ಚಿಕ್ಕಮಗಳೂರು ನಗರಕ್ಕೂ ತಪ್ಪದ ಕಾಡಾನೆ ಆತಂಕ : ಪತ್ತೆಗೆ ಬೆಲ್ಜಿಯಂನ ತಳಿಯ ನಾಯಿ

KannadaprabhaNewsNetwork |  
Published : Feb 26, 2026, 01:15 AM IST
Elephant

ಸಾರಾಂಶ

ಚಿಕ್ಕಮಗಳೂರು ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿದ್ದ ಕಾಡನೆ ಹಾವಳಿ ಭೀತಿ ಇದೀಗ ಚಿಕ್ಕಮಗಳೂರು ನಗರಕ್ಕೂಶುರುವಾಗಿದೆ. ನಗರದೊಳಗೂ ಆನೆಗಳು ಪ್ರವೇಶಿಸುವ ಆತಂಕ ಎದುರಾಗಿದೆ.

 ಚಿಕ್ಕಮಗಳೂರು :  ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿದ್ದ ಕಾಡನೆ ಹಾವಳಿ ಭೀತಿ ಇದೀಗ ಚಿಕ್ಕಮಗಳೂರು ನಗರಕ್ಕೂಶುರುವಾಗಿದೆ. ನಗರದೊಳಗೂ ಆನೆಗಳು ಪ್ರವೇಶಿಸುವ ಆತಂಕ ಎದುರಾಗಿದೆ.

ಬೇಲೂರು ಭಾಗದಿಂದ ಚಿಕ್ಕಮಗಳೂರು ತಾಲೂಕಿಗೆ ಆಗಮಿಸಿರುವ 2 ಕಾಡಾನೆಗಳು ನಗರಕ್ಕೆ ಹೊಂದಿಕೊಂಡ ಮೂಗ್ತಿಹಳ್ಳಿ, ವಸ್ತಾರೆ, ಮಳಲೂರು, ದಂಟರ ಮಕ್ಕಿ, ನಲ್ಲೂರು, ಕಾಲೇನಹಳ್ಳಿ, ಉಕ್ಕುಂದ, ಗಂಟೆಹಳ್ಳಿ, ಜೋಳದಾಳ್, ದಂಬದಹಳ್ಳಿ, ಬಿಕ್ಕೋಡು, ಹಿರೇಗುಂದ, ಇಂದಾ ವರ ಹಾಗೂ ಚಿಕ್ಕೊಳಲೆ ಭಾಗದಲ್ಲಿ ನಿರಂತರ ಸಂಚಾರ ನಡೆಸುತ್ತಿವೆ.

2 ವರ್ಷದ ಹಿಂದೆ ಕಾಡಾನೆ ನಗರ ಪ್ರವೇಶಿಸಿ ರಾಜಾರೋಷವಾಗಿ ಓಡಾಡಿತ್ತು. ಇದರ ಬೆನ್ನಲ್ಲೇ ಚಿಕ್ಕಮಗಳೂರಿಗೆ ಹೊಂದಿಕೊಂಡ ನಲ್ಲೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡೇ ಬೀಡು ಬಿಟ್ಟಿತ್ತು. ಇದೀಗ ಮತ್ತೆ ಆನೆಗಳ ಓಡಾಟ ನಡೆಸುತ್ತಿವೆ. ಅಪ್ಪಿ ತಪ್ಪಿ ಇವು ಚಿಕ್ಕಮಗಳೂರು ನಗರ ಪ್ರವೇಶ ಮಾಡಿದರೆ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಅಪಾಯವಿದೆ. ಹೀಗಾಗಿ ಕಾಡಾನೆಗಳನ್ನು ತಡೆದು,ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಆತಂಕದ ವಾತಾವರಣ:

ಜಿಲ್ಲೆಯ ಮಲೆನಾಡು ಭಾಗದ ಎನ್ ಆರ್ ಪುರ ಹಾಗೂ ಮೂಡಿಗೆರೆಗಳಲ್ಲಿಯೂ ಕಾಡಾನೆ ಹಾವಳಿ ಹೆಚ್ಚಲಾರಂಭಿಸಿದೆ. ಇದರಿಂದ ಮಲೆನಾಡಿನ ಜನತೆ ಆತಂಕದಲ್ಲೇ ಬದುಕುವ ಸ್ಥಿತಿ ಎದುರಾಗಿದೆ.

