ಚನ್ನಗಿರಿ ಕ್ಷೇತ್ರದಲ್ಲಿ ಪಾದಯಾತ್ರೆ ವೇಳೆ ಇನ್ ಸೈಟ್ಸ್ ಸಂಸ್ಥೆ ದಶಮಾನೋತ್ಸವ ಸಂಭ್ರಮಾಚರಣೆ । ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ
ಕನ್ನಡಪ್ರಭ ವಾರ್ತೆ ದಾವಣಗೆರೆ/ ಚನ್ನಗಿರಿಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆಯೇ ಹೊರತು, ಪಕ್ಷೇತರನಾಗಿ ಯಾವುದೇ ಕಾರಣಕ್ಕೂ ಸ್ಪರ್ಧಿಸಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಇನ್‌ಸೈಟ್ಸ್ ಐಎಎಸ್-ಐಪಿಎಸ್ ತರಬೇತಿ ಅಕಾಡೆಮಿ ಸಂಸ್ಥಾಪಕ ಕಕ್ಕರಗೊಳ್ಳದ ಜಿ.ಬಿ.ವಿನಯಕುಮಾರ ಸ್ಪಷ್ಟಪಡಿಸಿದ್ದಾರೆ.
ಚನ್ನಗಿರಿ ತಾಲೂಕು ದೇವರಹಳ್ಳಿ, ಕಾಕನೂರು, ನಾಗೇನಹಳ್ಳಿ, ಮೆದಿಕೆರೆ, ತಣಿಗೆರೆ ನಂತರ ಸಂತೇಬೆನ್ನೂರು ಗ್ರಾಮದಲ್ಲಿ ಭಾನುವಾರ ಪಾದಯಾತ್ರೆ ವೇಳೆ ಇನ್ ಸೈಟ್ಸ್ ಸಂಸ್ಥೆಯ ದಶಮಾನೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ, ಮಾತನಾಡಿ, ಕಾಂಗ್ರೆಸ್ ಪಕ್ಷದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂಬುದೇ ನನ್ನ ದೃಢ ನಿಲುವು. ನನ್ನ ಶ್ರಮ, ಕಾಯಕ, ಪ್ರಾಮಾಣಿಕ ಪ್ರಯತ್ನದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಲೋಕಸಭಾ ಕ್ಷೇತ್ರಾದ್ಯಂತ ಪಾದಯಾತ್ರೆ ವೇಳೆ ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಪಾಲಕರಿಗೆ, ಗ್ರಾಮಸ್ಥರಿಗೆ ಶಿಕ್ಷಣದ ಮಹತ್ವ, ನೈರ್ಮಲ್ಯತೆ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದೇನೆ ಎಂದರು.ನಿರುದ್ಯೋಗ, ಬರ, ರೈತರ ಸಮಸ್ಯೆ, ಗ್ರಾಮೀಣರ ಸಂಕಷ್ಟ ಹೀಗೆ ಪಾದಯಾತ್ರೆಯುದ್ದಕ್ಕೂ ಜನರು, ರೈತರ ಸ್ಥಿತಿಗತಿ ನೋಡಿದ್ದೇನೆ. ಇಡೀ ರಾಜ್ಯದಲ್ಲಿದ್ದಂತೆ ದಾವಣಗೆರೆ ಜಿಲ್ಲೆಯಲ್ಲೂ ತೀವ್ರ ಬರ ಆವರಿಸಿದೆ. ಆದರೆ, ಕ್ಷೇತ್ರದ ಸಂಸದರು ಜನರ ಬಳಿ ಬಂದಿಲ್ಲ. ಜನರ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ. ಚುನಾವಣೆ ಬಂದಾಗ ಮಾತ್ರ ಇಂತಹವರಿಗೆ ಜನ ನೆನಪಾಗುತ್ತಾರೆ ಎಂದು ಹೇಳಿದರು.
ಇನ್‌ಸೈಟ್ ಸಂಸ್ಥೆ ದೇಶದಲ್ಲೇ 3ನೇ ಸ್ಥಾನ:ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆಯಾಗಿದೆ. ಕುಡಿಯುವ ನೀರು, ನೀರಾವರಿ, ಯುವ ಜನರಿಗೆ ಉದ್ಯೋಗ, ರೈತರಿಗೆ ಸ್ವಾವಲಂಬಿ ಬದುಕು ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನಿಮ್ಮ ನಿರೀಕ್ಷೆಗಳ ಈಡೇರಿಸಲು ಒಂದು ಅವಕಾಶ ಕೊಡಿ. ತಮ್ಮ ಇನ್‌ಸೈಟ್ ತರಬೇತಿ ಸಂಸ್ಥೆಗೆ 10 ವರ್ಷವಾಗಿದ್ದು, ಈವರೆಗೆ 450 ಐಎಎಸ್, ಐಪಿಎಸ್, ಕೆಎಎಸ್ ಸೇರಿ ಉನ್ನತ ಹುದ್ದೆ ಅಲಂಕರಿಸಲು ಕಾರಣವಾಗಿದೆ. ದೇಶದಲ್ಲೇ ತಮ್ಮ ಸಂಸ್ಥೆ 3ನೇ ಸ್ಥಾನ ಹೊಂದಿದ್ದು, ಕಾಶ್ಮೀರದಲ್ಲೂ ಇನ್‌ಸೈಟ್ ಅಕಾಡೆಮಿ ಸ್ಥಾಪನೆಯಲ್ಲಿ ಸ್ನೇಹಿತ ಶರತ್ ಪರಿಶ್ರಮವಿದೆ ಎಂದು ತಮ್ಮ ಕನಸುಗಳ ಹಂಚಿಕೊಂಡರು.
