ಪಡಿತರಕ್ಕೆ ಪಿಎಂ ಗರೀಬ ಕಲ್ಯಾಣ ರಸೀದಿ ನೀಡದಿದ್ದರೆ ಸಬ್ಸಿಡಿ ಬಂದ್‌?

KannadaprabhaNewsNetwork |  
Published : Jul 11, 2025, 11:48 PM IST
11ಎಚ್‌ಯುಬಿ22ಉಣಕಲ್ಲಿನ ಭಾರತೀಯ ಆಹಾರ ನಿಗಮದ ಗೋದಾಮಿಗೆ ಶುಕ್ರವಾರ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ನಿಮಗೆ ಕೊಡುವ ಯೋಗ್ಯತೆ ಇಲ್ಲ, ನಾವು ಕೊಡುತ್ತಿದ್ದೇವೆ. ಹೀಗಾಗಿ, ಪಿಎಂ ಗರೀಬ್ ಕಲ್ಯಾಣ ಯೋಜನೆ ರಸೀದಿ ಕಡ್ಡಾಯವಾಗಿ ನೀಡಿ ಮತ್ತು ಮೊಬೈಲ್‌ಗಳಿಗೆ ಈ ಕುರಿತು ಸಂದೇಶ ಕಳುಹಿಸುವುದು ಕಡ್ಡಾಯ

ಹುಬ್ಬಳ್ಳಿ: ಕೇಂದ್ರದ ಐದು ಕೆಜಿ ಅಕ್ಕಿಗೆ ಅನ್ನಭಾಗ್ಯ ಅಕ್ಕಿ‌ ಎಂದು ರಾಜ್ಯದಲ್ಲಿ ಹೇಳಿಕೊಳ್ಳುತ್ತಿದೆ. ಆದರೆ, ಇದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಿಂದ ನೀಡಿರುವ ಅಕ್ಕಿ. ಇದನ್ನು ಎಲ್ಲಿಯೂ ನಮೂದಿಸುತ್ತಿಲ್ಲ ಹಾಗೂ ಪಿಎಂ ಗರೀಬ್ ಕಲ್ಯಾಣ ಯೋಜನೆಯ ರಸೀದಿಯನ್ನೂ ನೀಡುತ್ತಿಲ್ಲ. ಹೀಗೆ ಮುಂದುವರಿದರೆ ಕೇಂದ್ರದಿಂದ ನೀಡುವ ಸಬ್ಸಿಡಿ ಬಂದ್‌ ಮಾಡುವ ಕುರಿತಂತೆ ಯೋಚನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಸಿದರು.

ಇಲ್ಲಿಯ ಭಾರತೀಯ ಆಹಾರ ನಿಗಮದ ಗೋದಾಮಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಕುರಿತಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದೇವೆ. ಈ ಪೊಸ್ ಮಶಿನ್ ಮೂಲಕ ಥಂಬ್‌ ಅಥವಾ ಐರಿಸ್‌ (ಕಣ್ಣಿನ) ಗುರುತಿನ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಪಡಿತರ ಸಿಗಲಿ ಎಂಬುದೇ ಇದರ ಉದ್ದೇಶ. ಆದರೆ, ಕರ್ನಾಟಕ ಸರ್ಕಾರ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ರಸೀದಿ ನೀಡುತ್ತಿಲ್ಲ. ರಸೀದಿ ನೀಡದಿದ್ದರೆ, ನಿರ್ಲಕ್ಷ್ಯ ತೋರಿದರೆ ಸಬ್ಸಿಡಿ ಕಡಿತಗೊಳಿಸುವುದಾಗಿ ಎಚ್ಚರಿಸಿದರು.

ನಿಮಗೆ ಕೊಡುವ ಯೋಗ್ಯತೆ ಇಲ್ಲ, ನಾವು ಕೊಡುತ್ತಿದ್ದೇವೆ. ಹೀಗಾಗಿ, ಪಿಎಂ ಗರೀಬ್ ಕಲ್ಯಾಣ ಯೋಜನೆ ರಸೀದಿ ಕಡ್ಡಾಯವಾಗಿ ನೀಡಿ ಮತ್ತು ಮೊಬೈಲ್‌ಗಳಿಗೆ ಈ ಕುರಿತು ಸಂದೇಶ ಕಳುಹಿಸುವುದು ಕಡ್ಡಾಯ. ಕೆಲವೆಡೆ ಅನ್ನಭಾಗ್ಯ ಅಕ್ಕಿ ಎಂದು ಸಂದೇಶ ಕ‍ಳುಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೈಲೆಂಟ್‌ ರೇಷನ್‌ ವಿರುದ್ಧ ಕ್ರಮ: ದೇಶದಲ್ಲಿ ಕರ್ನಾಟಕವೂ ಸೇರಿದಂತೆ ಬಹಳಷ್ಟು ಸೈಲೆಂಟ್‌ ರೇಷನ್‌ ಕಾರ್ಡ್‌ಗಳಿವೆ. ಇಂತಹ ಕಾರ್ಡ್‌ ಹೊಂದಿದವರು ಆಹಾರ ಧಾನ್ಯ ಪಡೆಯುತ್ತಿಲ್ಲ. ಅವರ ಪಡಿತರ ಕಳ್ಳಕಾಕರ ಪಾಲಾಗುತ್ತಿದೆ. ಇದನ್ನು ತಡೆಯಲು ಡಾಟಾಬೇಸ್ ಮಾಡಿ ಸಂದೇಶ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಇಂತಹ ಸಂದೇಶ ಕ‍ಳುಹಿಸಲು ಸಹಕರಿಸುತ್ತಿಲ್ಲ. ಇದರಿಂದ ಸಾಕಷ್ಟು ಗೊಂದಲಗಳು ಉಂಟಾಗುತ್ತಿದ್ದು, ಇದನ್ನು ರಾಜ್ಯ ಸರ್ಕಾರ ಸರಿಪಡಿಸಬೇಕು. ಇಲ್ಲದಿದ್ದರೆ ಕೇಂದ್ರದಿಂದ ರಾಜ್ಯದ ಮೇಲೆ ಬಲವಂತದ ಕ್ರಮಕೈಗೊಳ್ಳಬೇಕಾಗುತ್ತದೆ ಎಂದರು.

