ವನ್ಯಜೀವಿ ಛಾಯಾಗ್ರಹಣಕ್ಕೆ ಅಪಾರ ತಾಳ್ಮೆ ಅಗತ್ಯ: ಛಾಯಾ ಸುನಿಲ್‌

KannadaprabhaNewsNetwork | Published : Aug 22, 2024 12:52 AM

ಸಾರಾಂಶ

ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. 300ಕ್ಕೂ ಅಧಿಕ ವನ್ಯಜೀವಿಗಳ ಛಾಯಾಚಿತ್ರಗಳ ಪ್ರದರ್ಶನ ನೂರಾರು ವೀಕ್ಷಕರ ಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವನ್ಯಜೀವಿಗಳ ಜೀವನ ಕುರಿತು ಸೂಕ್ತ ಮಾಹಿತಿ ಮತ್ತು ಅಪಾರ ತಾಳ್ಮೆಯಿದ್ದಲ್ಲಿ ಉತ್ತಮ ವನ್ಯಜೀವಿ ಛಾಯಾಗ್ರಾಹಕರಾಗಲು ಸಾಧ್ಯ ಎಂದು ವನ್ಯಜೀವಿ ಛಾಯಾಗ್ರಾಹಕಿ ಛಾಯಾ ಸುನೀಲ್ ಅಭಿಪ್ರಾಯಪಟ್ಟಿದ್ದಾರೆ,

ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಯೋಜಿತ ವನ್ಯಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಮಾತನಾಡಿದ ಅವರು, ವನ್ಯಜೀವಿ ಛಾಯಾಗ್ರಹಣಕ್ಕೆ ವನ್ಯಜೀವಿಗಳ ಜೀವನ ಕ್ರಮದ ಬಗ್ಗೆ ಸೂಕ್ತ ತಿ‍ಳಿವಳಿಕೆ ಮತ್ತು ಅಪಾರ ತಾಳ್ಮೆ ಅಗತ್ಯವಿದೆ, ಕೆಲವೊಂದು ಛಾಯಾಚಿತ್ರ ತೆಗೆಯಲು ವಾರಗಟ್ಟಲೆ ಮಾತ್ರವಲ್ಲ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ, ಹೀಗೆ ಕಾದಾಗಲೇ ಅತ್ಯುದ್ಭುತ ಛಾಯಾಚಿತ್ರಗಳನ್ನು ತೆಗೆಯಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಹುಲಿ, ಸಿಂಹ, ಕಾಡಾನೆಗಳಲ್ಲಿ ವೈವಿಧ್ಯತೆ ಹೆಚ್ಚಾಗಿ ಕಂಡು ಬರುವುದಿಲ್ಲ, ಆದರೆ ಪಕ್ಷಿಗಳು, ಚಿಟ್ಟೆಗಳಂತ ಪ್ರಾಣಿಗಳಲ್ಲಿ ನೂರಾರು ವೈವಿಧ್ಯತೆಗಳು ಕಾಣುವುದರಿಂದಾಗಿ ಪಕ್ಷಿ ಛಾಯಾಚಿತ್ರಗಳಿಗೆ ಆದ್ಯತೆ ನೀಡಿರುವುದಾಗಿ ಛಾಯಾ ಸುನೀಲ್ ಹೇಳಿದರು.

ಪ್ರತಿ ಮಹಿಳೆ ತನ್ನ ಮನಸ್ಸೊಳಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ಮೂಲಕ ಸಮಾಜದಲ್ಲಿ ಪ್ರತಿಭಾವಂತೆಯಾಗಿ ಗುರುತಿಸಿಕೊಳ್ಳುವಂತೆ ಸಲಹೆ ನೀಡಿದ ಛಾಯಾ ಸುನೀಲ್, ಛಾಯಾಗ್ರಹಣದಂಥ ಹೆಚ್ಚು ವೆಚ್ಚ ಬಯಸುವ ಹವ್ಯಾಸ ಆರ್ಥಿಕ ಲಾಭಕ್ಕಿಂತ ಮನಸ್ಸಿಗೆ ಹೆಚ್ಚು ತೃಪ್ತಿ ನೀಡಬಲ್ಲುದ್ದಾಗಿದೆ ಎಂದರು.ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, ವಿಶ್ವದಾದ್ಯಂತದ ಛಾಯಾಗ್ರಾಹಕರ ಶ್ರಮ ಗುರುತಿಸಲು ರೋಟರಿಯಿಂದ ಛಾಯಾಗ್ರಹಣ ಮಹತ್ವದ ಬಗೆಗಿನ ಕಾರ್ಯಕ್ರಮ ಆಯೋಜಿಸಿರುವುದಾಗಿ ನುಡಿದರು.

ಕಾರ್ಯಕ್ರಮ ಸಂಚಾಲಕ ಅನಿಲ್‌ ಎಚ್‌.ಟಿ. ನಿರೂಪಿಸಿದರು. ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್ ವಂದಿಸಿದರು. ನಿರ್ದೇಶಕರಾದ ಎಂ.ಧನಂಜಯ್, ಗಾನಾ ಪ್ರಶಾಂತ್ , ಶಂಕರ್ ಪೂಜಾ ನಿರ್ವಹಿಸಿದರು.

300ಕ್ಕೂ ಅಧಿಕ ವನ್ಯಜೀವಿಗಳ ಛಾಯಾಚಿತ್ರಗಳ ಪ್ರದರ್ಶನ ನೂರಾರು ವೀಕ್ಷಕರ ಮನ ಸೆಳೆಯಿತು.

Share this article