ರಾಜ್ಯದ ಜನತೆಗೆ ಸರ್ಕಾರದಿಂದ ವಿದ್ಯುತ್‌ ಶಾಕ್‌!

KannadaprabhaNewsNetwork |  
Published : Mar 05, 2026, 02:00 AM IST
ಪ್ರಹ್ಲಾದ ಜೋಶಿ. | Kannada Prabha

ಸಾರಾಂಶ

ವಿದ್ಯುತ್ ಕಂಪನಿಗಳಿಗೆ ಸರ್ಕಾರ ನೀಡಬೇಕಾದ ₹ 35 ಸಾವಿರ ಕೋಟಿ ಬಾಕಿ ನೀಡದ ಕಾರಣಕ್ಕೆ ಇಲಾಖೆಗಳು ತಮ್ಮ ನಷ್ಟವನ್ನು ಗ್ರಾಹಕರಿಂದ ಭರಣ ಮಾಡಿಕೊಳ್ಳಲು ವಿದ್ಯುತ್ ದರ ಏರಿಸುವ ಪ್ರಸ್ತಾವನೆ ಸಲ್ಲಿಸಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ:

ಸರ್ಕಾರ ವಿದ್ಯುತ್‌ ಬೆಲೆ ಏರಿಕೆ ಮಾಡುವ ಮೂಲಕ ಜನತೆಗೆ ವಿದ್ಯುತ್‌ ಶಾಕ್‌ ನೀಡಲು ಮುಂದಾಗಿದೆ. ಇದರೊಂದಿಗೆ ನೋಂದಣಿ ಶುಲ್ಕ, ಪೆಟ್ರೋಲ್-ಡಿಸೇಲ್ ಸೇರಿದಂತೆ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ದರ ಹೆಚ್ಚಿಸುವುದರೊಂದಿಗೆ ಸಾರ್ವಕಾಲಿಕ ದಾಖಲೆ ಬರೆದಿದೆ. ಇದು ಈ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಪರಿಣಾಮ ರಾಜ್ಯ ಸರ್ಕಾರ ಇಂದು ಸಂಪೂರ್ಣ ದಿವಾಳಿಯಾಗಿದೆ. ಗೃಹ ಜ್ಯೋತಿ ಯೋಜನೆಯಿಂದ ಜನರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ವಿದ್ಯುತ್ ಕಂಪನಿಗಳಿಗೆ ಸರ್ಕಾರ ನೀಡಬೇಕಾದ ₹ 35 ಸಾವಿರ ಕೋಟಿ ಬಾಕಿ ನೀಡದ ಕಾರಣಕ್ಕೆ ಇಲಾಖೆಗಳು ತಮ್ಮ ನಷ್ಟವನ್ನು ಗ್ರಾಹಕರಿಂದ ಭರಣ ಮಾಡಿಕೊಳ್ಳಲು ವಿದ್ಯುತ್ ದರ ಏರಿಸುವ ಪ್ರಸ್ತಾವನೆ ಸಲ್ಲಿಸಿವೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ಹಸಿರು ನಿಶಾನೆ ತೋರಿದ್ದು ನಾಚಿಕೆಗೇಡಿನ ಸಂಗತಿ ಎಂದರು.

70 ದಿನಕ್ಕೆ ಆಗವಷ್ಟು ತೈಲ:

