ಕೊಪ್ಪಳ: ಜಿಲ್ಲೆಯಲ್ಲಿ 1.64 ಲಕ್ಷ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ ಶೂ ಮತ್ತು ಸಾಕ್ಸ್‌ಗಳಲ್ಲಿ 19 ಸಾವಿರ ಜೋಡಿ ಕಡಿಮೆ ಬಂದಿವೆ. ಅಲ್ಲದೆ, ಬಂದಿರುವ ಶೂಗಳು ಕಳಪೆಯಾಗಿದ್ದು, ಸರಬರಾಜು ಮಾಡಿದ ಕಂಪನಿ ಹಾಗೂ ಟೆಂಡರ್‌ಗೆ ಸಂಬಂಧಿಸಿದ ದಾಖಲೆಗಳನ್ನು ನೀಡದ ಹೊರತು ವಿದ್ಯಾರ್ಥಿಗಳಿಗೆ ವಿತರಿಸಲು ಬಿಡುವುದಿಲ್ಲ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ದೇವರಾಜ ಕಿನ್ನಾಳ ಹೇಳಿದ್ದಾರೆ.
ದಾಖಲೆಗಳಿಲ್ಲದಿದ್ದರೂ ಶೂಗಳನ್ನು ಶೀಘ್ರ ವಿತರಿಸುವಂತೆ ಕೊಪ್ಪಳ ಬಿಇಒ ಒತ್ತಡ ಹೇರುತ್ತಿದ್ದಾರೆ. ಭಾರವಾಗಿರುವ ಹಾಗೂ ಕಳಪೆ ಗುಣಮಟ್ಟದ ಶೂಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಉಲ್ಲಂಘನೆಯಾಗಿದೆ ಎಂದು ದೂರಿದರು.
ಈ ಕುರಿತು ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಅವ್ಯವಸ್ಥೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಇಲಾಖೆ ಆಯುಕ್ತರು ಹೊಣೆ ಎಂದು ಅವರು ಆರೋಪಿಸಿದರು.ಕಳೆದ ವರ್ಷ ಶೂ-ಸಾಕ್ಸ್ ವಿತರಣೆಯ ಜವಾಬ್ದಾರಿಯನ್ನು ಎಸ್‌ಡಿಎಂಸಿಗಳಿಗೆ ನೀಡಲಾಗಿತ್ತು. ಆಗ ವಿಧಿಸಿದ್ದ ನಿಯಮಗಳನ್ನು ಸರ್ಕಾರವೇ ಈಗ ಪಾಲಿಸುತ್ತಿಲ್ಲ. ಟಣಕನಕಲ್ ಆದರ್ಶ ಶಾಲೆಯಲ್ಲಿ ತಾಲೂಕಿನ ಶೂ-ಸಾಕ್ಸ್ ಸಂಗ್ರಹಿಸಲಾಗಿದ್ದು, ಅವುಗಳನ್ನು ವಲಯ ಮಟ್ಟಕ್ಕೆ ಸಾಗಿಸುವಂತೆ ಬಿಇಒ ಒತ್ತಡ ಹೇರುತ್ತಿದ್ದಾರೆ ಎಂದರು.
ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿತಾ, ಮಂಜುನಾಥ ಅಳವಂಡಿ, ಗೌಡಪ್ಪ ಬಲಕುಂದಿ, ನಿಂಗಪ್ಪ ಗೊಡೆಕಾರ ಮತ್ತಿತರರು ಇದ್ದರು.