ಇಂದಿನಿಂದ ಸರಪಾಡಿ ದೇವಳ ಅಷ್ಟಬಂಧ ಬ್ರಹ್ಮಕಲಶೋತ್ಸವ

KannadaprabhaNewsNetwork |  
Published : Jan 19, 2024, 01:46 AM IST
ಜ.19-25 : ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ | Kannada Prabha

ಸಾರಾಂಶ

ಬ್ರಹ್ಮಕಲಶದಲ್ಲಿ ಜ.19ರಿಂದ 25ರ ವರೆಗೆ ಪ್ರತಿದಿನ ವೈದಿಕ ವಿಧಿ ವಿಧಾನ, ಸಂತರು, ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಸುಮಾರು 7 ಕೋಟಿ ರು. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿರುವ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜ.19ರಿಂದ 25ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ರಹ್ಮಕಲಶದಲ್ಲಿ ಜ.19ರಿಂದ 25ರ ವರೆಗೆ ಪ್ರತಿದಿನ ವೈದಿಕ ವಿಧಿ ವಿಧಾನ, ಸಂತರು, ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಜ.22ರಂದು ಬೆಳಗ್ಗೆ 10.30ರಿಂದ 10.45ಕ್ಕೆ ಒದಗುವ ಮೀನ ಲಗ್ನದ ಸುಮುಹೂರ್ತದಲ್ಲಿ ಶ್ರೀ ಶರಭೇಶ್ವರ, ಗಣಪತಿ, ಮಹಿಷಮರ್ಧಿನಿ, ವೀರಾಂಜನೇಯ ದೇವರ ಪ್ರತಿಷ್ಠೆ, ಧ್ವಜಪ್ರತಿಷ್ಠೆ, ಜ.23ರಂದು ಶಾಂತಿಗುಡ್ಡೆಯಲ್ಲಿ ಶ್ರೀ ರಕ್ತೇಶ್ವರಿ ದೈವದ ಪ್ರತಿಷ್ಠೆ, ಜ.24ರಂದು ನಾಗ ಪ್ರತಿಷ್ಠೆ, ಇಷ್ಟದೇವತಾ, ಪಂಜುರ್ಲಿ ದೈವದ ಪ್ರತಿಷ್ಠೆ, ಜ.25ರಂದು ಬೆಳಗ್ಗೆ 8ರಿಂದ 8.17ರ ಮಧ್ಯೆ ಒದಗುವ ಮಕರ ಲಗ್ನದ ಶುಭ ಸಮಯದಲ್ಲಿ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ನೆರವೇರಲಿದೆ ಎಂದರು.ಸರಪಾಡಿ ದೇವಸ್ಥಾನವು ನೇತ್ರಾವತಿ ನದಿಯ ಕಿನಾರೆಯಲ್ಲಿದ್ದು, ಹೀಗಾಗಿ ಒಂದು ಬದಿಯ ಹತ್ತಾರು ಗ್ರಾಮಗಳ ಭಕ್ತರು ಕ್ಷೇತ್ರವನ್ನು ಸಂದರ್ಶಿಸಬೇಕಾದರೆ ಸುತ್ತು ಬಳಸಿ ಸಾಗಬೇಕಾದ ಸ್ಥಿತಿ ಇದೆ. ಹೀಗಾಗಿ ಭಕ್ತರ ಅನುಕೂಲದ ದೃಷ್ಟಿಯಿಂದ ಬ್ರಹ್ಮಕಲಶದ ದಿನಗಳಲ್ಲಿ ಬೆಳಗ್ಗಿನಿಂದ ರಾತ್ರಿವರೆಗೂ ನದಿ ದಾಟಲು ಅನುಕೂಲವಾಗುವ ದೃಷ್ಟಿಯಿಂದ ಮೋಟಾರು ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ, ಜ.19ರಂದು ಬೆಳಗ್ಗೆ 10ಕ್ಕೆ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಿಂದ ಅದ್ದೂರಿಯ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಭಕ್ತರ ಜತೆಗೆ ಉಭಯ ಜಿಲ್ಲೆಗಳ ಪ್ರಮುಖ ದೇವಸ್ಥಾನಗಳಿಂದ ನೀಡಿದ ಹೊರೆಕಾಣಿಕೆಯನ್ನು ಮೆರವಣಿಗೆಯ ಮೂಲಕ ಸರಪಾಡಿಗೆ ಸಾಗಿಸಲಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಅರ್ಚಕ ಜಯರಾಮ ಕಾರಂತ, ಪ್ರಮುಖರಾದ ರಾಧಾಕೃಷ್ಣ ರೈ ಕೊಟ್ಟುಂಜ, ಕೋಶಾಧಿಕಾರಿ ಅರುಣ ಐತಾಳ್, ಉಮೇಶ್ ಆಳ್ವ ಕೊಟ್ಟುಂಜ, ವಿಠಲ್ ಎಂ. ಆರುಮುಡಿ, ಸುರೇಂದ್ರ ಪೈ, ದಯಾನಂದ ಪೂಜಾರಿ ಕೋಡಿ, ಸಂತೋಷ್ ಶೆಟ್ಟಿ ಪಿ. ಹಾಜರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