ಸೌಜನ್ಯ ಕೇಸ್‌ ಮರುತನಿಖೆ ನಿರ್ಧಾರ ಸಿಬಿಐ/ಕೇಂದ್ರಕ್ಕೆ?

KannadaprabhaNewsNetwork |  
Published : May 22, 2026, 02:00 AM IST
ಮುಳಗುಂದದಲ್ಲಿ ನೀರಿನ ಕೊರತೆಯಿಂದಾಗಿ ಪಪಂಗೆ ಮುತ್ತಿಗೆ ಹಾಕಿದ ಮಹಿಳೆಯರು ಹಲಗೆ ಬಡಿಯುತ್ತಾ ಖಾಲಿ ಕೊಡಗಳನ್ನು ಪ್ರದರ್ಶನ ಮಾಡಿದರು. | Kannada Prabha

ಸಾರಾಂಶ

ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚಿತವಾಗಿರುವ ಧರ್ಮಸ್ಥಳದ ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ಸಂಬಂಧ ಕೇಂದ್ರ ತನಿಖಾ ವಿಭಾಗ (ಸಿಬಿಐ) ಅಥವಾ ಕೇಂದ್ರ ಸರ್ಕಾರ ಅಂತಿಮ ನಿರ್ಣಯ ತೆಗೆದುಕೊಳ್ಳಲಿ ಎಂದು ಸುಪ್ರೀಂ ಕೋರ್ಟ್‌ಗೆ ಅಭಿಪ್ರಾಯ ತಿಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚಿತವಾಗಿರುವ ಧರ್ಮಸ್ಥಳದ ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ಸಂಬಂಧ ಕೇಂದ್ರ ತನಿಖಾ ವಿಭಾಗ (ಸಿಬಿಐ) ಅಥವಾ ಕೇಂದ್ರ ಸರ್ಕಾರ ಅಂತಿಮ ನಿರ್ಣಯ ತೆಗೆದುಕೊಳ್ಳಲಿ ಎಂದು ಸುಪ್ರೀಂ ಕೋರ್ಟ್‌ಗೆ ಅಭಿಪ್ರಾಯ ತಿಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಸಂಬಂಧ ರಾಜ್ಯ ಗೃಹ ಹಾಗೂ ಕಾನೂನು ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸರ್ಕಾರ ಸಮಾಲೋಚನೆ ನಡೆಸಿದೆ. ಪ್ರಕರಣದ ವಿಚಾರಣೆ ಮುಂದಿನ ವಾರ ಮತ್ತೆ ಸುಪ್ರೀಂ ಕೋರ್ಟ್‌ ಮುಂದೆ ಬರಲಿದ್ದು, ಅಷ್ಟರಲ್ಲಿ ಕೋರ್ಟ್‌ಗೆ ತನ್ನ ನಿಲುವು ಏನೆಂದು ಸರ್ಕಾರ ಸ್ಪಷ್ಟಪಡಿಸಲಿದೆ ಎಂದು ಗೃಹ ಇಲಾಖೆ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

13 ವರ್ಷಗಳ ಹಿಂದೆಯೇ ಸೌಜನ್ಯ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ವೈದ್ಯಕೀಯ ಸೇರಿ ಎಲ್ಲ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಹೀಗಾಗಿ ಪ್ರಕರಣದ ಮರು ತನಿಖೆ ಬಗ್ಗೆ ಸಿಬಿಐ ಅಥವಾ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕಿದೆ ಎಂದು ಸರ್ಕಾರ ಹೇಳಲಿದೆ ಎನ್ನಲಾಗಿದೆ.