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಪರಿಣಾಮ ಭಾರತದ ಮೇಲೆ ಆಗದ ರೀತಿಯಲ್ಲಿ ನಿಗಾ ವಹಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಸಂಬಂಧ ಹಗಲು-ರಾತ್ರಿ ಎನ್ನದೇ ದೇಶದ ಹಿತ ಕಾಯಲು ಪ್ರಯತ್ನಿಸುತ್ತಿದ್ದಾರೆ. ಯುದ್ಧದ ಕಾರಣಕ್ಕೆ ಯಾವುದೇ ಕೊರತೆ ಆಗಬಾರದು ಎಂಬ ಕಾರಣಕ್ಕೆ 37 ದೇಶಗಳೊಟ್ಟಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಗ್ಯಾಸ್, ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳು 70 ದಿನಕ್ಕಾಗುವಷ್ಟು ದಾಸ್ತಾನಿದೆ. ಹಂತ ಹಂತವಾಗಿ ಎಲ್ಲ ಬಿಕ್ಕಟ್ಟುಗಳು ಬಗೆ ಹರಿಯಲಿದ್ದು, ಇದೆಲ್ಲವನ್ನೂ ತಿಳಿದೂ ತಿಳಿಯದಂತೆ ವರ್ತಿಸುತ್ತಿರುವವರಿಗೆ ಮತ್ತು ವಿರೋಧಿಸುತ್ತಿರುವ ಮೂರ್ಖರಿಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.ದೆಹಲಿಗೆ ಬಂದಲ್ಲಿ ಸಹಾಯ ಮಾಡುವೆ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಆಂಧ್ರಪ್ರದೇಶ ಸರ್ಕಾರ ಇದೀಗ ಅಡ್ಡಗಾಲು ಹಾಕುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಈ ಹಿಂದೆ ಆಗಿದ್ದ ಆದೇಶದ ಪ್ರಕಾರ ನಡೆದುಕೊಳ್ಳಬೇಕು ಎಂಬ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆಲಮಟ್ಟಿ ಜಲಾಶಯ ಅಭಿವೃದ್ಧಿಗೆ ಪ್ರತಿ ವರ್ಷ ₹ 10 ಸಾವಿರ ಕೋಟಿ ಅನುದಾನ ನೀಡುವ ಭರವಸೆ ನೀಡಿತ್ತು. ಆದರೆ, ಅದು ಆಗಲೇ ಇಲ್ಲ. ಕಾಂಗ್ರೆಸ್ ಹೇಳಿದಂತೆ ನಡೆದುಕೊಂಡಿದ್ದರೆ ಇಂದು ಈ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ. ಅದಾಗ್ಯೂ ಡಿಕೆಶಿ ದೆಹಲಿಗೆ ಬಂದರೆ ಕರ್ನಾಟಕದ ಹಿತ ದೃಷ್ಟಿಯಿಂದ ಏನು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡಿಸುವ ಭರವಸೆ ನೀಡಿದರು.

ಮುಖ್ಯಮಂತ್ರಿಗಳು ಕತ್ತೆ ಕಾಯುತ್ತಿದ್ದರೆ?:

ಟೆಲಿಫೋನ್ ಕದ್ದಾಲಿಕೆಯ ಪ್ರಕರಣದ ಕುರಿತು ಉತ್ತರಿಸಿದ ಜೋಶಿ, ಇಂಟಲಿಜೆನ್ಸ್ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದು ಸ್ವತಃ ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಯಾತಕ್ಕಾಗಿ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ಇದು ಗಂಭೀರ ಆರೋಪ ಆಗಿರುವುದರಿಂದ ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕು. ಹಿಂದೆ ಕುಮಾರಸ್ವಾಮಿ ಸಿಎಂ ಇದ್ದಾಗಲೂ ಫೋನ್‌ ಕದ್ದಾಲಿಕೆ ಆಗಿದೆ ಎಂದು ಸಬೂಬು ಹೇಳುವ ಕಾಂಗ್ರೆಸ್ ನಾಯಕರು ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರು. ಆಮೇಲೂ ಬಹುಪಾಲು ಕಾಂಗ್ರೆಸ್ ಸರ್ಕಾರವೇ ಆಳ್ವಿಕೆ ನಡೆಸಿದೆ. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕತ್ತೆ ಕಾಯುತ್ತಿದ್ದರೆ ಎಂದು ಪ್ರಶ್ನಿಸಿದರು.

ಆಲ್ಕೋಹಾಲಿನ ಸಂಬಂಧ..

"ನಾನು ಮತ್ತು ಡಿ.ಕೆ. ಶಿವಕುಮಾರ ಇಬ್ಬರೂ ಹಾಲು-ಜೇನು ಇದ್ದಂತೆ " ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಇವರದ್ದು ಹಾಲು-ಜೇನಲ್ಲ, ಆಲ್ಕೋಹಾಲ್ ಮತ್ತು ಲಿಂಬೆಹಣ್ಣನ ಸಂಬಂಧ ಎಂದು ವ್ಯಂಗ್ಯವಾಡಿದ ಜೋಶಿ, ಅಧಿಕಾರಕ್ಕಾಗಿ ನಡೆದಿರುವ ಆಂತರಿಕ ಕಚ್ಚಾಟದ ಕಾರಣಕ್ಕೆ ರಾಜ್ಯ ಉಸ್ತುವಾರಿ ಸುರ್ಜೇವಾಲ್ ಕರ್ನಾಟಕಕ್ಕೆ ಬರುತ್ತಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಣ್ಣದೋಕುಳಿಯಲ್ಲಿ ಮಿಂದೆದ್ದ ಧಾರವಾಡಿಗರು!
ಸಮಾನತೆ ತರಲು ಶ್ರಮಿಸಿದವರು ಕೈವಾರ ತಾತಯ್ಯ: ಅರವಿಂದ