ಕನ್ನಡಪ್ರಭ ವಾರ್ತೆ ಕುಶಾಲನಗರವನ್ಯಜೀವಿಗಳು ಮನುಷ್ಯರಂತೆ ಜೀವಿಗಳು. ಅವುಗಳ ಜೊತೆ ಸಹಬಾಳ್ವೆಯಿರಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ ವ್ಯಕ್ತಪಡಿಸಿದರು.ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಅಳುವಾರದಲ್ಲಿರುವ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ವಿಷಪೂರಿತ ಹಾವುಗಳು ಮತ್ತು ಗುರುತಿಸುವಿಕೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳು ಬಗ್ಗೆ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು:
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಲಿಂಗರಾಜು ದೊಡ್ಡಮನಿ ಮಾತನಾಡುತ್ತಾ ಎಲ್ಲಾ ಕಡೆ ಹಾವಿನ ವಿಷಕ್ಕೆ ಔಷಧಿ ದೊರೆಯುತ್ತಿದೆ. ಸಾರ್ವಜನಿಕರು ತಡ ಅಥವಾ ನಿರ್ಲಕ್ಷ್ಯ ಮಾಡದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಕಿವಿಮಾತು ತಿಳಿಸಿದರು.ದಕ್ಷಿಣ ಕನ್ನಡ ಜಿಲ್ಲೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಉಪನಿರ್ದೇಶಕರಾದ ಡಾ.ಕೆ.ಬಿ.ಚಿದಾನಂದ ಅವರು ಮಾತನಾಡಿ, ವಿಷಪೂರಿತ ಹಾವು ಉತ್ಪಾದಿಸುವ ವಿಷವು ಕೇವಲ ಪರಿವರ್ತಿತ ಜೊಲ್ಲು ಇದು ಮನುಷ್ಯನ ದೇಹ ಸಂಪರ್ಕ ಬಂದಾಗ ಮಾತ್ರ ನರಗಳ ವ್ಯೂಹದ ಮೇಲೆ, ರಕ್ತದ ಮೇಲೆ ಸ್ನಾಯುಗಳ ಮೇಲೆ ಹಾನಿಕಾರಕ ಉಂಟುಮಾಡಿ ವಿಷಕಾರಿಯಾಗುತ್ತದೆ. ಮಂಡಲದ ಹಾವು, ಕಟ್ಟು ಹಾವು, ನಾಗರ ಹಾವು ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
ಸ್ವಚ್ಛವಾಗಿಟ್ಟುಕೊಳ್ಳಬೇಕು:ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಎಂ.ಸಿ. ಶಿವಕುಮಾರ್ ಅವರು ಮಾತನಾಡಿ, ಈಗಾಗಲೇ ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಯೋಜನೆಯಂತೆ ಹಾವುಗಳ ಕಚ್ಚುವಿಕೆಯಿಂದ ಸಾವಿನ ಪ್ರಮಾಣವನ್ನು ಮುಂದಿನ ಕೆಲವು ವರ್ಷದೊಳಗೆ ಕಡಿಮೆ ಮಾಡುವ ಯೋಜನೆ ಹಾಕಿಕೊಂಡಿದೆ. ರೈತರು ಕಾಲಿಗೆ ಕವಚಗಳು, ಹೊಲಗದ್ದೆಗಳನ್ನು ಮನೆ ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಂಸ್ಥೆಯಿಂದ ಹಲವಾರು ವನ್ಯಜೀವಿಗಳ ಬಗ್ಗೆ ಹಾವಿನ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಪಶುವೈದ್ಯಾಧಿಕಾರಿ ಡಾ. ಶ್ರೀದೇವು ಅವರು ಮಾತನಾಡಿ, ಹಾವಿನ ಬಗ್ಗೆ ಸಂಪೂರ್ಣ ಮಾಹಿತಿ ಮಾಡಿಕೊಟ್ಟರು. ಅಲ್ಲದೆ ರೈತರಲ್ಲಿದ್ದ ಅಪನಂಬಿಕೆ, ಪ್ರಥಮ ಚಿಕಿತ್ಸೆ, ಪ್ರತಿಬಂಧಕಗಳು ವೈದ್ಯಕೀಯ ಸೌಲಭ್ಯದ ಬಗ್ಗೆ ವಿವರಿಸಿದರು. ರೈತರಲ್ಲಿದ್ದ ಹಲವಾರು ಆತಂಕಗಳನ್ನು ಬಗೆಹರಿಸಿದರು ಹಾಗೂ ವಿಷಪೂರಿತ ಹಾವುಗಳನ್ನು ಗುರುತಿಸುವ ಬಗ್ಗೆ ಮಾಹಿತಿ ಮಾಡಿಕೊಟ್ಟರು.ಉರಗಪ್ರೇಮಿ ಪುಷ್ಪಾಧರ (ಸ್ನೇಕ್ ಶಾಜಿ) ಹಾವುಗಳ ಬಗ್ಗೆ ಎಚ್ಚರಿಕೆಯ ಕ್ರಮಗಳು ಅಲ್ಲದೇ ಹಾವು ಕಂಡ ತಕ್ಷಣ ಕರೆ ಮಾಡುವಂತೆ ಸೂಕ್ಷ್ಮವಾಗಿ ಅಡಗಿರುವ ಜಾಗ ಗಮನಿಸಿ ವಿಷಯ ಮುಟ್ಟಿಸಲು ತಿಳಿಸಿದರು.
ಇದೇ ಸಂದರ್ಭ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳು ಎಲ್ಲಾ ಸಾರ್ವಜನಿಕರು ಈ ತಿಂಗಳ 22 ನೇ ತಾರೀಖಿನಿಂದ ಪ್ರಾರಂಭವಾಗುವ ಶೈಕ್ಷಣಿಕ ಗಣತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ರೇಬೀಸ್ ಹುಚ್ಚು ರೋಗದ ವಿರುದ್ಧ ತಮ್ಮ ಸಾಕು ಪ್ರಾಣಿಗಳಿಗೆ ಉಚಿತವಾಗಿ ದೊರೆಯುವ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಉಪನಿರ್ದೇಶಕರು ಮನವಿ ಮಾಡಿದರು.ತರಬೇತಿಗೆ 80 ಕ್ಕೂ ಹೆಚ್ಚು ರೈತರು, ಸಾರ್ವಜನಿಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಬೇತಿಯೂ ಚೈತ್ರ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪ್ರಶಾಂತ್ ಸ್ವಾಗತಿಸಿದರು, ಉಪನ್ಯಾಸಕ ಡಾ. ಜಮೀರ್ ಅಹಮದ್ ವಂದಿಸಿದರು.