ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ವಿರುದ್ಧ ಮಾತನಾಡಿರುವುದನ್ನು ಸಹಿಸುವುದಿಲ್ಲ. ಶ್ರೀಗಳು ಸಮಾಜಕ್ಕೆ ಮಾಡಿರುವ ಕಾರ್ಯಗಳನ್ನು ಮೊದಲು ತಿಳಿದುಕೊಳ್ಳಬೇಕು. ಶ್ರೀಗಳ ವಿರುದ್ಧ ಮಾತನಾಡುವುದು ಜಿಲ್ಲೆಯ ಜನರಿಗೆ ಮಾಡಿದ ಅಪಮಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಖಡಕ್ ಎಚ್ಚರಿಕೆ ನೀಡಿದರು.
ಹೋರಾಟ ಮಾಡುವುದು ಅವರ ಹಕ್ಕು. ಆದರೆ ಮಾತನಾಡುವಾಗ ಸಹನೆ ಮತ್ತು ಸಂಯಮ ಇರಬೇಕು. ರಾಜಕೀಯ ದೃಷ್ಟಿಯಿಂದ ಶ್ರೀಗಳ ಬಗ್ಗೆ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಗವಿಮಠ ಶ್ರೀಗಳ ಕುರಿತು ಮಾತನಾಡುವ ಮುನ್ನ ಅವರು ಮಾಡಿರುವ ಕಾರ್ಯಗಳನ್ನೊಮ್ಮೆ ನೋಡಿ ಬರಲಿ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಕುರಿತು ಯಾರಾದರೂ ಮಾತನಾಡಿದರೆ ನಾನಂತೂ ಸಹಿಸುವುದಿಲ್ಲ ಎಂದು ಪುನರುಚ್ಚರಿಸಿದರು.ಮೈಸೂರು ದಸರಾ ನಾಡಿನ ಹೆಮ್ಮೆ. ಅದನ್ನು ಗವಿಮಠ ಸ್ವಾಮೀಜಿ ಉದ್ಘಾಟಿಸಿರುವುದು ಉತ್ತರ ಕರ್ನಾಟಕದ ಹೆಮ್ಮೆಯಾಗಿದೆ. ಈ ಕುರಿತು ಹೇಳುವುದು ಸರಿಯಲ್ಲ ಎಂದರು.
ಜನಪದ ಕಲಾಲೋಕಕ್ಕೆ ಹೊಸ ಜಾಗ: ಕೊಪ್ಪಳದಲ್ಲಿ ಜನಪದ ಕಲಾಲೋಕ ನಿರ್ಮಾಣಕ್ಕೆ ಗುರುತಿಸಿದ್ದ ಜಮೀನು ಸೂಕ್ತವಲ್ಲ ಎಂಬ ವರದಿ ಬಂದಿದೆ. ಹೀಗಾಗಿ ಬೇರೆ ಸ್ಥಳದಲ್ಲಿ ಜಮೀನು ಗುರುತಿಸಿ ಯೋಜನೆ ಆರಂಭಿಸಲಾಗುವುದು ಎಂದರು.
ಹಾಲಿನ ದರ ಹೆಚ್ಚಳದ ಹಣ ರೈತರಿಗೆ: ಹಾಲಿನ ದರ ಹೆಚ್ಚಳದಿಂದ ದೊರೆಯುವ ಹಣವನ್ನು ರೈತರಿಗೆ ನೀಡಲಾಗುವುದು. ಈಗಾಗಲೇ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಹಾಲಿನ ದರ ಹೆಚ್ಚಳ ಸರ್ಕಾರಕ್ಕೆ ದೊಡ್ಡ ಹೊರೆಯಾಗುವುದಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ ಎಂದರು.
ಅಂಜನಾದ್ರಿ ಅಭಿವೃದ್ಧಿಗೆ ಹೊಸ ರೂಪ: ಅಂಜನಾದ್ರಿ ಪರ್ವತದ ಗುಡ್ಡದ ಮಾಲೀಕತ್ವ ವಿದ್ಯಾದಾಸ ಬಾಬಾ ಅವರಿಗೆ ಸೇರಿದ್ದಲ್ಲ. ಅವರಿಗೆ ಪೂಜೆ ಸಲ್ಲಿಸುವ ಹಕ್ಕು ಮಾತ್ರ ಇದೆ. ಈ ಕುರಿತು ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಹೊಸ ರೂಪ ನೀಡಲಾಗುವುದು. ನ್ಯಾಯಾಲಯದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮಾತ್ರ ಆದೇಶವಿದೆಯೇ ಹೊರತು ಇಡೀ ಗುಡ್ಡದ ಬಗ್ಗೆ ಆದೇಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.