ಹಾವೇರಿ: ಅಧಿಕಾರ ಶಾಶ್ವತವಲ್ಲ, ಸೇವಾ ಮನೋಭಾವನೆಯಿಂದ ರಾಜಕೀಯಕ್ಕೆ ಬಂದಿರುವ ನಾನು ಕ್ಷೇತ್ರಕ್ಕೆ ಅಪರಿಚಿತ ಆಗಿದ್ದೆ. ಜನತೆಗೆ ಯಾವುದೇ ಕೊಡುಗೆ ಕೊಟ್ಟಿರಲಿಲ್ಲ. ಆದರೆ ಅವೆಲ್ಲವನ್ನೂ ಮೀರಿ ನನಗೆ ಬೆಂಬಲಿಸಿದ್ದೀರಿ. ಪ್ರೀತಿಯಿಂದ ಆಶೀರ್ವದಿಸಿದ್ದೀರಿ. ಪಕ್ಷ ನೀಡಿದ ಅವಕಾಶದಿಂದ ಬಹಳಷ್ಟು ಜನರನ್ನು ತಲುಪಲು ಸಾಧ್ಯವಾಗಿರುವುದು ನನಗೆ ಸಂತೃಪ್ತಿ ತಂದಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.ನಗರದ ಸಜ್ಜನರ ಪಂಕ್ಷನ್ ಹಾಲ್‌ನಲ್ಲಿ ಜರುಗಿದ ಹಾವೇರಿ ವಿಧಾನಸಭಾ ಕ್ಷೇತ್ರದ ಆತ್ಮಾವಲೋಕನ ಹಾಗೂ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ತಂತ್ರ-ಕುತಂತ್ರ ಸಹಜ. ರಾಜಕೀಯವನ್ನು ರಾಜಕೀಯವಾಗಿ ಪರಿಗಣಿಸಬೇಕು. ಒಮ್ಮತದ ಅಭ್ಯರ್ಥಿ ಎಂದು ನನಗೆ ನೀಡಿರುವ ಅಭಿಮಾನವೇ ದೊಡ್ಡ ಗೌರವ. ಚುನಾವಣೆಯಲ್ಲಿ ಆರೂವರೆ ಲಕ್ಷಕ್ಕೂ ಹೆಚ್ಚು ಮತ ನೀಡಿ ನನಗೆ ಆಶೀರ್ವದಿಸಿದ್ದೀರಿ. ಈ ಹಿನ್ನೆಲೆಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಶ್ರಮಿಸುವೆ. ಸದಾ ನಿಮ್ಮೊಂದಿಗಿರುವೆ ಎಂದರು.ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಕೈಹಿಡಿಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಹಾವೇರಿ ನಗರದ ೩೧ ವಾರ್ಡ್‌ಗಳಲ್ಲಿ ಪಕ್ಷಕ್ಕೆ ಹಿನ್ನಡೆ ಅನುಭವಿಸಿದ್ದೇವೆ. ನನ್ನ ಮನೆ ಇರುವ ಬೂತ್ ಇಜಾರಿ ಲಕಮಾಪುರದಲ್ಲಿಯೂ ಮತ ಕಡಿಮೆ ಬರಲು ಕಾರಣಗಳೇನು ಎಂಬುದೇ ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಯಾರನ್ನೂ ಅಲಕ್ಷಿಸದೇ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ಪಡೆದು ಮುನ್ನಡೆಯುವೆ ಎಂದರು. ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಗಣನೀಯ ಮತಗಳನ್ನು ನೀಡಿದೆ. ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶ ಎಂಬ ಭಿನ್ನಾಭಿಪ್ರಾಯ ತೊರೆದು ಕಡಿಮೆ ಮತಗಳು ಬರಲು ಕಾರಣಗಳೇನು ಎಂಬುದನ್ನು ಪರಿಶೀಲಿಸುವುದು ಅವಶ್ಯ. ಮುಂಬರುವ ದಿನಗಳಲ್ಲಿ ತಾಪಂ, ಜಿಪಂ ಚುನಾವಣೆ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸೋಣ ಎಂದರು.ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಮುಖಂಡರಾದ ಎಂ.ಎಂ. ಹಿರೇಮಠ, ಈರಪ್ಪ ಲಮಾಣಿ, ಎಸ್.ಎಸ್.ಖಾಜಿ, ಮಾದೇಗೌಡ ಗಾಜಿಗೌಡ್ರ, ಮಂಜುನಾಥ ಮಾಗಡಿ ಮಾತನಾಡಿದರು. ಹಾವೇರಿ ಶಹರ ಘಟಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಯುವ ಘಟಕದ ಅಧ್ಯಕ್ಷ ಪ್ರಸನ್ನ ಹಿರೇಮಠ, ಜಯಶ್ರೀ ಶಿವಪುರ, ದಾಸಪ್ಪ ಕರ್ಜಗಿ ಇದ್ದರು. ಲೋಕಸಭಾ ಚುನಾವಣೆಯಲ್ಲಿ ಯಾರು ಪಕ್ಷ ದ್ರೋಹ ಮಾಡಿರುವರೋ ಅವರು ಪಕ್ಷ ಬಿಟ್ಟು ಹೋಗಬಹುದು. ಪಕ್ಷಕ್ಕೆ ದ್ರೋಹ ಮಾಡಿದವರು ಹೆತ್ತ ತಾಯಿಗೆ ದ್ರೋಹ ಬಗೆದಂತೆ. ನಿಷ್ಕ್ರಿಯ ಕಾರ್ಯಕರ್ತರನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.