ಮೂಡಿಗೆರೆ ತಾಲೂಕಿನ ತತ್ಕೊಳ ಭಾಗದಲ್ಲಿ ಎರಡು ಆನೆಗಳು ನಿರಂತರ ಸಂಚಾರ ನಡೆಸುತ್ತಿವೆ. ರಸ್ತೆಯಲ್ಲೇ ರಾಜಾ ರೋಷವಾಗಿ ಓಡಾಡುತ್ತಿರುವುದರಿಂದ ವಾಹನ ಸವಾರರು ಹಾಗೂ ಸ್ಥಳೀಯರು ಭಯದಲ್ಲಿ ಓಡಾಡುವಂತಾಗಿದೆ.

ಎನ್ ಆರ್ ಪುರ ತಾಲೂಕಿನ ಯಕ್ಕಡಬೈಲು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. ಅಲ್ಲದೆ ಕಾಫಿ ತೋಟಗಳ ನಡುವೆ ಕಾಡಾನೆ ಸಂಚಾರದಿಂದ ತೋಟದ ಕಾರ್ಮಿಕರು ಕೆಲಸಕ್ಕೆ ಬರಲು ಭಯಪಡುವಂತಾಗಿದೆ. 

ಕಾರ್ಯಾಚರಣೆಗೆ ಜೋಡಿ ಶ್ವಾನ ದಳ

ಅರಣ್ಯ ಇಲಾಖೆ ಸಿಬ್ಬಂದಿ ಕಾಫಿ ತೋಟ ಹಾಗೂ ಕಾಡನ್ನು ಅಲೆದು ಆನೆಗಳ ಪತ್ತೆ ಹಚ್ಚುವುದು ಕಷ್ಟ ಸಾಧ್ಯ. ದಟ್ಟ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟರೆ ಡ್ರೋಣ್ ಮೂಲಕವೂ ಆನೆ ಹಿಂಡು ಪತ್ತೆ ಸಾಧ್ಯ ವಾಗುವುದಿಲ್ಲ. ಹೀಗಾಗಿ ಆನೆಗಳ ಪತ್ತೆಗೆ ಅರಣ್ಯ ಇಲಾಖೆ ಇದೀಗ ಶ್ವಾನ ದಳದ ಮೊರೆ ಹೋಗಿದೆ.

ಅರಣ್ಯ ಇಲಾಖೆಗೆ ಎರಡು ಹೆಣ್ಣು ನಾಯಿಗಳು ಆನೆಗಳ ಪತ್ತೆಗೆ ಸೇರ್ಪಡೆಗೊಂಡಿವೆ. ಬೆಲ್ಜಿಯಂನ ಮಲೆನೈ ತಳಿಯ ನಾಯಿ ಗಳಿಗೆ ಆನೆ ಪತ್ತೆಗೆ ಸಂಬಂಧಿಸಿದ ಬಂಡೀಪುರದಲ್ಲಿ ಅಮೃತ್ ಎನ್ನುವರು ತರಬೇತಿ ನೀಡಿದ್ದರು. ಇದೀಗ ಈ ಶ್ವಾನಗಳು ಚಿಕ್ಕಮಗಳೂರಿನ ಅರಣ್ಯ ಇಲಾಖೆಗೆ ನೆರವಾಗುತ್ತಿವೆ.

ಆನೆ ಮೂತ್ರದ ವಾಸನೆ ಹಾಗೂ ಹೆಜ್ಜೆ ಗುರುತನ್ನು ನೋಡಿ ಆನೆಗಳು ಎಲ್ಲಿವೆ ಎಂದು ಪತ್ತೆ ಮಾಡಿ ಇನ್ನು ಒಂದು ಕಿ.ಮೀ ದೂರದಲ್ಲಿ ಈ ಶ್ವಾನಗಳು ಅರಣ್ಯ ಸಿಬ್ಬಂದಿಗೆ ಆನೆಗಳ ಇರುವಿಕೆ ಬಗ್ಗೆ ಮಾಹಿತಿ ನೀಡುತ್ತಿವೆ. ಈ ಟ್ರ್ಯಾಕರ್ ಡಾಗ್ ಗಳ ಸಹಾಯದಿಂದ ಅರಣ್ಯ ಇಲಾಖೆ ಆನೆಗಳ ಮೇಲೆ ನಿಗಾ ವಹಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಂಬೇಡ್ಕರ್‌ ವ್ಯಕ್ತಿಯಲ್ಲ ಜಗತ್ತಿನ ಶಕ್ತಿ
ನಾಯಿ, ಬೆಕ್ಕುಗಳಿಗಿಲ್ಲದ ಮೈಲಿಗೆ ಮನುಷ್ಯರಿಗೆ ಏಕೆ?