ಮತ್ತೆ ಕೋರ್ಟ್‌ಗೆ ಯಾಕೆ?:

ಸಾಕ್ಷಿಗಳ ಕೊರತೆ ಹಿನ್ನೆಲೆಯಲ್ಲಿ ಸೌಜನ್ಯ ಕೊಲೆ ಪ್ರಕರಣದ ಆರೋಪಿ ಸಂತೋಷ್ ರಾವ್ ನನ್ನು ಸಿಬಿಐ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಈ ತೀರ್ಪು ಬಳಿಕ ಮಗಳ ಹತ್ಯೆ ಪ್ರಕರಣದ ಮರು ತನಿಖೆಗೆ ಆದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೃತ ಸೌಜನ್ಯ ತಾಯಿ ಕುಸುಮಾವತಿ ಗೌಡ ಮೊರೆ ಹೋಗಿದ್ದರು. ಇನ್ನೊಂದೆಡೆ ಸಂತೋಷ್ ರಾವ್ ಖುಲಾಸೆಗೊಳಿಸಿದ್ದ ಕೆಳಹಂತದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಬಿಐ ಮತ್ತೊಂದು ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌, ಪ್ರಕರಣದ ಮರು ತನಿಖೆ ವಿಚಾರವಾಗಿ ಮುಂದಿನ ಕ್ರಮದ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ಗೆ ತನ್ನ ಅಭಿಪ್ರಾಯ ತಿಳಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.

2012ರಲ್ಲಿ ಧರ್ಮಸ್ಥಳ ಸಮೀಪದ ಉಜಿರೆಯ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು ಅಮಾನುಷವಾಗಿ ಅತ್ಯಾಚಾರ ಎಸಗಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಅಂದಿನ ರಾಜ್ಯ ಸರ್ಕಾರ, ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಆಗ ಕಾರ್ಕಳ ತಾಲೂಕಿನ ಕುಂದೂರು ಗ್ರಾಮದ ಸಂತೋಷ್‌ ರಾವ್‌ನನ್ನು ಸಿಐಡಿ ಬಂಧಿಸಿತ್ತು. 2013ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ವಿದ್ಯಾರ್ಥಿನಿ ಹತ್ಯೆಯನ್ನು ಸಿಬಿಐಗೆ ವಹಿಸಿತ್ತು. ಅಂತೆಯೇ ತನಿಖೆ ನಡೆಸಿದ ಸಿಬಿಐ, ಸಂತೋಷ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಕೊನೆಗೆ ಆತನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. ಈ ತೀರ್ಪು ಹೊರಬಿದ್ದ ಬಳಿಕ ಸೌಜನ್ಯ ಹತ್ಯೆ ಬಗ್ಗೆ ಮರು ತನಿಖೆಗೆ ಸಾರ್ವಜನಿಕ ವಲಯದಲ್ಲಿ ಪ್ರಬಲ ದನಿ ಕೇಳಿ ಬಂತು.

ಸಿಬಿಐ ತನಿಖೆ ನಡೆಸಲಿ-ಸರ್ಕಾರ:

ಸೌಜನ್ಯ ಕೊಲೆ ಪ್ರಕರಣದ ತನಿಖೆ ಬಗ್ಗೆ ಲೋಪವಾಗಿದೆ ಎಂದು ಸ್ಥಳೀಯ ಪೊಲೀಸರ ಮೇಲೆ ಆರೋಪ ಬಂದಿತ್ತು. ನಂತರ ಸಿಐಡಿ ಸಹ ತನಿಖೆ ನಡೆಸಿತು. ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದ ಬಳಿಕ ಪ್ರಕರಣದ ಕಡತಗಳನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಮರು ತನಿಖೆಗೆ ಸಿಐಡಿಗೆ ತಾಂತ್ರಿಕ ಸಮಸ್ಯೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಮರು ತನಿಖೆ ವಿಚಾರವಾಗಿ ಕೇಂದ್ರ ಸರ್ಕಾರ ಅಥವಾ ಸಿಬಿಐ ನಿರ್ಧರಿಸಲಿದೆ ಎಂದು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರವಾಡ ಮಹಾನಗರ ಪಾಲಿಕೆ ನಾಮಫಲಕ ಅಳವಡಿಕೆ!
ಉಪ್ಪಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿ: ಪುರುಷೋತ್ತಮಾನಂದಪುರಿ ಶ್ರೀ