ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಕುಂಜಿಲ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು ಗ್ರಾಮಸ್ಥರು ಹೈರಾಣಾಗಿದ್ದಾರೆ. ಕುಂಜಿಲ ಗ್ರಾಮದ ವಾಟೆಕಾಡು ಕಾಲೋನಿಯಲ್ಲಿ ಕಾಡಾನೆಗಳು ದಾಂದಲೆ ನಡೆಸಿರುವುದರಿಂದ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.ಕಕ್ಕಬೆ ಗ್ರಾಮ ಪಂಚಾಯಿತಿಯ ಕುಂಜಿಲ ಗ್ರಾಮದ ವಾಟೆಕಾಡು ಕಾಲೋನಿಯಲ್ಲಿ ಶುಕ್ರವಾರ ರಾತ್ರಿ ಕಾಡಾನೆ ಸತೀಶ್ ಎಂಬವರ ತೋಟದಲ್ಲಿ ಕೃಷಿ ಗಿಡಗಳನ್ನು ಧ್ವಂಸ ಮಾಡಿದ್ದಲ್ಲದೆ ಬೈನೆ ಮರವನ್ನು ಬೀಳಿಸಿದರಿಂದಾಗಿ ವಿದ್ಯುತ್ ಕಂಬ ಮುರಿದು ಬಿದ್ದಿದೆ. ವಿದ್ಯುತ್ ಕಂಬ ಹಾಗೂ ಬೈನೆ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಮಾತ್ರವಲ್ಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ಕೆತ್ತೆ ಕೊಚ್ಚಿ, ವಾಟೆಕಾಡು ವ್ಯಾಪ್ತಿಯಲ್ಲಿ ಕಗ್ಗತ್ತಲು ಆವರಿಸಿ ಇನ್ನಷ್ಟು ಭಯದ ವಾತಾವರಣ ನಿರ್ಮಾಣವಾಗಿದೆ. ಕಾಡು ಪ್ರಾಣಿಗಳಿಂದ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದು ಸರ್ಕಾರ ಕಾಳಜಿ ವಹಿಸುತ್ತಿಲ್ಲ. ಎರಡು ವರ್ಷದಿಂದ ಈ ಭಾಗದಲ್ಲಿ ವಾಸಿಸುವವರ ಜೀವ ಹಾನಿ ಸೇರಿದಂತೆ ಮನೆ, ಆಸ್ತಿ ನಾಶವಾಗಿ ಲಕ್ಷಾಂತರ ರು.ನಷ್ಟ ಅನುಭವಿಸಿದ್ದಾರೆ. ಯವಕಪಾಡಿ, ನಾಲಡಿ, ಮರಂದೋಡ, ಕುಂಜಿಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಕಾಫಿ ತೋಟಗಳು ಹಾನಿಯಾಗಿವೆ. ಇಲ್ಲಿ ಒಂಟಿ ಸಲಗ ಒಂದು ಅಡ್ಡಾಡುತ್ತಿದ್ದು ಪ್ರತಿವರ್ಷ ಕಷ್ಟ ನಷ್ಟ ಆಗುತ್ತಿದೆ. ಸಮಸ್ಯೆ ಪರಿಹರಿಸಲು ಜನಪ್ರತಿನಿಧಿಗಳು, ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ನಿರಂತರ ಕಾಡಾನೆ ಉಪಟಳದಿಂದ ತೀವ್ರ ಸಮಸ್ಯೆಯಾಗುತ್ತಿದೆ . ಕಳೆದ ವರ್ಷ ಜುಲೈ ಎರಡರಂದು ನನ್ನ ಆಟೋರಿಕ್ಷಾವನ್ನು ಕಾಡಾನೆ ದೂಡಿ ಹಾಕಿ ಜಖಂಗೊಳಿಸಿ ನಷ್ಟ ಸಂಭವಿಸಿತ್ತು. ಇಲ್ಲಿಯ ಕಂಬೆಯಂಡ ರಾಜ ದೇವಯ್ಯನವರನ್ನು ಅವರ ತೋಟದಲ್ಲಿ ಆನೆ ತುಳಿದು ಮೃತಪಟ್ಟಿದ್ದರು. ಅವರ ಸಹೋದರ ಅನು ಎಂಬವರು ಕಾಡಾನೆ ದಾಳಿಯಿಂದ ಅಂಗವಿಕಲರಾಗಿ ಮನೆಯಲ್ಲಿಯೇ ಇರುವಂತಾಗಿದೆ. ಗ್ರಾಮದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಜೀವ ಭಯದಲ್ಲಿದ್ದು ಸಂಬಂಧಿಸಿದವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.ದೇವಯ್ಯ ಪಿ ಎ ಕುಂಜಿಲ ಗ್ರಾಮದ ವಾಟೆಕಾಡು ನಿವಾಸಿ