ತಾಲೂಕಿನ ಮಣ್ಣೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ನಾಗೂರ ಗ್ರಾಮದ ಸರ್ಕಾರಿ ಗೋಮಾಳದ 27 ಎಕರೆ ಜಮೀನಿನಲ್ಲಿ ಈಗಾಗಲೇ ರಸ್ತೆಗೆ ಹೊಂದಿಕೊಂಡಂತೆ 4 ಎಕರೆ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ, 3.20 ಎಕರೆ ದಲಿತ ಬಾಂಧವರ ಅಭಿವೃದ್ಧಿಗೆ ಮಂಜೂರು ಮಾಡಲಾಗಿದೆ. ಇನ್ನೂ 15 ಎಕರೆ ಜವಳಿ ಪಾರ್ಕ್‌ಗೆ ಪ್ರಸ್ತಾವನೆ ತಯಾರಿಸಲಾಗಿದೆ.
ಬಸವರಾಜ ನಂದಿಹಾಳ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಮಣ್ಣೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ನಾಗೂರ ಗ್ರಾಮದ ಸರ್ಕಾರಿ ಗೋಮಾಳದ 27 ಎಕರೆ ಜಮೀನಿನಲ್ಲಿ ಈಗಾಗಲೇ ರಸ್ತೆಗೆ ಹೊಂದಿಕೊಂಡಂತೆ 4 ಎಕರೆ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ, 3.20 ಎಕರೆ ದಲಿತ ಬಾಂಧವರ ಅಭಿವೃದ್ಧಿಗೆ ಮಂಜೂರು ಮಾಡಲಾಗಿದೆ. ಇನ್ನೂ 15 ಎಕರೆ ಜವಳಿ ಪಾರ್ಕ್‌ಗೆ ಪ್ರಸ್ತಾವನೆ ತಯಾರಿಸಲಾಗಿದೆ.
ಇಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲು ಗ್ರಾಮಸ್ಥರ ವಿರೋಧವಿದೆ. ಈ ಕುರಿತು ಈಗಾಗಲೇ ತಹಸೀಲ್ದಾರ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಆದರೂ ಪಾರ್ಕ್ ನಿರ್ಮಾಣ ಪ್ರಸ್ತಾವ ಕೈಬಿಟ್ಟಿಲ್ಲ. ಜವಳಿ ಪಾರ್ಕ್ ನಿರ್ಮಾಣ ಕೈಬಿಟ್ಟು ಗ್ರಾಮಸ್ಥರಿಗೆ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸರ್ಕಾರ ಕೆರೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಪಕ್ಷಾತೀತವಾಗಿ ಆಗ್ರಹಿಸುತ್ತಿದ್ದಾರೆ. ಮಾಜಿ ಶಾಸಕ ಎಸ್.ಎಂ.ದೇಸಾಯಿ ಅವರ ಅವಧಿಯಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಅರೇಶಂಕರ ಕೆರೆಯಿಂದ ಗೋಮಾಳದಲ್ಲಿರುವ ಸರ್ಕಾರಿ ಬಾವಿಗೆ ನೀರು ಬರುವಂತೆ ಪೈಪ್ ಲೈನ್ ಮಾಡಲಾಗಿದೆ. ಗೋಮಾಳದಲ್ಲಿರುವ ಸರ್ಕಾರಿ ಬಾವಿಗೆ ಅರೇಶಂಕರ ಕೆರೆಯಿಂದ ನೀರು ಬಂದು ಬೀಳುತ್ತದೆ. ಬಾವಿಯಿಂದ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ತೆರೆದ ಭಾವಿ ಇರುವುದರಿಂದಾಗಿ ಕಸಕಡ್ಡಿ ಬೀಳುತ್ತಿದೆ. ಅರೇಶಂಕರ ಕೆರೆ ನೀರು ಕುಡಿಯುವುದರಿಂದ ನಮಗೆ ರೋಗ-ರುಜಿನ ಬರುತ್ತವೆಂಬ ಕಾರಣಕ್ಕೆ ಈ ನೀರನ್ನು ಬಳಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.ಬೇಕಿದೆ ಹೆಚ್ಚುವರಿ ಅನುದಾನ:
