ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಾಗರದ ವರದಶ್ರೀ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಶ್ಚಿಮಘಟ್ಟದ ವಿವಿಧ ಪರಿಸರ ಸಂಘಟನೆಗಳ ಸಮಾಲೋಚನಾ ಸಭೆ ಬಳಿಕ ವೃಕ್ಷಲಕ್ಷ ಆಂದೋಲನದ ನಿಯೋಗ ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಸಾಗರ ಎ.ಸಿ.ಎಫ್. ರವಿ ಕೆ. ಸೊರಬ ಎ.ಸಿಎಫ್. ಸುರೇಶ, ಹೊಸನಗರ ಎ.ಸಿ.ಎಫ್. ಮೋಹನಕುಮಾರ ಇವರನ್ನು ಭೇಟಿ ಮಾಡಿ ಅರಣ್ಯ ಸಂರಕ್ಷಣೆ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿತು.
ರಾಷ್ಟ್ರೀಯ ಸಾಂಬಾರು ಮಂಡಳಿ ನಿರ್ದೇಶಕ ಪ್ರಸನ್ನ ಕೆರೆಕೈ, ತುಮರಿ ಇವರಿಗೆ ಅಪ್ಪೇಮಿಡಿ ಮಾವಿಗೆ ಸಾಂಬಾರು ಮಂಡಳಿ ಮಾನ್ಯತೆ ನೀಡಬೇಕು. ಪಶ್ಚಿಮ ಘಟ್ಟದ ಅಮೂಲ್ಯ ಜೀವವೈವಿಧ್ಯತಳಿ ಅಪ್ಪೇಮಿಡಿಗೆ ರಾಷ್ಟ್ರೀಯ ಸಾಂಬಾರು ಮಂಡಳಿ ಮಾನ್ಯತೆ ನೀಡಬೇಕು, ಸಾಂಬಾರು ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಮನವಿ ಮಾಡಿದರು.ಅಘನಾಶಿನಿ ವೇದಾವತಿ ನದಿ ತಿರುವು ಯೋಜನೆ ಮೂಲಕ ಬೆಂಗಳೂರಿಗೆ ನೀರು ಸಾಗಿಸುವ ಹಿಂಬಾಗಿಲ ಶರಾವತಿ ಯೋಜನೆಯಾಗಿದೆ ಎಂದು ಪಶ್ಚಿಮ ಘಟ್ಟದ ಪರಿಸರ ಸಂಘಟನೆಗಳು ವಿಶ್ಲೇಷಣೆ ಮಾಡಿವೆ. ಬೇಡ್ತಿ ಅಘನಾಶಿನಿ ಯೋಜನೆ ಕೈಬಿಡುವ ನಿರ್ದಾರವನ್ನು ರಾಜ್ಯ ಜಲಸಂಪನ್ಮೂಲ ಇಲಾಖೆ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಕಾನು ಅರಣ್ಯಗಳ ರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಸಮರೋಪಾದಿಯಲ್ಲಿ ರಾಜ್ಯ ಅರಣ್ಯ ಇಲಾಖೆ ಜಾರಿಮಾಡಬೇಕು. ಹುಲಿಕಲ್ ಘಾಟ್‍ನ ಭೂಕುಸಿತ, ಕಾರ್ಮಿಕರ ಸಾವು ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿಗೆ ಸಾಕ್ಷಿಯಾಗಿದೆ. ಘಟ್ಟದಲ್ಲಿ ರಸ್ತೆ ಅಗಲೀಕರಣ ಅಪಾಯಕಾರಿ ಎಂದು ಭೂಕುಸಿತ ತಜ್ಞರ ಸಮೀತಿ 2021ರಲ್ಲಿ ನೀಡಿದ ವರದಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.