ಕೊಡಗು ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ಕಾಡಾನೆ ಹಾವಳಿ

KannadaprabhaNewsNetwork |  
Published : Jun 28, 2025, 12:18 AM IST
ಚಿತ್ರ : 27ಎಂಡಿಕೆ3 : ಕೆಡಿಪಿ ಸಭೆಯಲ್ಲಿ  ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಮಾತನಾಡಿದರು.  | Kannada Prabha

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅಧ್ಯಕ್ಷತೆಯಲ್ಲಿ ಕೊಡಗು ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ ಆನೆ-ಮಾನವ ಸಂಘರ್ಷದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಅರಣ್ಯ ಅಧಿಕಾರಿಗಳು ಅಗತ್ಯ ಕಾರ್ಯಯೋಜನೆ ರೂಪಿಸಲು ಭೋಸರಾಜು ನಿದೇರ್ಶನ

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಹಾನಿ ಪ್ರಮಾಣ ಕೂಡ ಅಧಿಕವಾಗುತ್ತಿದೆ. ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಇಲಾಖೆ ವಿರುದ್ಧ ಶಾಸಕರು ಹಾಗೂ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅಧ್ಯಕ್ಷತೆಯಲ್ಲಿ ನಗರದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಆರಂಭದಲ್ಲೇ ಆನೆ-ಮಾನವ ಸಂಘರ್ಷದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಹಾಗೂ ಮಾನವ ಸಂಘರ್ಷ ನಿರಂತರವಾಗಿ ಮುಂದುವರಿದಿದ್ದು, ಮಾನವ ಮತ್ತು ವನ್ಯಪ್ರಾಣಿ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಅಗತ್ಯ ಕಾರ್ಯಯೋಜನೆ ರೂಪಿಸಬೇಕು ಎಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ನಿರ್ದೇಶನ ನೀಡಿದರು.ಇದೇ ಸಂದರ್ಭದಲ್ಲಿ ಅರಣ್ಯ ಸಚಿವರ ಜೊತೆ ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಅರಣ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿದ್ದು, ಬೆಂಗಳೂರಿನಲ್ಲಿ ಅರಣ್ಯ ಸಚಿವರು, ಕೊಡಗು ಜಿಲ್ಲೆಯ ಶಾಸಕರು, ಅರಣ್ಯ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಸಭೆ ನಡೆಸುವ ಬಗ್ಗೆ ಚರ್ಚಿಸಿದರು.

ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆಡಿಪಿ ಸಭೆಗೆ ಆಗಮಿಸುತ್ತಿಲ್ಲ. ಆದ್ದರಿಂದ ಸರ್ಕಾರದ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.ಈ ಸಂದರ್ಭದಲ್ಲಿ ಅರಣ್ಯ ಸಚಿವರ ಜೊತೆ ಮಾತನಾಡಿದ ಎ.ಎಸ್.ಪೊನ್ನಣ್ಣ, ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ವನ್ಯಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದ್ದು, ಈ ಸಂಬಂಧ ಸಚಿವರು ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.ವನ್ಯಪ್ರಾಣಿಗಳ ಹಾವಳಿ ಬಗ್ಗೆ ವಿಷಯ ಪ್ರಸ್ತಾಪಿಸಿದ ಎ.ಎಸ್.ಪೊನ್ನಣ್ಣ, ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಕಡಿಮೆಯಾಗಿಲ್ಲ. ವನ್ಯಪ್ರಾಣಿಗಳ ಹಾವಳಿಯಿಂದ ಮಾನವ ಪ್ರಾಣ ಹಾನಿ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕು ಎಂದರು.ಬ್ಯಾರಿಕೇಡ್ ಅಳವಡಿಸುವುದು, ಟ್ರಂಚ್ ನಿರ್ಮಾಣ ಮಾಡುವುದು ಒಂದೆಡೆಯಾಗಿದೆ. ಆದರೂ ಬಿ.ಶೆಟ್ಟಿಗೇರಿ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಾಡಾನೆಗಳು ದಂಡು ದಂಡಾಗಿ ಬರುತ್ತಿವೆ. ಇವುಗಳನ್ನು ನಿಯಂತ್ರಣ ಮಾಡಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಡಾ.ಮಂತರ್ ಗೌಡ, ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಮನ್ವಯತೆ ಇರಬೇಕು. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕಾಡಾನೆಗಳನ್ನು ಓಡಿಸುತ್ತಾರೆ. ಇದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದರು.ಈ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಕಾಡಾನೆ ಹಾವಳಿ ಇಂದು ನಿನ್ನೆಯದಲ್ಲ. ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು, ವನ್ಯಪ್ರಾಣಿ ಹಾವಳಿ ತಡೆಯಲು ವೈಜ್ಞಾನಿಕ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.ಕಾಡುಗಳಲ್ಲಿ ಕೆರೆಗಳ ಸಂರಕ್ಷಣೆ ಮಾಡಬೇಕು. ನೀಲಗಿರಿ ಹಾಗೂ ಅಕೇಶಿಯಾ ಮರಗಳನ್ನು ತೆಗೆದು ಹಣ್ಣು ಹಾಗೂ ಬಿದಿರು ಗಿಡ ಬೆಳೆಯುವಂತಾಗಬೇಕು. ಇದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಮಾತನಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ತಿತಿಮತಿ ಸೇರಿದಂತೆ ವಿವಿಧ ಕಡೆಗಳಲ್ಲಿ ಟ್ರಂಚ್ ನಿರ್ಮಾಣ ಮಾಡಿರುವುದರಿಂದ ಕಾಡಾನೆ ಹಾವಳಿ ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭ ಮಾತನಾಡಿದ ಎ.ಎಸ್.ಪೊನ್ನಣ್ಣ, ಯಾವ ಯಾವ ಪ್ರದೇಶಗಳಲ್ಲಿ ಕಾಡಾನೆ ಇವೆ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರೆಯಬೇಕು. ಕಾಡಾನೆ ಹಾವಳಿ ನಿಯಂತ್ರಿಸಲು ಇರುವ ಕಾರ್ಯಪಡೆಯ ತಂಡ ಬಗ್ಗೆ ಮಾಹಿತಿ ಇರಬೇಕು ಎಂದರು.ಶಾಸಕ ಡಾ.ಮಂತರ್ ಗೌಡ, ಮಡಿಕೇರಿ ವಿಭಾಗದ ಕೆದಕಲ್‌ನಲ್ಲಿ ವನ್ಯಪ್ರಾಣಿಗಳ ಹಾವಳಿ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇದುವರೆಗೂ ಭೇಟಿ ನೀಡಿಲ್ಲ ಎಂದರು.ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಮಾಹಿತಿ ಬಂದಿದ್ದರೂ ಸಹ ಸ್ಥಳಕ್ಕೆ ಏಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದರು.ಹಕ್ಕುಪತ್ರ ಬಾಕಿ ಅರ್ಜಿಗಳ ವಿಲೇವಾರಿ: ಡಿಸಿ

