ಹಾವೇರಿ ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಲಿಂ. ಶಿವಲಿಂಗ ಶ್ರೀಗಳ 109ನೇ ಜಯಂತಿ ಹಾಗೂ ಜಾತ್ರಾ ಮಹೋತ್ಸವದ ಕಾರ್ಯಕರ್ತರ ಅಭಿನಂದನಾ ಸಮಾರಂಭ ನಡೆಯಿತು.
ಹಾವೇರಿ: ತನು, ಮನ, ಭಾವ ಶುದ್ಧಿಯಿಂದ ಮಾಡಿದ ಕಾಯಕವು ಸದಾ ಸ್ಮರಣೀಯವಾಗಿರುತ್ತದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ. ಭಾಸ್ಕರ ಹೇಳಿದರು.
ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಲಿಂ. ಶಿವಲಿಂಗ ಶ್ರೀಗಳ 109ನೇ ಜಯಂತಿ ಹಾಗೂ ಜಾತ್ರಾ ಮಹೋತ್ಸವದ ಕಾರ್ಯಕರ್ತರ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅನ್ನ, ಅರಿವು, ಆಶ್ರಯಗಳು ಶರಣ ಸಂಸ್ಕೃತಿಯ ಸಾಕ್ಷಿ ಪ್ರಜ್ಞೆಗಳು. ಅಂತಹ ಕಾಯಕ ಮಾಡಿದವರು ಬಸವಾದಿ ಶಿವಶರಣರು. ಕರ್ನಾಟಕದ ಮಠ-ಮಾನ್ಯಗಳು ಅವರ ದಾರಿಯಲ್ಲಿಯೇ ಸಾಗಿ ಸಮಾಜಕ್ಕೆ ಸಂಜೀವಿನಿಯಾಗಿವೆ. ಅಂತಹ ಶರಣ ಪರಂಪರೆಯು ಹಾವೇರಿಯ ಶ್ರೀ ಹುಕ್ಕೇರಿಮಠದ್ದಾಗಿದೆ ಎಂದು ಹೇಳಿದರು.ಆದರ್ಶವಿಲ್ಲದ ಬದುಕು ಬರಡು, ಸಾಧನೆ ಇಲ್ಲದ ಜೀವನ ನಿರರ್ಥಕ. ಸಾಧನೆಗೆ ಯಾವುದೇ ಅಡ್ಡಿ-ಆತಂಕಗಳು ನೆಪವಾಗಬಾರದು. ಮಠಮಾನ್ಯಗಳು ನೀಡುವ ಶಿಕ್ಷಣವು ನಮ್ಮನ್ನು ಸಾಧನೆಗೆ ಪ್ರೇರೇಪಿಸುತ್ತವೆ. ತಪಸ್ಸಿನ ಶಕ್ತಿಯ ಮೂಲಕ ಗಳಿಸಿದ ಶಿವಯೋಗ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಧಾರೆಯೆರೆದು ಅವರನ್ನು ಅಧ್ಯಾತ್ಮಿಕವಾಗಿ ಶ್ರೀಮಂತಗೊಳಿಸಿ ಆ ಮೂಲಕ ಸಮಷ್ಠಿಯ ಹಿತವನ್ನು ಸಾಮಾಜೀಕರಣಗೊಳಿಸಿದ ಲಿಂ. ಶಿವಲಿಂಗ ಸಾಮೀಜಿಗಳು ಸದಾ ಸ್ಮರಣೀಯರು ಎಂದರು.
ಅಧ್ಯಕ್ಷತೆ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ನಮಿಸುವ ಕೈಗಳಿಂತ ದುಡಿಯುವ ಕೈ ಶ್ರೇಷ್ಠ. ಶ್ರೀಮಠದಲ್ಲಿ ನಡೆದ ಶಾಲಾ ಸುವರ್ಣ ಮಹೋತ್ಸವ, ರಜತ ತುಲಾಭಾರ, ಜಾತ್ರಾ ಕಾರ್ಯಕ್ರಮಗಳು ನ ಭೋತೋ, ನ ಭವಿಷ್ಯತೆ ಎಂಬಂತೆ ನಡೆದಿವೆ. ಇದಕ್ಕೆಲ್ಲ ಶ್ರೀಮಠದ ಭಕ್ತರ ಸೇವಾ ಕೈಕಂರ್ಯವೇ ಕಾರಣವಾಗಿದೆ. ದಿನನಿತ್ಯ ಸಾವಿರಾರು ಜನರಿಗೆ ದಾಸೋಹ, ಹಾಗೂ ಇತರ ಎಲ್ಲ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದು ಹಾವೇರಿಯ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಾಯಿತು ಎಂದು ಹೇಳಿದರು.
ಇಂದು ಸಾವಿರ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಭೂಮಿಪೂಜೆ ನಡೆದಿದ್ದು, ಇದೇ ಶೈಕ್ಷಣಿಕ ವರ್ಷದಿಂದ ಪ್ರವೇಶಾತಿ ನಡೆಯಲಿದೆ. ಅನ್ನ, ಅರಿವು, ಆಶ್ರಯವು ಪ್ರತಿ ಮಠ-ಮಾನ್ಯಗಳ ಆಶಯವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಹುಕ್ಕೇರಿಮಠದ ಸರ್ವ ಸುಸಜ್ಜಿತ ವಸತಿ ನಿಲಯವು ಬಡ ಮಕ್ಕಳಿಗೆ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಸದಾಶಿವ ಶ್ರೀಗಳಿಗೆ ಭಾವೈಕ್ಯತಾ ಪ್ರಶಸ್ತಿ ನೀಡಲಾಯಿತು. ಜಾತ್ರಾ ಸಮಯದಲ್ಲಿ ಶ್ರಮವಹಿಸಿದ ನಗರಸಭೆಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜಾನಪದ ವಿವಿಯ ಪ್ರಸಾರಾಂಗ ಪ್ರಕಟಿಸಿದ ಅಂತೂರು-ಬೆಂತೂರಿನ ಕುಮಾರ ಸ್ವಾಮಿಗಳ ವಿರಚಿತ ವಚನಾನುಶೀಲತೆ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.