- ತಜ್ಞರ ತಂಡದೊಂದಿಗೆ ಕಾನಹಳ್ಳಿಗೆ ದೌಡಾಯಿಸಿದ ಅರಣ್ಯ ಅಧಿಕಾರಿಗಳು-ಸಿಬ್ಬಂದಿ
ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಉಳವಿ ಹೋಬಳಿಯ ಕಾನಹಳ್ಳಿ, ಮೈಸಾವಿ, ಕಣ್ಣೂರು ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳಲ್ಲಿ ಕಾಡಾನೆಗಳು ಸಂಚರಿಸುತ್ತಿವೆ ಎನ್ನುವ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಕಾರ್ಯಾಚರಣೆ ಕೈಗೊಂಡರು.ಲಾವಿಗೆರೆ ವಾಸಿ ರೈತ ಮುಖಂಡ ಜಿ.ಎಚ್. ಗೋಪಾಲ ನಡುಗಿನಮನೆ ಕಳೆದ ವರ್ಷದಿಂದ ಕಾಡಾನೆ ಸಂಚಾರವನ್ನು ಮಾನಿಟರ್ ಮಾಡುತ್ತಿದ್ದಾರೆ. ಅವರ ಮಾಹಿತಿ ಪ್ರಕಾರ ಸೋಮವಾರ ರಾತ್ರಿ ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಮೈಲಾರಿಕೊಪ್ಪದ ಕೃಷಿಕ ಶ್ರೀಧರ ಅವರ ಶುಂಠಿ ಜಮೀನಿನ ಮೂಲಕ ಎರಡು ಕಾಡಾನೆಗಳು ಮೈಲಾರಿಕೊಪ್ಪ ಗ್ರಾಮದಿಂದ ಇಡುವಳ್ಳಿ ಚರ್ಚ್ ಹಿಂಭಾಗ ಹೋಗಿವೆ. ಅಲ್ಲಿಂದ ಬರೂರು ದೇವಸ್ಥಾನದ ಪಕ್ಕದಲ್ಲಿ ತಲುಪಿ ಮತ್ತೆ ಮುಳುಕೇರಿ ಮೂಲಕ ಸೊರಬ ತಾಲೂಕಿನ ಕಾನಹಳ್ಳಿ, ಕಣ್ಣೂರು ಗುಡ್ಡ ಸೇರಿವೆ ಎಂಬ ಮಾಹಿತಿ ಮಾನಿಟರ್ ಮೂಲಕ ಲಭ್ಯವಾಗಿದೆ.
ಹೆಜ್ಜೆ ಗುರುತುಗಳು- ಲದ್ದಿ ಪತ್ತೆ:ತಾಲೂಕಿನ ಕಾನಹಳ್ಳಿ, ಕಣ್ಣೂರು ಮತ್ತು ಮೈಸಾವಿ ಗ್ರಾಮಗಳ ಸುತ್ತಮುತ್ತಲಿನಲ್ಲಿ ಬೆಳೆ ಕಟಾವು ಮಾಡಿದ ರೈತರ ಜಮೀನಿನಲ್ಲಿ ಆನೆಗಳು ಸಂಚರಿಸಿರುವ ಬಗ್ಗೆ ಹೆಜ್ಜೆ ಗುರುತುಗಳು ಮತ್ತು ಲದ್ದಿ ಕಂಡುಬಂದಿದೆ. ಉಳವಿ ಹೋಬಳಿ ಗ್ರಾಮಸ್ಥರು ಕಾಡಿನಲ್ಲಿ ಸಂಚರಿಸುತ್ತಿರುವ ಆನೆಗಳು ಗ್ರಾಮದೊಳಗೆ ನುಗ್ಗಿ ಪ್ರಾಣಹಾನಿ ಮಾಡಬಹುದು ಎನ್ನುವ ಭಯದ ವಾತಾವರಣದಲ್ಲಿದ್ದಾರೆ.
ವಿಷಯ ತಿಳಿದ ಸೊರಬ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಆನೆಗಳ ನಿಯಂತ್ರಣಕ್ಕೆ ತಜ್ಞರ ತಂಡದೊಂದಿಗೆ ಕಾನಹಳ್ಳಿ ಗ್ರಾಮಕ್ಕೆ ದೌಡಾಯಿಸಿದ್ದು, ಆನೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.ಉಳವಿ ಹೋಬಳಿ ಕೆಲವು ಗ್ರಾಮಗಳಲ್ಲಿ 2 ಆನೆಗಳು ಸಂಚರಿಸುತ್ತಿರುವ ಮಾಹಿತಿ ಇದೆ. ಈ ಬಗ್ಗೆ ಕಾರ್ಯಾಚರಣೆ ನಡೆಯುತ್ತಿದೆ. ಪತ್ರೆಸಾಲು, ಕರ್ಜಿಕೊಪ್ಪ, ಕಣ್ಣೂರು, ಕಾನಹಳ್ಳಿ, ಕೈಸೋಡಿ, ಮೈಸಾವಿ ಗ್ರಾಮದ ರೈತರು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವಾಗ ಜಾಗೃತರಾಗಿರಬೇಕು ಮತ್ತು ರೈತರು ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಆನೆಗಳ ತಂಟೆಗೆ ಹೋಗದೇ ಇಲಾಖೆಯೊಂದಿಗೆ ಸಹಕರಿಸುವಂತೆ ವಲಯ ಅರಣ್ಯಾಧಿಕಾರಿ ಮತ್ತು ಉಳವಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
- - --೦೨ಕೆಪಿಸೊರಬ೦೧:
ಸೊರಬ ತಾಲೂಕಿನ ಉಳವಿ ಹೋಬಳಿಯ ಕಾನಹಳ್ಳಿ, ಮೈಸಾವಿ, ಕಣ್ಣೂರು ಸುತ್ತಮುತ್ತಲಿನ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಆನೆಗಳ ಕಾರ್ಯಾಚರಣೆ ಕಾರ್ಯ ಕೈಗೊಂಡು ಮಾಹಿತಿ ಪಡೆದರು.