ಬೆಂಗಳೂರಿನ ಚಲನಚಿತ್ರೋತ್ಸವದಲ್ಲಿ ನೆಲದ ಹಕ್ಕಿಯ ಹಾಡು ಚಿತ್ರ ಪ್ರದರ್ಶನ

KannadaprabhaNewsNetwork | Published : Mar 3, 2025 1:48 AM

ಸಾರಾಂಶ

ಹಳದಿ ಟಿಟ್ವಿಭ ಪಕ್ಷಿಯ ಬದುಕಿನ ನೋವು- ನಲಿವುಗಳ ಹೋರಾಟವನ್ನು ಚಿತ್ರಿಸುತ್ತಾ ಮನುಷ್ಯನ ದುರಾಸೆಗಳಿಂದ ರೂಪಗೊಳ್ಳುತ್ತಿರುವ ಅಭಿವೃದ್ಧಿಯ ಸಂಕೇತ

ಕನ್ನಡಪ್ರಭ ವಾರ್ತೆ ಮೈಸೂರು

ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ಚಿತ್ರಿಸಿರುವ ನೆಲದ ಹಕ್ಕಿಯ ಹಾಡು ಚಿತ್ರವು ಮಾ.7 ರಂದು ಸಂಜೆ 4.30ಕ್ಕೆ ಬೆಂಗಳೂರಿನ ಓರಿಯೆನ್ ಮಾಲ್‌ ನಲ್ಲಿ ಪ್ರದರ್ಶನಗೊಳ್ಳಲಿದೆ.

ಮೈಸೂರಿನ ರವೀಂದ್ರನಾಥ್‌ ಠಾಗೂರ್ ನಗರದ ಪತ್ರಕರ್ತರ ಬಡಾವಣೆಯ ಸುತ್ತಮುತ್ತ ಚಿತ್ರಿಸಿರುವ ನೆಲದ ಹಕ್ಕಿಯ ಹಾಡು ಚಿತ್ರವು ದೇಶ ವಿದೇಶದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಜನರ ಮನ್ನಣೆ ಗಳಿಸಿದೆ.

ಹಳದಿ ಟಿಟ್ವಿಭ ಪಕ್ಷಿಯ ಬದುಕಿನ ನೋವು- ನಲಿವುಗಳ ಹೋರಾಟವನ್ನು ಚಿತ್ರಿಸುತ್ತಾ ಮನುಷ್ಯನ ದುರಾಸೆಗಳಿಂದ ರೂಪಗೊಳ್ಳುತ್ತಿರುವ ಅಭಿವೃದ್ಧಿಯ ಸಂಕೇತಗಳನ್ನು ಹಾಗೂ ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ಸಂಘರ್ಷ, ಸಂಕಟಗಳನ್ನು ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ.

ರಾಷ್ಟ್ರಕವಿ ಕುವೆಂಪು ಅವರ ಆಶಯವಾದ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಆಶಯದಲ್ಲಿ ರೂಪುಗೊಂಡಿರುವ ಈ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ನೆಲದ ಹಕ್ಕಿಯ ಹಾಡು ಚಿತ್ರವನ್ನು ಆಹ್ವಾನದ ಮೇರೆಗೆ ಪ್ರದರ್ಶಿಸಲಾಗುತ್ತಿದೆ. ನ್ಯೂಯಾರ್ಕ್ ನಗರದ ವೈಲ್ಡ್‌ ‌ಲೈಫ್‌ ಕನ್ಸರ್ವೇಷನ್‌ ಫಿಲಂ ಫೆಸ್ಟಿವಲ್, ಚೀನಾ ಇಂಟರ್ ನ್ಯಾಷನಲ್‌ ಗ್ರೀನ್ ಫಿಲಂ ಫೆಸ್ಟಿವಲ್ ವಿಕ್, ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ ಇಕೋ ಫಿಲಂ ಫೆಸ್ಟಿವಲ್, ಅಮೇರಿಕಾದ ಮೆಫ್‌ಲಾಫ್‌ ಸೇರಿದಂತೆ 8 ರಾಜ್ಯಗಳಲ್ಲಿ ಯಶಸ್ವಿಯಾಗಿ ಈ ಚಿತ್ರವು ಪ್ರದರ್ಶನಗೊಂಡಿದೆ.

ಇಂಡೋ- ಫ್ರೆಂಚ್‌ ಇಂಟರ್ ನ್ಯಾಷನಲ್ ಫೆಸ್ಟಿವಲ್, ಹರಿಯಾಣದ ಚಿತ್ರಭಾರತೀ ಫಿಲಂ ಫೆಸ್ಟಿವಲ್, ಮೈಸೂರಿನ ದಸರಾ ಫಿಲಂ ಫೆಸ್ಟಿವಲ್‌ ಗಳಲ್ಲಿ ಅಧಿಕೃತವಾಗಿ ಆಯ್ಕೆಯಾಗಿ ಚಿತ್ರಪ್ರದರ್ಶನಗೊಂಡಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮಾ. 7ರಂದು ಪ್ರದರ್ಶನಗೊಳ್ಳಲಿದೆ. ಈ ಚಿತ್ರವನ್ನು ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ನಿರ್ದೇಶಿಸಿದ್ದಾರೆ, ಎಂ.ಎನ್. ಸ್ವಾಮಿ ಅವರ ಸಂಕಲನ, ಬಾಬು ಈಶ್ವರ್‌ ಪ್ರಸಾದ್ ಶಬ್ದಗ್ರಹಣ ನೀಡಿದ್ದಾರೆ, ಗ್ರಾವಿಟಿ- 1 ಸಂಸ್ಥೆ ಈ ಚಿತ್ರವನ್ನು ಪ್ರಸ್ತುತಿಪಡಿಸಿದೆ.-- ಬಾಕ್ಸ್--

-- --- ಚಲನಚಿತ್ರೋತ್ಸವಕ್ಕೆ ಬೇಲಿ ಹೂ ಆಯ್ಕೆ--ಬೆಂಗಳೂರಿನಲ್ಲಿ ನಡೆಯುವ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡ ವಿಭಾಗದ ಬೇಲಿ ಹೂ ಆಯ್ಕೆಯಾಗಿದೆ. ಆಯ್ಕೆಯಾದ 14 ಕನ್ನಡ ಸಿನಿಮಾಗಳಲ್ಲಿ ಬೇಲಿ ಹೂ ಕೂಡ ಇದೆ. ಅಂತೆಯೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರಗಳ ವಿಭಾಗದಲ್ಲಿ ಆಯ್ಕೆಯಾದ ಏಕೈಕ ಕನ್ನಡ ಚಿಲನಚಿತ್ರ ಕೂಡ ಇದೆ. ಈ ಸಿನಿಮಾವನ್ನು ಲಯನ್ಸ್‌ ಸಂಸ್ಥೆಯ ಜಿಲ್ಲಾ ಗೌವರ್ನರ್‌ ಎಸ್‌. ವೆಂಕಟೇಶ್‌ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಈ ಸಿನಿಮಾ ಬೆಂಗಳೂರಿನ ಓರಿಯನ್‌ ಮಾಲ್‌ ನಲ್ಲಿ ಪ್ರದರ್ಶನಗೊಳ್ಳಲಿದೆ.

Share this article