ಪಡಿತರ ಸಾಗಣೆ ಅಕ್ರಮ ತಡೆಯಲು ಇಡೀ ದೇಶದಲ್ಲಿ ಜಿಪಿಎಸ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ. ಹುಬ್ಬಳ್ಳಿಯಲ್ಲಿ ೧,೭೮ ಲಕ್ಷ ಟನ್ ಸಾಮರ್ಥ್ಯದ ಗೋದಾಮು ನಿರ್ಮಾಣವಾಗುತ್ತಿದೆ. 2024-25 ನೇ ಸಾಲಿನಲ್ಲಿ ಗೋದಾಮಿನಿಂದ 13,553 ಮೆಟ್ರಿಕ್ ಟನ್ ಪಡಿತರ ಬಿಡುಗಡೆ ಮಾಡಲಾಗಿದೆ. ಆಹಾರ ತ್ಯಾಜ್ಯದ ಪ್ರಮಾಣ ಗಣನೀಯವಾಗಿ ಕಡಿಮೆ ಮಾಡಲು ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಚಿವ ಮುನಿಯಪ್ಪ‌ ಜೋಳ ಖರೀದಿಸಲು ಹಣ ಕೊಡುವಂತೆ ಕೇಳಿದ್ದರು. ಅದಕ್ಕೆ‌ ಕೇಂದ್ರ ಒಪ್ಪಿಗೆ ನೀಡಿದೆ. ಆದರೆ ಇದುವರೆಗೆ ಅವರು ಕೊಟ್ಡಿಲ್ಲ. ಅವರು ನಮಗೆ ಪಾವತಿ‌ ಮಾಡಿ, ಮರಳಿ ಕ್ಲೇಮ್ ಮಾಡಬಹುದು. ಸ್ಥಳೀಯವಾಗಿ ಅಕ್ಕಿ‌ ಖರೀದಿಸಿದ ₹ 584 ಕೋಟಿ ಹಣ ರಾಜ್ಯ ಸರ್ಕಾರ ನೀಡಿಲ್ಲ. ಸ್ಥಳೀಯವಾಗಿ ಪಡಿತರ ಸಾಗಿಸುವ ಲಾರಿಗಳ ₹ 200 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಜೋಳ ಖರೀದಿ ₹344 ಬಾಕಿ ಕೋಟಿ ಕೊಡಬೇಕು ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನ ಬಳಸಿ ಕರ್ನಾಟಕದಲ್ಲಿ ಪಿಪಿಪಿ ಮಾಡೆಲ್‌ನಲ್ಲಿ ೧,೭೮ ಲಕ್ಷ ಟನ್ ಸಾಮರ್ಥ್ಯದ ಗೋದಾಮು ನಿರ್ಮಿಸುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ ಎಫ್‌ಸಿಐ ಜಾಗದಲ್ಲಿ 13000 ಟನ್‌ನ ಗೋದಾಮು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಆಹಾರ ನಿಗಮದ ದಕ್ಷಿಣ ಭಾರತದ ಕಾರ್ಯನಿರ್ವಾಹಕ ಎಂಜಿನೀಯರ್ ಜೆಸಿಂತಾ ಎಲ್., ಕರ್ನಾಟಕ ರಾಜ್ಯದ ಪ್ರಧಾನ ವ್ಯವಸ್ಥಾಪಕ ಬಿ.ಒ.ಮಹೇಶ್ವರಪ್ಪ, ಉಪ ಪ್ರಧಾನ ವ್ಯವಸ್ಥಾಪಕ ದೇವೀಂದರ ಸಿಂಗ್, ಶೇಖರ್ ಅರವಿಂದ, ರಮೇಶ ನಾಯ್ಕ, ವಿಭಾಗೀಯ ವ್ಯವಸ್ಥಾಪಕ ಮಂಜುನಾಥ ಹೊಂಗಲ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪಿ. ವ್ಯಾಸ ಭಗವಾನ್, ಮೈನುದ್ದೀನ್ ಹುಂಡೇಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಎಸ್ಸಿಎಸ್ಪಿ/ಟಿಎಸ್‌ಪಿ 13 ಸಾವಿರ ಕೋಟಿ ಅನುದಾನ ‘ಗ್ಯಾರಂಟಿ’ಗೆ ಬಳಕೆ
ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