಿಂದ ಬಂದ ಮತ್ತೊಂದು ಕಾಡಾನೆಯೂ ಸೇರಿಕೊಂಡಿದೆ. ಭಾನುವಾರ ರಾತ್ರಿ ವೇಳೆಯಲ್ಲಿ ತುಪ್ಪೂರು ಬಳಿ ಮುಖ್ಯರಸ್ತೆಯಲ್ಲಿ ಮೂರೂ ಕಾಡಾನೆಗಳು ಒಟ್ಟಾಗಿ ರಸ್ತೆ ದಾಟುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.

ಈ ಕಾಡಾನೆಗಳು ರಾತ್ರಿ ವೇಳೆಯಲ್ಲಿ ರೈತರ ತೋಟ, ಗದ್ದೆಗಳಿಗೆ ಬಂದು ಬೆಳೆ ನಾಶ ಮಾಡಿ ಬೆಳಗ್ಗಿನ ವೇಳೆಗೆ ವಾಪಾಸ್ ತುಪ್ಪೂರು ಗ್ರಾಮದ ಕಾಡಿನಲ್ಲಿ ಬಂದು ನಿಲ್ಲುತ್ತಿವೆ. ಫಸಲಿಗೆ ಬಂದ ಬಾಳೆ, ಕಾಫಿ, ಅಡಕೆ, ನಾಟಿ ಮಾಡಿದ್ದ ಭತ್ತದ ಸಸಿಯನ್ನು ತುಳಿದು ಹಾಳು ಮಾಡುತ್ತಿವೆ.

ತುಪ್ಪೂರು ಹೊಸಮನೆಯ ಮಂಜಪ್ಪಗೌಡ ಎಂಬುವರ ಅಡಕೆ, ಕಾಫಿ ತೋಟ, ಗದ್ದೆಯನ್ನು ನಾಶ ಮಾಡಿರುವ ಕಾಡಾನೆಗಳು ಅಲ್ಲಿಂದ ಅರಳೀಕೊಪ್ಪ ಸಮೀಪದ ಪೂರ್ಣೇಶ್ ನಾಯ್ಕ್ ಎಂಬುವರ ಅಡಿಕೆ ತೋಟಕ್ಕೆ ತೆರಳಿ ನೂರಕ್ಕೂ ಅಧಿಕ ಅಡಕೆ ಮರಗಳನ್ನು ಕೆಡವಿ ತುಳಿದು ಪುಡಿ ಮಾಡಿವೆ. 30 ವರ್ಷಕ್ಕೂ ಹಳೆಯ ಮರಗಳು ಇವಾಗಿದ್ದು, ಅಡಕೆ ಫಸಲು ಮೈದುಂಬಿ ನಿಂತಿದ್ದವು. ಇದರಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕೇವಲ ಬಂದು ಪರಿಶೀಲನೆ ಮಾಡಿ ತೆರಳುತ್ತಿದ್ದಾರೆ. ಆದರೆ ಆನೆಗಳನ್ನು ಓಡಿಸಲು ಕ್ರಮಕೈಗೊಳ್ಳುತ್ತಿಲ್ಲ. ರೈತರು ಪಟಾಕಿ ಸಿಡಿಸಿಯೂ ಆನೆ ಓಡಿಸದಂತೆ ಸೂಚಿಸುತ್ತಿದ್ದಾರೆ. ಮಂಗಳವಾರ ಸ್ಥಳೀಯ ಗ್ರಾಮಸ್ಥರೇ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ನಡೆಸಿದ್ದಾರೆ. ಫಸಲು ಭರಿತ ಗಿಡಗಳನ್ನು ನಾಶ ಮಾಡಿರುವುದರಿಂದ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಇದನ್ನು ಭರಿಸುವುದು ಯಾರು ಎಂದು ಎಂದು ಸ್ಥಳೀಯ ಕೃಷಿಕ ಮಂಜುನಾಥ್ ತುಪ್ಪೂರು ಪ್ರಶ್ನಿಸಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಹುಯಿಗೆರೆ ಗ್ರಾಮದ ಬಿಕ್ಕರಣೆಯಲ್ಲಿಯೂ ಕಾಡಾನೆ ಹಾವಳಿ ಮುಂದುವರೆದಿದ್ದು, ಎರಡು ದಿನಗಳ ಹಿಂದೆ ಸಮೀಪದ ಅಂಡವಾನೆಯಲ್ಲಿದ್ದ ಕಾಡಾನೆ ಬಿಕ್ಕರಣೆಯ ಹಲವು ರೈತರ ತೋಟಗಳಿಗೆ ನುಗ್ಗಿ ಹಾನಿ ಮಾಡಿದೆ.

ಬಿಕ್ಕರಣೆಯ ಜಗದೀಶ್ ಎಂಬುವರ ತೋಟಕ್ಕೆ ನುಗ್ಗಿರುವ ಕಾಡಾನೆ ತೆಂಗು, ಅಡಕೆ, ಕಾಫಿ, ಬಾಳೆ ಮುಂತಾದ ಗಿಡಗಳನ್ನು ಬುಡ ಸಮೇತ ನೆಲಕ್ಕುರುಳಿಸಿ ತುಳಿದು ಹಾನಿ ಮಾಡಿದೆ. ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲೂ ಕಾಡಾನೆ ಹಾವಳಿ ಮಿತಿ ಮೀರಿದ್ದು ಬೆಳೆಗಾರರು, ಕೂಲಿ ಕಾರ್ಮಿಕರು ಚಿಂತಾಕ್ರಾಂತರಾಗಿದ್ದಾರೆ.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