- ಗ್ರಾಮಸ್ಥರಿಗೆ ಭೀತಿ । ಅರಣ್ಯ ಇಲಾಖೆ, ಎಲಿಫಂಟ್ ಟಾಸ್ಕ್ ಪೋರ್ಸ್ ಸಿಬ್ಬಂದಿ ಕಾರ್ಯಾಚರಣೆ
ತಾಲೂಕಿನ ಕಡಹಿನಬೈಲು ಗ್ರಾಮದ ಜೇನುಕಟ್ಟೆಸರ, ಭೀಮನರಿ, ಚೆನ್ನಮಣಿ ಭಾಗದಲ್ಲಿ ಮಂಗಳವಾರ 5 ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.
ಶೆಟ್ಟಿಕೊಪ್ಪದಿಂದ 2 ಕಿ.ಮೀ. ದೂರದಲ್ಲಿರುವ ಜೇನು ಕಟ್ಟೆಸರ, ಭೀಮನರಿ, ಚೆನ್ನಮಣೆಯು ಆರಂಬಳ್ಳಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡೇ ಇದ್ದು ಜೇನುಕಟ್ಟೆ ಸರದಲ್ಲಿ 12 ಎಕರೆ ಜಾಗದಲ್ಲಿ ದೊಡ್ಡ ಕೆರೆ ಇದೆ. ಆರಂಬಳ್ಳಿ ಮೀಸಲು ಅರಣ್ಯಕ್ಕೆ ಸೇರಿ ಕೊಂಡಿರುವ 4 ಕಾಡಾನೆ ಹಾಗೂ 1 ಮರಿ ಆನೆ ಸೇರಿ ಒಟ್ಟು 5 ಕಾಡಾನೆಗಳು ಹಗಲು ಹೊತ್ತಿನಲ್ಲಿ ಮೀಸಲು ಅರಣ್ಯಕ್ಕೆ ಸೇರಿಕೊಳ್ಳುತ್ತಿದೆ. ಬೆಳಿಗ್ಗೆ ಅಥವಾ ಸಂಜೆ ಹೊತ್ತಿಗೆ ಜೇನುಕಟ್ಟೆ ಕೆರೆಗೆ ಬಂದು ನೀರು ಕುಡಿದು ಹೋಗುತ್ತಿದೆ.ಅಲ್ಲದೆ ಭದ್ರಾ ಮುಳುಗಡೆ ಪ್ರದೇಶದ ಕೆಲವು ರೈತರಿಗೆ ಈ ಭಾಗದಲ್ಲಿ ಜಮೀನು ನೀಡಿದ್ದು ಅವರು ಅಲ್ಲಿ ಮಾಡಿರುವ ಬಾಳೆ ತೋಟಕ್ಕೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಕಳೆದ 2- 3 ದಿನಗಳಿಂದಲೂ ಈ ಭಾಗದಲ್ಲಿ ಕಾಡಾನೆಗಳು ಓಡಾಟ ಮಾಡುತ್ತಿದ್ದು ಮಂಗಳವಾರ ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನೆ ಶೆಟ್ಟಿಕೊಪ್ಪ- ಮಾಕೋಡು ರಸ್ತೆಯಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದೆ. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.