ನಾರಾಯಣ ಹೆಗಡೆ
ಸಚಿವ ಸ್ಥಾನಕ್ಕಾಗಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಹಾಗೂ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಪ್ರಮುಖ ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಬುಧವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಯುತ್ತಿದ್ದರೂ ಸಂಪುಟ ಸೇರುವವರ ಹೆಸರು ಇನ್ನೂ ಬಹಿರಂಗವಾಗಿಲ್ಲ. ಹೈಕಮಾಂಡ್ ನಾಯಕರು ಜಿಲ್ಲೆಯ ಯಾರ ಕಡೆ ಒಲವು ತೋರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕಾಂಗ್ರೆಸ್‌ಮಯ ಜಿಲ್ಲೆ: ಶಿಗ್ಗಾಂವಿ ಉಪಚುನಾವಣೆಯ ಗೆಲುವಿನೊಂದಿಗೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರೇ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲೇ ಸಂಪೂರ್ಣ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಲ್ಲಿ ಹಾವೇರಿಯೂ ಒಂದಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡಲೇಬೇಕು ಎಂಬ ಒತ್ತಾಯ ಪಕ್ಷದೊಳಗೇ ಬಲವಾಗಿ ಕೇಳಿಬರುತ್ತಿದೆ.
ಕಳೆದ ಸರ್ಕಾರದಲ್ಲಿ ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ದೊರೆಯದೆ, ಬೇರೆ ಜಿಲ್ಲೆಯ ಸಚಿವರು ಉಸ್ತುವಾರಿ ವಹಿಸಿದ್ದರು. ಜಿಲ್ಲೆಯವರೇ ಸಚಿವರಾಗಿದ್ದರೆ ಅಭಿವೃದ್ಧಿ ಯೋಜನೆಗಳಿಗೆ ವೇಗ ಸಿಗುವುದರ ಜೊತೆಗೆ ಮುಂದಿನ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಯಲ್ಲೂ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.ಲಮಾಣಿ, ಶಿವಣ್ಣನವರ: ವಿಧಾನಸಭೆ ಹಂಗಾಮಿ ಸಭಾಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿ ಅವರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಬಂಜಾರ ಸಮುದಾಯದ ಪ್ರಮುಖ ಮುಖಂಡರಾಗಿರುವ ಅವರು ಸಾಮಾಜಿಕ ಸಮೀಕರಣದ ದೃಷ್ಟಿಯಿಂದಲೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮೊದಲ ಅವಧಿಯಲ್ಲೇ ಸಚಿವ ಸ್ಥಾನ ನೀಡುವ ಭರವಸೆ ಹೈಕಮಾಂಡ್ ನೀಡಿತ್ತು ಎಂಬುದನ್ನು ಅವರು ಉಲ್ಲೇಖಿಸುತ್ತಿದ್ದು, ಈ ಬಾರಿ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾನೆ, ಸಲೀಂ ಹೆಸರು: ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ ಹಾಗೂ ಎರಡು ಬಾರಿ ಶಾಸಕರಾಗಿ, ನಾಲ್ಕು ಬಾರಿ ವಿಧಾನಮಂಡಲ ಸದಸ್ಯರಾಗಿರುವ ಅನುಭವ ಹೊಂದಿದ್ದಾರೆ. ಒಬಿಸಿ ಕೋಟಾದಲ್ಲಿ ಅವರಿಗೆ ಅವಕಾಶ ಸಿಕ್ಕರೂ ಆಶ್ಚರ್ಯವಿಲ್ಲ. ಇನ್ನೊಂದೆಡೆ, ವಿಧಾನಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್ ಕೂಡ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದು, ಪಕ್ಷದ ಸಂಘಟನೆಯಲ್ಲಿ ಸಲ್ಲಿಸಿರುವ ಸೇವೆಯನ್ನು ಆಧಾರವಾಗಿಟ್ಟುಕೊಂಡು ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವ ಪ್ರಸ್ತಾಪ ಬಂದರೆ ಆಗ ಸಲೀಂ ಅಹ್ಮದ್ ಹೆಸರು ಮುಂಚೂಣಿಗೆ ಬರಲಿದೆ.