ಗೋಮಾಳದಲ್ಲಿ ಮಾಜಿ ಶಾಸಕ ದಿ.ಬಿ.ಎಸ್.ಪಾಟೀಲ ಸಾಸನೂರ ಅವರ ಅವಧಿಯಲ್ಲಿ ಒಂದು ಬಾಂದಾರ್ ನಿರ್ಮಾಣವಾಗಿದೆ. ಇದು ಅಂತರ್ಜಲ ಹೆಚ್ಚಾಗಲು ಪೂರಕವಾಗಲಿದೆ. ಈ ಬೇಸಿಗೆಯಲ್ಲಿ ಗೋಮಾಳದಲ್ಲಿರುವ ಬಾಂದಾರಕ್ಕೆ ಮುಳವಾಡ ಏತನೀರಾವರಿ ಯೋಜನೆಯ ಟಕ್ಕಳಕಿ ಉಪಕಾಲುವೆಯಿಂದ ನೀರು ಹರಿಸಿ ತುಂಬಿಸಲಾಗಿದೆ. ಬಾಂದಾರ ಇನ್ನಷ್ಟು ಎತ್ತರವಾಗುವ ಜೊತೆಗೆ ಪಿಚ್ಚಿಂಗ್, ಹೂಳೆತ್ತುವ ಅಗತ್ಯವಿದೆ. ಬಾಂದಾರದ ಹೂಳೆತ್ತಲು ಗ್ರಾಪಂನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ₹4 ಲಕ್ಷ ಅನುದಾನ ಇಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಹೊರಗೆ ದಿನಗೂಲಿ ಹೆಚ್ಚಳ ಇರುವುದರಿಂದ ಈ ಕಾಮಗಾರಿ ಉದ್ಯೋಗಕ್ಕೆ ಜನರು ಬರುವುದು ಸಾಧ್ಯತೆ ಕಡಿಮೆ. ಅದಕ್ಕಾಗಿ ಬಾಂದಾರದ ಹೂಳನ್ನು ಸರ್ಕಾರ ನೇರವಾದ ಅನುದಾನ ಬಿಡುಗಡೆ ಮಾಡುವ ಮೂಲಕ ಈ ಕಾರ್ಯ ಕೈಗೊಳ್ಳಬೇಕಿದೆ. ಕೆರೆ ನಿರ್ಮಾಣ ಮಾಡದಿದ್ದರೇ ಹೋರಾಟ
ಗೋಮಾಳದಲ್ಲಿ ಸರ್ಕಾರ ಕೆರೆ ನಿರ್ಮಾಣ ಮಾಡಿದರೆ ಸುಮಾರು 2 ಸಾವಿರ ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಅಲ್ಲದೇ ನಾಗೂರ ಗ್ರಾಮಕ್ಕೆಎಂದಿಗೂ ನೀರಿನ ಸಮಸ್ಯೆ ಉಂಟಾಗಲ್ಲ. ಒಂದು ವೇಳೆ ಸರ್ಕಾರ ಕೆರೆ ನಿರ್ಮಾಣ ಮಾಡಲು ಮುಂದಾಗದೇ ಹೋದರೆ ಪಕ್ಷಾತೀತವಾಗಿ ರೈತರು ವಂತಿಗೆ ಹಣದಿಂದ ಕೆರೆ ನಿರ್ಮಾಣ ಮಾಡಲು ತಯಾರು ಇದ್ದಾರೆ. ಇದಕ್ಕೆ ಸರ್ಕಾರ ಅವಕಾಶ ಕೊಡದೆ ಕೂಡಲೇ ಕೆರೆ ನಿರ್ಮಾಣ ಮಾಡಲು ಮುಂದಾಗಬೇಕು. ಇಲ್ಲದೇ ಹೋದರೆ ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಬಂದೇನವಾಜ ವಾಲೀಕಾರ, ರೇವಣಸಿದ್ದ ನಂದಿಹಾಳ, ಶಿವಾನಂದ ಡೋಣೂರ, ಸುರೇಶ ಲಮಾಣಿ, ನೇಮು ಲಮಾಣಿ, ಬಾಬು ನಂದಿಹಾಳ, ಶಿವಪ್ಪ ಹಚ್ಯಾಳ, ಶಿವಪ್ಪ ನಿಡಗುಂದಿ, ಇಬ್ರಾಹಿಂ ಚಪ್ಪರಬಂದ ಎಚ್ಚರಿಕೆ ನೀಡಿದ್ದಾರೆ.ತಾಲೂಕಿನ ನಾಗೂರ ಗ್ರಾಮದ 27 ಎಕರೆ ಗೋಮಾಳದಲ್ಲಿ 4 ಎಕರೆ ಪ್ರೌಢಶಾಲೆಗೆ, 3.20 ಎಕರೆ ಎಸ್ಸಿ, ಎಸ್ಟಿ ಬಾಂಧವರಿಗೆ ಆಶ್ರಯ ಮನೆ ನಿರ್ಮಿಸಲು, 15 ಎಕರೆ ಜವಳಿ ಪಾರ್ಕ್ ನಿರ್ಮಿಸಲು ಮಂಜೂರಾಗಿದೆ. ಜವಳಿ ಪಾರ್ಕ್ ಆರಂಭದ ಕುರಿತು ನಮಗೆ ಇದುವರೆಗೂ ಮಾಹಿತಿ ಬಂದಿಲ್ಲ. ಇಲ್ಲಿನ ಜನರು ಕೆರೆಗೆ ಬೇಡಿಕೆ ಇಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ.
-ವೈ.ಎಸ್.ಸೋಮನಕಟ್ಟಿ,
ತಹಸೀಲ್ದಾರರು, ಬಸವನಬಾಗೇವಾಡಿ.ಗೋಮಾಳದಲ್ಲಿ ಜವಳಿ ಪಾರ್ಕ್ ನಿರ್ಮಾಣದ ಬಗ್ಗೆ ಗ್ರಾಪಂಗೆ ಮಾಹಿತಿಯಿಲ್ಲ. ಈ ಜಾಗವು ತಹಸೀಲ್ದಾರ ವ್ಯಾಪ್ತಿಯಲ್ಲಿ ಬರುವುದರಿಂದಾಗಿ ನಮಗೆ ಅಷ್ಟಾಗಿ ಮಾಹಿತಿಯಿಲ್ಲ. ಈ ಜಾಗದಲ್ಲಿ ಸರ್ಕಾರಿ ಪ್ರೌಢಶಾಲೆ, ಎಸ್ಸಿ ಹಾಗೂ ಎಸ್ಟಿ ಜನಾಂಗದವರಿಗೆ ಆಶ್ರಯ ಮನೆ ಕಟ್ಟಲು ಜಾಗ ಮಂಜೂರಾಗಿದೆ ಎಂಬುವದು ಮಾತ್ರ ತಿಳಿದು ಬಂದಿದೆ
-ಎಸ್.ವೈ.ಕುಂಬಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಣ್ಣೂರ ಗ್ರಾಪಂ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.