ಕಾಂಗ್ರೆಸ್ ಮುಖಂಡ ಎಂ.ಸಿದ್ದಪ್ಪ ಮಾತನಾಡಿ, ಜಗಳೂರು, ಹರಪನಹಳ್ಳಿ, ಹೊನ್ನಾಳಿ ತಾಲೂಕಿನಲ್ಲಿ ಸುಮಾರು 540 ಕಿಮೀಗೂ ಅದಿಕ ಪಾದಯಾತ್ರೆ ಮಾಡಿ, ಜನರ ಸಂಕಷ್ಟ, ಸಮಸ್ಯೆ ಆಲಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಭೇಟಿ ಮಾಡಿದ ಜಿ.ಬಿ.ವಿನಯಕುಮಾರಗೆ ಗ್ರಾಮೀಣರು, ಬಡವರು, ರೈತರು, ಯುವ ಜನರು, ಮಹಿಳೆಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರಿಗೂ ಏನಾದರೂ ಸೇವೆ ಮಾಡುವ ಹಂಬಲ ಇದೆ ಎಂದರು.ಗ್ರಾಮದ ಮುಖಂಡರಾದ ಕೊಡಿ ಉಮೇಶ, ಇರ್ಫಾನ್, ಗೌಡ್ರು ಸ್ವಾಮಿ, ಶೇರ್ ಅಲಿ, ಶರತ್, ವಿಜಯ ಗುಜ್ಜರ್, ರಘು ದೊಡ್ಮನಿ, ಸದ್ದಾಂ, ನಯಾಜ್, ರುದ್ರೇಶ, ಎಂ.ಸಿದ್ದಪ್ಪ ಇತರರಿದ್ದರು.ನಾನು ಬಂದ ನಂತರ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೆಂದು ನಾನು ಬಂದ ನಂತರ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ನನಗೆ ಯಾವುದೇ ಅಡೆ, ತಡೆ ಬಂದಿಲ್ಲ. ಯಾರಿಂದಲೂ ಅಪಸ್ವರ ವ್ಯಕ್ತವಾಗಿಲ್ಲ. ಪಕ್ಷದ ಮುಖಂಡರು, ಹಿರಿಯರು, ಕಾರ್ಯಕರ್ತರು, ಕ್ಷೇತ್ರದ ಜನತೆ ಸಂಪೂರ್ಣ ಸಹಕಾರ ನೀಡಿ, ಸ್ಪಂದಿಸುತ್ತಿದ್ದಾರೆ. ಶಿಕ್ಷಣ, ಹೋರಾಟ ಎರಡೂ ನನಗೆ ಯಶಸ್ಸು ತಂದು ಕೊಟ್ಟಿವೆ. ಇವೆರೆಡನ್ನೂ ನಾನು ಸದಾ ನಂಬುವವನು. ವಿನಯ್ ಭವಿಷ್ಯದ ಕನಸು ಹೊಂದಿರುವ ಉತ್ಸಾಹಿಜಿ.ಬಿ.ವಿನಯಕುಮಾರ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ವಿನಯ್ ಸಾಮಾಜಿಕ ಕಳಕಳಿ, ಬದ್ಧತೆ, ಸಾಧಿಸುವ ಛಲ, ಭವಿಷ್ಯದ ಕನಸು ಹೊಂದಿರುವ ಉತ್ಸಾಹಿ. ಹೋರಾಟದ ಹಾದಿ, ಕಿಚ್ಚು ನೋಡಿದರೆ, ದಾವಣಗೆರೆ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್‌ನ ಭದ್ರಕೋಟೆಯಾಗಿ ಮಾಡಲು ಜಿ.ಬಿ.ವಿನಯಕುಮಾರಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಟಿಕೆಟ್ ನೀಡಿ, ಪಕ್ಷ ಬೆನ್ನಿಗೆ ನಿಲ್ಲಬೇಕು.
ಎಂ.ಸಿದ್ದಪ್ಪ, ಕಾಂಗ್ರೆಸ್ ಮುಖಂಡ