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, 94ಸಿ ಮತ್ತು 94 ಸಿಸಿಅಡಿ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ. ಈ ಸಂಬಂಧ ಪ್ರತೀ ವಾರ ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 700 ಕಾಣೆಯಾದ ಕಡತವಿದ್ದು, ಕಾಣೆಯಾದ ಕಡತಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಸಮಸ್ಯೆ ಬಗೆಹರಿಯಲಿದ್ದು, ಫಲಾನುಭವಿಗಳಿಗೆ ಆರ್‌ಟಿಸಿ ದೊರೆಯಲಿದೆ. ಈ ಬಗ್ಗೆ ನಾಲ್ಕೈದು ಸಭೆ ಮಾಡಲಾಗಿದೆ ಎಂದರು. ಈ ಸಂದರ್ಭ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ, ಅಕ್ರಮ ಸಕ್ರಮ ಸಮಿತಿಯಲ್ಲಿ ಎರಡು ಎಕರೆ ಭೂಮಿ ಮಂಜೂರು ಮಾಡಲು ಅವಕಾಶವಿದೆ. ಆದರೂ ಇದರಲ್ಲೂ ಸಹ ವ್ಯತ್ಯಾಸಗಳು ಕಾಣುತ್ತವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಹಸೀಲ್ದಾರರಿಗೆ ಸೂಚಿಸಿದರು.ಸಮಿತಿ ಸದಸ್ಯರಾದ ಎಚ್.ಎಂ.ಕಾವೇರಿ, ಕರಡಿಗೋಡು ಗ್ರಾಮದಲ್ಲಿ ಪ್ರವಾಹ ಪೀಡಿತ ಜನರು ವಾಸ ಮಾಡುತ್ತಿದ್ದು, ಇವರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂದು ಗಮನ ಸೆಳೆದರು.ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಅಲ್ಲಿನ ಜನರಿಗಾಗಿ ಮಾಲ್ದಾರೆ ಗ್ರಾ.ಪಂ.ನಲ್ಲಿ ಎರಡು ಎಕರೆ ಜಾಗ ಗುರುತಿಸಲಾಗಿದೆ. ಆದರೆ ಯಾರೂ ಸಹ ಅಲ್ಲಿಗೆ ತೆರಳಲು ಮುಂದಾಗುತ್ತಿಲ್ಲ ಎಂದು ಹೇಳಿದರು.ಡಾ.ಮಂತರ್ ಗೌಡ, ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಎಲ್ಲರ ಪ್ರಯತ್ನ ಮುಖ್ಯ ಎಂದರು. ಸಚಿವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ರಸ್ತೆಗಳು ಹಾಳಾಗಿದ್ದು, ಗುಂಡಿಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳುವಂತೆ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಸರ್ಕಾರದಲ್ಲಿ ಹಣವಿದ್ದು, ಸಮರ್ಪಕವಾಗಿ ಖರ್ಚು ಮಾಡಿದಲ್ಲಿ ಅನುದಾನ ಬಿಡುಗಡೆಯಾಗಲಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.ಸಮಿತಿ ಸದಸ್ಯರಾದ ಎಚ್.ಎಂ.ಕಾವೇರಿ ಮಾತನಾಡಿ, ಜಿಲ್ಲೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭಿಣಿಯಾಗುತ್ತಿರುವ ಮಾಹಿತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಮಂತರ್ ಗೌಡ ಹಾಡಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆದಿವಾಸಿ ಜನರ ಬದುಕನ್ನು ಉತ್ತಮಪಡಿಸುವಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಮಾತನಾಡಿ, ಮುಂಗಾರು ಮಳೆ ಅವಧಿಯಲ್ಲಿ ಸೆಸ್ಕ್ ಇಲಾಖೆಯ ಎಂಜಿನಿಯರ್, ಸಿಬ್ಬಂದಿಗ ಹೆಚ್ಚಿನ ಕೆಲಸ ಮಾಡಬೇಕಿದೆ. ಗಾಳಿ ಮಳೆಗೆ ವಿದ್ಯುತ್ ಕಂಬ ಬೀಳುವುದು, ಟ್ರಾನ್ಸ್ ಫಾರ್ಮರ್ ಮತ್ತಿತರ ಸಮಸ್ಯೆಗಳು ತಲೆದೋರಲಿದ್ದು, ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೆಲಸ ನಿರ್ವಹಿಸಬೇಕಿದೆ, ಸಮರ್ಥವಾಗಿ ಕೆಲಸ ನಿರ್ವಹಿಸಬೇಕು. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರಬೇಕು ಎಂದು ಸಚಿವರು ಸಲಹೆ ಮಾಡಿದರು. ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ಎ.ಮಂಜು, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಜಿ.ಪಂ. ಉಪ ಕಾರ್ಯದರ್ಶಿ ಅಬ್ದುಲ್ ನಬಿ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

-----------------------ನಾಡಗೀತೆ ಕತ್ತರಿಗೆ ಭೋಜೇಗೌಡ ಅಸಮಾಧಾನ!

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯ ಆರಂಭದಲ್ಲಿ ಯೂಟ್ಯೂಬ್ ಮೂಲಕ ಹಾಕಲಾದ ನಾಡಗೀತೆಗೆ ಕತ್ತರಿ ಹಾಕಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಾಡಗೀತೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಪ್ಯಾರ ತುಂಡರಿಸಲಾಗಿತ್ತು. ಇದಕ್ಕೆ ಕೆಂಡಾಮಂಡಲರಾದ ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಜಿಲ್ಲಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಡಗೀತೆ ತುಂಡರಿಸಿ ರೆಕಾರ್ಡ್ ಮಾಡಿದ ಸಿಬ್ಬಂದಿ ಸಸ್ಪೆಂಡ್‌ ಮಾಡುವಂತೆ ಒತ್ತಾಯಿಸಿದರು.

ಕೆಂಪೇಗೌಡ ಜಯಂತಿಯಂದೇ ನಾಡಗೀತೆಗೆ ಕತ್ತರಿ ಹಾಕಲಾಗಿದೆ. ಇದು ತಪ್ಪು, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