ಅನ್ಯ ಭಾಷೆಗಳ ದಾಳಿಯನ್ನು ಸಹಿಸುವುದಿಲ್ಲ: ಜೆ.ಯಾದವರೆಡ್ಡಿ

KannadaprabhaNewsNetwork |  
Published : Aug 01, 2025, 12:00 AM IST
ಚಿತ್ರ 1:  ಚಿತ್ರದುರ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಜೆ.ಯಾದವರೆಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡವನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕನ್ನಡವನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.

ಕರುನಾಡ ವಿಜಯಸೇನೆಯಿಂದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಮರಣ ಶಾಸನ, ರಾಜಕಾರಣಿಗಳಲ್ಲಿನ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ಅಸಡ್ಡೆಯಿಂದ ಕನ್ನಡ ಸೊರಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕೆಂದು ಅನೇಕ ಹೋರಾಟಗಾರರು ಚಿಂತಕರು, ಸಾಹಿತಿಗಳು ಹಿಂದಿನಿಂದಲೂ ಚಳುವಳಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೂ ಕನ್ನಡ ಪೂರ್ಣ ಪ್ರಮಾಣದಲ್ಲಿ ಆಡಳಿತ ಭಾಷೆಯಾಗಿಲ್ಲ. ಇಂಗ್ಲಿಷ್‍ನಲ್ಲಿ ಷರಾ ಬರೆಯುವುದು ಇನ್ನು ನಿಂತಿಲ್ಲ. ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡ ಭಾಷೆಯನ್ನು ಬಳಸಲು ಏನು ಕಷ್ಟ. ದೊಡ್ಡ ದೊಡ್ಡ ದೇಶಗಳಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಅದು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ಕನ್ನಡ ಭಾಷೆಗೆ ಸುಪ್ರೀಂಕೋರ್ಟ್ ಅಡ್ಡ ಬಂದಿದೆ. ಬೆಂಗಳೂರಿನಲ್ಲಿ ಮೆಟ್ರೋ ಉದ್ಘಾಟನೆಯಲ್ಲಿ ಹಿಂದಿಯನ್ನು ಬಳಸಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ. ಕನ್ನಡಪರ ಸಂಘಟನೆಗಳು ಉಗ್ರ ಹೋರಾಟ ಮಾಡಿವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಕನ್ನಡದ ಮೇಲೆ ಹೇರಲಾಗುತ್ತಿದೆ. ಹೋರಾಟಗಾರರ ಮೇಲೆ ನೂರಾರು ಕೇಸುಗಳು ಬಿದ್ದಿವೆ. ಶ್ರೀಮಂತ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಆಗ್ರಹಿಸಿದರು.

ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಅಂಗಡಿ ಮುಂಗಟ್ಟು, ಶಾಲಾ-ಕಾಲೇಜು, ಆಸ್ಪತ್ರೆಗಳಲ್ಲಿ ಶೇ.60ರಷ್ಟು ಕನ್ನಡ ನಾಮ ಫಲಕವಿರಬೇಕೆಂದು ಸರ್ಕಾರ ಆದೇಶಿಸಿದ್ದರೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಸಾಕಷ್ಟು ಹೋರಾಟ ಮಾಡಿ ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿದು ಬೋರ್ಡ್‌ಗಳನ್ನು ಕಿತ್ತು ಹಾಕಿದ್ದೇವೆ. ನಮ್ಮ ಪ್ರಾಣ ಹೋದರು ಸರಿ ಹೋರಾಟದಿಂದ ಮಾತ್ರ ಹಿಂದೆ ಸರಿಯುವುದಿಲ್ಲ. ನಗರಸಭೆಯವರು ಟ್ರೇಡ್ ಲೈಸೆನ್ಸ್ ಕೊಡುವಾಗ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಬೇಕೆಂದು ಸೂಚಿಸಬೇಕು. ಇನ್ನು ಎರಡು ತಿಂಗಳು ಗಡುವು ನೀಡುತ್ತೇವೆ. ಇಂಗ್ಲಿಷ್ ಮಯವಾಗಲು ಬಿಡಲ್ಲ. ಎಲ್ಲಾದರೂ ಆಂಗ್ಲ ನಾಮ ಫಲಕಗಳು ಕಂಡು ಬಂದರೆ ಮಸಿ ಬಳಿಯುವುದಾಗಿ ಎಚ್ಚರಿಸಿದರು.

ಲೇಖಕ ಎಚ್.ಆನಂದ್‍ಕುಮಾರ್ ಮಾತನಾಡಿ, ಕನ್ನಡ ಪರ ಹೋರಾಟಗಾರರ ಮೇಲೆ ಹಾಕಿರುವ ಕೇಸ್‍ಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು. ಕನ್ನಡಪರ, ದಲಿತರ ಪರ, ಅಹಿಂದ ಪರವಾಗಿದ್ದೇನೆಂದು ಹೇಳುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನುಡಿದಂತೆ ನಡೆದುಕೊಳ್ಳುತ್ತಿಲ್ಲ. ಕನ್ನಡದ ಧ್ವನಿ, ಅಸ್ಮಿತೆಗೆ ಧಕ್ಕೆ ಬಂದಾಗ ಬೀದಿಗಿಳಿಯುವ ಹೋರಾಟಗಾರರ ಮೇಲೆ ಕೇಸ್ ಹಾಕುವುದು, ಗಡಿಪಾರು ಮಾಡುವುದನ್ನು ಸರ್ಕಾರ ಕೈಬಿಡಬೇಕೆಂದು ಮನವಿ ಮಾಡಿದರು.

ಐತಿಹಾಸಿಕ ಚಿತ್ರದುರ್ಗದ ಕೋಟೆಯಲ್ಲಿ ಸರ್ಕಾರದಿಂದಲೇ ಗೈಡ್‍ಗಳ ನೇಮಕವಾಗಬೇಕು. ಇದರಿಂದ ಹೊರಗಿನಿಂದ ಬರುವ ಪ್ರವಾಸಿಗರಿಗೆ ಕೋಟೆಯ ಬಗ್ಗೆ ಮಾಹಿತಿ ನೀಡಲು ಸುಲಭವಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ಹೋರಾಟಗಾರರನ್ನು ತಿರಸ್ಕರಿಸಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ರಾಜ್ಯ ಸಮಿತಿ ಸದಸ್ಯ ನಿಸಾರ್ ಅಹಮದ್, ನಗರಾಧ್ಯಕ್ಷ ಅವಿನಾಶ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