ಕನ್ನಡಪ್ರಭ ವಾರ್ತೆ ಬೇಲೂರು
ಕಾಡಾನೆ ದಾಂಧಲೆಯಿಂದ ತಾಲೂಕಿನ ಬೆಳ್ಳಾವರ ಗ್ರಾಮದ ಕೃಷಿಕ ವಿಶ್ವನಾಥ್ ನಾಯಕ್ ಅವರ ತೋಟದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಲ್ಲದೆ ಅಪಾರ ಪ್ರಮಾಣದ ಬೆಳೆ ಹಾನಿಯಿಂದ ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಿದ್ದರು ಇಲಾಖೆಯು ಕೆಲವೇ ಸಾವಿರಾರು ರುಪಾಯಿಗಳ ಪರಿಹಾರ ನೀಡುತ್ತಾ ಕೃಷಿಕರ ಬದುಕನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಬೆಳ್ಳಾವರ ಗ್ರಾಮದ ಕೃಷಿಕರಾದ ವಿಶ್ವನಾಥ್ ನಾಯಕ್ ಬೇಸರ ವ್ಯಕ್ತಪಡಿಸಿದ್ದಾರೆ. ಅರೇಹಳ್ಳಿ ಭಾಗದ ಸುತ್ತಮುತ್ತಲಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಲವು ಬೆಳೆಗಾರರು ಸೋಲಾರ್ ತಂತಿ ಬೇಲಿಯನ್ನು ಅಳವಡಿಸುವತ್ತ ಮೊರೆ ಹೋಗಿದ್ದಾರೆ.ಕೆಲ ಕಿಲಾಡಿ ಕಾಡಾನೆಗಳ ಹಿಂಡು ಅವುಗಳನ್ನು ಸಹ ಭೇದಿಸುತ್ತಾ ಜಮೀನಿನ ಒಳ ಪ್ರವೇಶಿಸಿ ದಾಂಧಲೆ ನಡೆಸುತ್ತಿದೆ. ಅಲ್ಲದೆ ಕಳೆದ ಏಳೆಂಟು ತಿಂಗಳ ಹಿಂದೆ ಬೆಳ್ಳಾವರ ಗ್ರಾಮದಲ್ಲಿರುವ ನಮ್ಮ ಜಮೀನಿನಲ್ಲಿ ಸುಮಾರು 30 ವರ್ಷಗಳಿಂದ ಬೆಳೆಸಿ ಪೋಷಿಸಿದ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಹಾಗೂ ನೀರಾವರಿ ಬಳಕೆಯ ಉಪಕರಣಗಳನ್ನು ಹಾನಿ ಮಾಡಿದ್ದು ಸುಮಾರು ಮೂರ್ನಾಲ್ಕು ಲಕ್ಷದಷ್ಟು ನಷ್ಟವಾಗಿತ್ತು. ನಂತರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ನಾಮ್‌ಕಾವಸ್ಥೆಗೆ ಕೇವಲ 30 ಸಾವಿರದಷ್ಟು ಪರಿಹಾರ ಕೊಟ್ಟು ಸುಮ್ಮನಾದರು. ಹೀಗಾದರೆ ಹಲವಾರು ವರ್ಷಗಳಿಂದ ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುವ ಮಧ್ಯಮ ವರ್ಗದ ಕೃಷಿಕರ ಬದುಕೇನು ಎಂದು ಪ್ರಶ್ನಿಸಿದ್ದಾರೆ.ಇವುಗಳ ನಡುವೆ ಕಳೆದ ಶನಿವಾರ ಸುಮಾರು 18 ಕಾಡಾನೆಗಳ ಹಿಂಡು ನಮ್ಮ ಜಮೀನಿಗೆ ಬಂದು ನಾಲ್ಕೈದು ವರ್ಷಗಳಿಂದ ಬೆಳೆಸಿ ಪೋಷಿಸಿದ ಸುಮಾರು 400 ಅಡಿಕೆ, 300ಕ್ಕೂ ಹೆಚ್ಚಿನ ಕಾಫಿ ಗಿಡಗಳನ್ನು ದ್ವಂಸ ಮಾಡಿದ ಪರಿಣಾಮ ಲಕ್ಷಾಂತರ ಮೌಲ್ಯದ ಬೆಳೆ ನಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಾಮ್‌ಕಾವಸ್ಥೆಗೆ ಸಾವಿರಾರು ರುಪಾಯಿಗಳನ್ನೂ ನೀಡುವ ಬದಲಾಗಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.