ಶಿವಕುಮಾರ ಕುಷ್ಟಗಿ
ಕಳೆದ ಹಲವಾರು ವರ್ಷಗಳಿಂದ ನೆರೆಯ ಜಿಲ್ಲೆಗಳಾದ ಧಾರವಾಡ, ಹಾವೇರಿ, ಕೊಪ್ಪಳ ಮತ್ತು ಬಾಗಲಕೋಟೆಗಳು ಅಭಿವೃದ್ಧಿಯ ಸಿಂಹಪಾಲು ಪಡೆಯುತ್ತಿದ್ದರೆ, ಭೌಗೋಳಿಕವಾಗಿ ಇವುಗಳ ಮಧ್ಯದಲ್ಲಿರುವ ಗದಗ ಜಿಲ್ಲೆ ಮಾತ್ರ ಬಜೆಟ್ ಘೋಷಣೆಗಳಲ್ಲೇ ದಿನ ದೂಡುತ್ತಿದೆ. ಈ ಬಾರಿಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವರೇ ಎಂಬ ಕುತೂಹಲ ಮತ್ತಷ್ಟು ಹೆಚ್ಚಿದೆ.
ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಈ ಬಜೆಟ್‌ನಲ್ಲಿ ಉತ್ತರ ಸಿಗಬೇಕಿದೆ. ₹1040 ಕೋಟಿ ವೆಚ್ಚದ ಬಹುಗ್ರಾಮ ಯೋಜನೆ ಮತ್ತು ಜಲಜೀವನ್ ಮಿಷನ್ ಅಡಿ ನದಿ ಮೂಲದಿಂದ ನೀರು ಪೂರೈಸುವ ಕೆಲಸ ಇನ್ನೂ ಆಮೆಗತಿಯಲ್ಲಿದೆ. ಪ್ರತಿ ಜನವಸತಿಗೂ ನದಿ ಮೂಲದ ನೀರು ಒದಗಿಸಲು ವಿಶೇಷ ಅನುದಾನದ ಅವಶ್ಯಕತೆಯಿದೆ. ಇದರೊಂದಿಗೆ ಮಳೆಯಿಂದ ಹದಗೆಟ್ಟಿರುವ ಗ್ರಾಮೀಣ ರಸ್ತೆಗಳ ಸಮಗ್ರ ದುರಸ್ತಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕಿದೆ. ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ನದಿ ಮೂಲದಿಂದ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ದೊರೆಯಬೇಕಿದೆ.ರೈಲ್ವೆ ಮತ್ತು ರಸ್ತೆ ಸಂಪರ್ಕ: ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಅವಧಿಯಲ್ಲಿ ಚಾಲನೆ ಪಡೆದಿದ್ದ ಗದಗ- ಯಲವಗಿ ರೈಲ್ವೆ ಮಾರ್ಗ ಪ್ರಸ್ತುತ ಮೂಲೆಗುಂಪಾಗಿದೆ. ₹640 ಕೋಟಿ ಅನುದಾನದ ಈ ಯೋಜನೆಗೆ ಮರುಜೀವ ನೀಡಿ, ಗದಗದಲ್ಲೇ ಪ್ರತ್ಯೇಕ ಭೂಸ್ವಾಧೀನ ಕಚೇರಿ ಆರಂಭಿಸುವುದು ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದೆ. ಇನ್ನು ಅವಳಿ ನಗರದ ಟ್ರಾಫಿಕ್ ದಟ್ಟಣೆ ನಿವಾರಿಸಲು ಬೆಟಗೇರಿಯಿಂದ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ನಿರ್ಮಾಣವಾಗಬೇಕು. ಮುಖ್ಯವಾಗಿ ಸರಕು ವಾಹನಗಳ ಅನಗತ್ಯವಾಗಿ ಅವಳಿ ನಗರದಲ್ಲಿ ಸಂಚರಿಸುವ ಸ್ಥಿತಿ ಇದ್ದು, ಅದಕ್ಕಾಗಿ ಪ್ರತ್ಯೇಕ ಬೈಪಾಸ್ ರಸ್ತೆಗಳ ನಿರ್ಮಾಣಕ್ಕೆ ಈ ಬಾರಿ ಬಜೆಟ್‌ನಲ್ಲಿ ಆರ್ಥಿಕ ಆನೆಬಲ ಸಿಗಬೇಕಿದೆ.
ಬೇಕಿದೆ ಬಜೆಟ್ ಬಲ: ಸಚಿವ ಎಚ್.ಕೆ. ಪಾಟೀಲರ ಕನಸಿನ ಯೋಜನೆಯಾದ ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಕಳೆದ ಸಾಲಿನ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಬೇಕಿತ್ತು. ಅವರ ಕಾಲುನೋವಿನ ಹಿನ್ನೆಲೆ ಅಂದು ಅದನ್ನು ಇಲಾಖೆ ಸಚಿವರೇ ಚಾಲನೆ ನೀಡಿದ್ದರು. ಈ ಬಾರಿ ಬಜೆಟ್‌ನಲ್ಲಾದರೂ ಆ ಯೋಜನೆಗೆ ವಿಶೇಷ ಅನುದಾನ ಸಿಗುವ ಹೆಚ್ಚಿನ ನಿರೀಕ್ಷೆಯಿದೆ. 34 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವ್ಯಾಪಾರ ಕೇಂದ್ರ ಪ್ರಾರಂಭದ ಕನಸನ್ನು ಸಚಿವರು ಹೊತ್ತುಕೊಂಡಿದ್ದಾರೆ. ಅದು ಈಡೇರುತ್ತಾ ಎಂದು ಕಾದು ನೋಡಬೇಕು. ದೇಶದ ಗಮನ ಸೆಳೆದಿರುವ ಲಕ್ಕುಂಡಿಯ ಇತಿಹಾಸ ಸಾರುವ ಪ್ರವಾಸಿ ತಾಣವನ್ನಾಗಿಸುವ ಯೋಜನೆಗೆ ಆಡಳಿತಾತ್ಮಕ ಅಡೆತಡೆಗಳು ನಿವಾರಣೆಯಾಗಿದ್ದು, ಈಗ ಹಣಕಾಸಿನ ನೆರವಿನ ಅಗತ್ಯವಿದೆ. ಒಟ್ಟಾರೆ ಯೋಜನೆಗಳಿಂದ ವಂಚಿತವಾಗಿರುವ ಗದಗ ಜಿಲ್ಲೆಯು ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಸಿಗಲಿ ಎನ್ನುವ ನಿರೀಕ್ಷೆ ಎಲ್ಲರಲ್ಲಿದೆ.
ಮೂಲ ಸೌಕರ್ಯ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಬಾರಿ ಒಂದು ವಿಶೇಷ ಕೃಷಿ ಆಧರಿತ ಕೈಗಾರಿಕೆಯನ್ನು ಸ್ಥಾಪಿಸುವತ್ತ ಗಮನ ನೀಡಬೇಕು, ಅವಳಿ ನಗರದಲ್ಲಿನ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕು. ಉತ್ತಮ ಮತ್ತು ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವತ್ತ ಗಮನ ಹರಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ತಿಳಿಸಿದರು.